ಮಡಿಕೇರಿ ಜು.14 : ಮಡಿಕೇರಿ ನಗರಸಭಾ ಸದಸ್ಯ ಹಾಗೂ ಮಡಿಕೇರಿ ಕೊಡವ ಸಮಾಜದ ನಿರ್ದೇಶಕ ಕಾಳಚಂಡ ಅಪ್ಪಣ್ಣ ಅವರ ಮೇಲಿನ ಹಲ್ಲೆಯನ್ನು ಖಂಡಿಸಿ ಮಡಿಕೇರಿ ಕೊಡವ ಸಮಾಜದ ನೇತೃತ್ವದಲ್ಲಿ ಜಿಲ್ಲೆಯ ಎಲ್ಲಾ ಕೊಡವ ಸಮಾಜ, ಗೌಡ ಸಮಾಜ ಹಾಗೂ ಇತರೆ ಹಲವು ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಪ್ರತಿಭಟನೆ ನಡೆಯಿತು.
ಮಡಿಕೇರಿಯ ಕೊಡವ ಸಮಾಜದಲ್ಲಿ ಸಮಾವೇಶಗೊಂಡ ವಿವಿಧ ಸಮಾಜದ ಪ್ರಮುಖರು ಹಾಗೂ ಕೊಡವರು, ಕೊಡವ ಭಾಷಿಕರು, ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಮೆರವಣಿಗೆ ಮೂಲಕ ತೆರಳಿ, ಜನರಲ್‍ತಿಮ್ಮಯ್ಯ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಹಲ್ಲೆ ನಡೆಸಿದವರ ವಿರುದ್ಧ ಘೋಷಣೆ ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.
ನಂತರ ಮೆರವಣಿಗೆಯಲ್ಲಿ ತೆರಳಿದ ಪ್ರತಿಭಟನಾಕರರು ಜಿಲ್ಲಾಧಿಕಾರಿ ಕಚೇರಿ ಎದುರು ಸಮಾವೇಶಗೊಂಡು, ಮಡಿಕೇರಿ ನಗರಸಭಾ ಸದಸ್ಯ ಹಾಗೂ ಮಡಿಕೇರಿ ಕೊಡವ ಸಮಾಜದ ನಿರ್ದೇಶಕ ಕಾಳಚಂಡ ಅಪ್ಪಣ್ಣ ಅವರ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಮುಂದೆ ಜಿಲ್ಲೆಯ ಯಾವುದೇ ಭಾಗದಲ್ಲಿ ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಎಚ್ಚರ ವಹಿಸಬೇಕು ಮತ್ತು ಹಲ್ಲೆ ಮಾಡಿದವರನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭ ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನುಮುತ್ತಪ್ಪ ಮಾತನಾಡಿ, ಕ್ಷುಲ್ಲಕ ಕಾರಣಕ್ಕೆ ಜನಪ್ರತಿನಿಧಿಯೊಬ್ಬರ ಮೇಲೆ ಹಾಡುಹಗಲೇ ಹಲ್ಲೆ ಮಾಡಿರುವುದು ಖಂಡನೀಯ ಅಲ್ಲದೆ ಮಳೆಹಾನಿ ವೀಕ್ಷಣೆ ಸಂದರ್ಭ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದು, ಹಲ್ಲೆ ನಡೆಸಿದವರನ್ನು ಗಡಿಪಾರು ಮಾಡಬೇಕು ಹಾಗೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಅವರು, ತಪ್ಪಿದ್ದಲ್ಲಿ ಬೃಹತ್ ಪ್ರತಿಭಟನೆ ಹಾಗೂ ಕೊಡಗು ಬಂದ್‍ಗೆ ಕರೆ ನೀಡಲಾಗುವುದೆಂದು ಎಚ್ಚರಿಕೆ ನೀಡಿದರು.
ಜೀವವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ಅಕ್ರಮ ಕಟ್ಟಡದ ವಿರುದ್ಧ ನಗರಸಭೆ ಪರಿಶೀಲನೆ ನಡೆಸಬೇಕು. ದಾಖಲಾತಿ ಇಲ್ಲದಿದ್ದರೆ ತೆರವುಗೊಳಿಸುವ ಕಾರ್ಯ ಆಗಬೇಕು ಎಂದರು.
ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಮುತ್ತಪ್ಪ, ಉಪಾಧ್ಯಕ್ಷ ನಂದಿನೆರವಂಡ ಚಿಯಣ್ಣ, ಕಾರ್ಯದರ್ಶಿ ಕನ್ನಂಡ ಸಂಪತ್, ನಿರ್ದೇಶಕರಾದ ನಂದಿನೆರವಂಡ ದಿನೇಶ್ ಹಾಗೂ ಮೂವೇರ ಜಯರಾಮ್, ಚೇಂಬರ್ ಆಫ್ ಕಾಮರ್ಸ್ ನಗರಾಧ್ಯಕ್ಷ ಎಂ.ಧನಂಜಯ ಹಾಗೂ ಗೌಡ ಸಮಾಜದ ಪದಾಧಿಕಾರಿಗಳು ಸೇರಿದಂತೆ ವಿವಿಧ ಸಂಘ, ಸಂಸ್ಥೆಯ ಪದಾಧಿಕಾರಿಗಳು ಹಾಜರಿದ್ದರು.
ನಂತರ ನಗರದ ನಗರಸಭೆಗೆ ತೆರಳಿದ ಪ್ರತಿಭಟನಾಕಾರರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಕಾನೂನು ವಿರುದ್ಧವಾಗಿ ಜಾಗವನ್ನು ಅಕ್ರಮಿಸಿಕೊಂಡಿದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಪೊಲೀಸ್ ಇಲಾಖೆ ಯಾವುದೇ ಪ್ರಭಾವಕ್ಕೆ ಒಳಗಾಗದೆ ಹಲ್ಲೆನಡೆಸಿದವರ ವಿರುದ್ಧ ರೌಡಿಶೀಟರ್ ದಾಖಲಿಸುವ ಮೂಲಕ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಿ ಒತ್ತಾಯಿಸಿದರು.