ಮಡಿಕೇರಿ ಜು.14 : ಮಡಿಕೇರಿ ನಗರಸಭೆ ವ್ಯಾಪ್ತಿಯ 1ನೇ ವಾರ್ಡ್‍ನ ನೂತನ ನ್ಯಾಯಾಲಯ, ಜಿಲ್ಲಾ ಪಂಚಾಯತ್ ಹಾಗೂ ಕೇಂದ್ರೀಯ ವಿದ್ಯಾಲಯಕ್ಕೆ ತೆರಳುವ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಮಡಿಕೇರಿ ನಗರಸಭೆ ವ್ಯಾಪ್ತಿಯ 1ನೇ ವಾರ್ಡ್ ವಿದ್ಯಾನಗರದಲ್ಲಿ ನೂತನ ಜಿಲ್ಲಾ ನ್ಯಾಯಾಲಯ ಮತ್ತು ಜಿಲ್ಲಾ ಪಂಚಾಯತ್ ಕಟ್ಟಡ ಹಾಗೂ ಕೇಂದ್ರೀಯ ವಿದ್ಯಾಲಯದ ಇದ್ದು, ನಗರದಿಂದ 3 ಕಿ.ಮೀ ಅಂತರವನ್ನು ಕಾಯ್ದುಕೊಂಡಿದೆ.
ಇಲ್ಲಿಗೆ ತೆರಳುವ ರಸ್ತೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಬಳಿಯಿಂದ ಕಿರಿದಾಗಿದ್ದು, ದ್ವಿಚಕ್ರ ಹಾಗೂ ತ್ರಿಚಕ್ರ ವಾಹನದ ಚಾಲಕರು ಹೊಂದಾಣಿಕೆಯಿಂದ ದ್ವಿಮುಖ ಸಂಚರಿಸುತ್ತಿರುತ್ತಾರೆ. ಇಲ್ಲಿನ ರಸ್ತೆ ಕಾಂಕ್ರೀಟಿಕರಣಗೊಂಡಿದ್ದರು ಲಘು ವಾಹನಗಳಿಗೆ ಮಾತ್ರ ದ್ವಿಮುಖ ಸಂಚಾರಕ್ಕೆ ಯೋಗ್ಯವಾಗಿದೆ. ಆದರೆ ಇತ್ತೀಚಿನ ಮಳೆಯಿಂದಾಗಿ ಮತ್ತು ಘನ ವಾಹನಗಳ ಸಂಚಾರದಿಂದಾಗಿ ವಿದ್ಯಾನಗರ ಸಮೀಪ ರಸ್ತೆ ಮದ್ಯೆ ಹೊಂಡ ಉಂಟಾಗಿದ್ದು, ರಸ್ತೆ ಒಡೆದು ಅಪಾಯದಂಚಿನಲ್ಲಿದೆ.
ಅಲ್ಲದೆ ಮಳೆಯ ಸಂದರ್ಭ ನೀರು ರಸ್ತೆಯ ಹೊಂಡದಲ್ಲಿ ಶೇಖರಣೆಗೊಂಡು ಸಂಚರಿಸಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ಮಾರ್ಗದಲ್ಲಿ ಕೆಎಸ್‍ಆರ್‍ಟಿಸಿ ಬಸ್‍ಗಳು ಸಂಚರಿಸುತ್ತಿದ್ದು, ರಸ್ತೆ ಕುಸಿದು ಬೀಳುವ ಸಾಧ್ಯತೆ ಇದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಅಪಘಾತ ಸಂಭವಿಸುವ ಮುನ್ನ ಎಚ್ಚೆತ್ತುಕೊಂಡು ಘನ ವಾಹನಗಳ ಸಂಚಾರವನ್ನು ನಿಷೇಧಿಸುವಂತೆ ಒತ್ತಾಯಿಸಿದ ಗ್ರಾಮಸ್ಥರು ಘನ ವಾಹನಗಳು
ನ್ಯಾಯಾಲಯ ಹಾಗೂ ಕೇಂದ್ರೀಯ ವಿದ್ಯಾಲಯದ ವರೆಗೆ ತೆರಳಲು ಗಾಳಿಬೀಡು ರಸ್ತೆಯನ್ನು ಉಪಯೋಗಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ವರದಿ : ದಿನು ಬಾರನ-ಮದೆ