ಮಡಿಕೇರಿ ಜು.11 : ಕುತಂತ್ರದಿಂದ ಕೊಡವರ ಹತ್ಯೆಯಾದ ದೇವಟ್ ಪರಂಬು ಸ್ಮಾರಕ ಪ್ರದೇಶದಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಪುಷ್ಪ ನಮನ ಸಲ್ಲಿಸಿತು.
ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ದೇವಟ್ ಪರಂಬುವಿಗೆ ತೆರಳಿದ ಪ್ರಮುಖರು ಹಿರಿಯರಿಗೆ ಪುಷ್ಪನಮನ ಸಲ್ಲಿಸಿ ವಿವಿಧ ಹಕ್ಕೊತ್ತಾಯಗಳನ್ನು ಮಂಡಿಸಿದರು.
ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ ನೀಡಬೇಕು, ಕೊಡವ ಜನಾಂಗೀಯ ಬುಡಕಟ್ಟು ಜನಾಂಗಕ್ಕೆ ಎಸ್‍ಟಿ ಟ್ಯಾಗ್ ಕಲ್ಪಿಸಬೇಕು, ಕೊಡವ ಭೂಮಿ, ಭಾಷೆ, ಸಾಂಸ್ಕೃತಿಕ ಪರಂಪರೆಯ ಆರ್ಥಿಕ ಮತ್ತು ರಾಜಕೀಯ ಸ್ವಾತಂತ್ರ್ಯಕ್ಕಾಗಿ ಸಾಂವಿಧಾನಿಕ ಭದ್ರತೆ ಒದಗಿಸಬೇಕು, ಟಿಪ್ಪು ಸಂಚಿನಿಂದ ದೇವಟ್ ಪರಂಬುವಿನಲ್ಲಿ ನಡೆದ ನರಮೇಧದ ಸ್ಮರಣಾರ್ಥ ಅಂತರರಾಷ್ಟ್ರೀಯ ಸ್ಮಾರಕ ನಿರ್ಮಾಣ ಮಾಡಬೇಕು ಹಾಗೂ ಕೊಡವ ನರಮೇಧವನ್ನು ಯುಎನ್‍ಒ ಅಂತರರಾಷ್ಟ್ರೀಯ ಹತ್ಯಾಕಾಂಡದ ನೆನಪಿನ ಪಟ್ಟಿಯಲ್ಲಿ ಸೇರಿಸಬೇಕು ಎಂದು ನಾಚಪ್ಪ ಒತ್ತಾಯಿಸಿದರು.
ಸಿಎನ್‍ಸಿ ಪ್ರಮುಖರಾದ ಕಲಿಯಂಡ ಪ್ರಕಾಶ್, ಪಟ್ಟಮಾಡ ಕುಶ, ಅರೆಯಡ ಗಿರೀಶ್, ಮಂದಪಂಡ ಮನೋಜ್, ಕಾಟುಮಣಿಯಂಡ ಉಮೇಶ್ ಮತ್ತಿತರರು ಪುಷ್ಪ ನಮನ ಸಲ್ಲಿಸಿದರು. ಎನ್.ಯು.ನಾಚಪ್ಪ ಅವರು ಹಿರಿಯರ ಸ್ಮರಣಾರ್ಥ ಗಾಳಿಯಲ್ಲಿ ಗುಂಡು ಹಾರಿಸಿ ಗೌರವ ಅರ್ಪಿಸಿದರು.









