ಮಡಿಕೇರಿ ಜು.11 : ಕೃಷಿ ವಲಯದಲ್ಲಿ ಉತ್ಪಾದಕತೆ ಹೆಚ್ಚಿಸಲು ಹಾಗೂ ರೈತರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಉದ್ದೇಶದಿಂದ ಕೃಷಿ ಪ್ರಶಸ್ತಿ ಕೃಷಿ ಉತ್ಪಾದನಾ ಬಹುಮಾನ ಯೋಜನೆಯನ್ನು ಕೃಷಿ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುತ್ತದೆ. ಪ್ರತಿ ವರ್ಷದಂತೆ ಈ ವರ್ಷವೂ (2023-24) ಸಹ ರೈತ ಮಹಿಳೆಯರಿಂದ ಪ್ರತ್ಯೇಕವಾಗಿ ಬೆಳೆ ಸ್ಪರ್ಧೆಗೆ ಅರ್ಜಿ ಆಹ್ವಾನಿಸಲಾಗಿದೆ.
ನೋಂದಣಿ ಶುಲ್ಕ ಸಾಮಾನ್ಯ ರೈತ/ ರೈತ ಮಹಿಳೆಯರಿಗೆ 100 ರೂ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ರೈತ ಮಹಿಳೆಯರಿಗೆ 25 ರೂ, ಕನಿಷ್ಠ ಒಂದು ಎಕರೆ ಪ್ರದೇಶದಲ್ಲಿ ಸ್ಪರ್ಧೆ ಬೆಳೆ ಬೆಳೆದಿರಬೇಕು. ಸ್ವಂತ ಜಮೀನು ಇರುವ ಬಗ್ಗೆ ಪಹಣಿ ಪತ್ರ ಹೊಂದಿರಬೇಕು. ಯಾವುದೇ ಹಂತದಲ್ಲಿ ಒಮ್ಮೆ ಬಹುಮಾನ ಪಡೆದ ರೈತ/ ರೈತ ಕುಟುಂಬದವರು ಮುಂದಿನ ಐದು ವರ್ಷಗಳ ಅವಧಿಗೆ ಆ ಹಂತದ ಬೆಳೆ ಸ್ಪರ್ಧೆಯ ಬಹುಮಾನಕ್ಕೆ ಅರ್ಹನಾಗಿರುವುದಿಲ್ಲ. ಆದರೆ ಆ ಬೆಳೆಯ ಮೇಲಿನ ಹಂತದ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿರುತ್ತದೆ.
ತಾಲೂಕು ಮಟ್ಟದಲ್ಲಿ ಬಹುಮಾನ ಪಡೆದವರು ಜಿಲ್ಲಾ ಮಟ್ಟಕ್ಕೆ ಸ್ಪರ್ಧಿಸಬಹುದಾಗಿದೆ. ಮತ್ತು ಜಿಲ್ಲಾ ಮಟ್ಟದಲ್ಲಿ ಬಹುಮಾನ ಪಡೆದವರು ರಾಜ್ಯಮಟ್ಟಕ್ಕೆ ಸ್ಪರ್ಧಿಸಬಹುದಾಗಿದೆ ಆದರೆ ಕೆಳ ಹಂತದ ಸ್ಪರ್ಧೆಗೆ ಸ್ಪರ್ಧಿಸುವಂತಿಲ್ಲ. ಕಟಾವಿಗೆ 15 ದಿನಗಳ ಮುಂಚಿತವಾಗಿ ಸಂಬಂಧಿಸಿದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಕಟಾವು ದಿನಾಂಕ ತಿಳಿಸಬೇಕು.
ಬಹುಮಾನದ ಮೊತ್ತ ತಾಲೂಕು ಮಟ್ಟದಲ್ಲಿ ಪ್ರಥಮ ರೂ.15 ಸಾವಿರ, ದ್ವಿತೀಯ ರೂ.10 ಸಾವಿರ, ತೃತಿಯ ರೂ.5 ಸಾವಿರ, ಜಿಲ್ಲಾ ಮಟ್ಟ ಪ್ರಥಮ ರೂ.30 ಸಾವಿರ, ದ್ವಿತೀಯ ರೂ.25 ಸಾವಿರ, ತೃತೀಯ ರೂ.20 ಸಾವಿರ, ರಾಜ್ಯಮಟ್ಟ ಪ್ರಥಮ ರೂ.50 ಸಾವಿರ, ದ್ವಿತೀಯ ರೂ.40 ಸಾವಿರ, ತೃತಿಯ ರೂ.35 ಸಾವಿರ. ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛೆಯುಳ್ಳ ರೈತ/ ರೈತ ಮಹಿಳೆಯರು ಸಂಬಂಧಿಸಿದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಂಪರ್ಕಿಸಿ ನಿಗದಿತ ಅರ್ಜಿ ನಮೂನೆಯನ್ನು ಪಡೆದು ಕಂದಾಯ ಇಲಾಖೆಯಿಂದ ಪಡೆದ ಪಹಣಿ ಪತ್ರದೊಂದಿಗೆ ನಿಗದಿತ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್, 31 ಕೊನೆಯ ದಿನವಾಗಿದೆ. ನಂತರ ಬರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಬಾನಾ ಎಂ.ಶೇಖ್ ತಿಳಿಸಿದ್ದಾರೆ.









