ಮಡಿಕೇರಿ ಜು.14 : ಅಮ್ಮತ್ತಿಯ ಪುಲ್ಲೇರಿ ಗ್ರಾಮದ ಇಂಜಿಲಗೆರೆಯಲ್ಲಿ ಒಂಟಿ ಸಲಗ ದಾಂಧಲೆ ನಡೆಸಿದೆ. ಸ್ಥಳೀಯ ಬೆಳೆಗಾರ ಬಿ.ಎಸ್.ಮೋಹನ ಎಂಬುವವರ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆ ಹಲಸಿನ ಮರವೊಂದನ್ನು ಬೀಳಿಸಿದೆ.
ಮರ ಬಿದ್ದ ಪರಿಣಾಮ ಅನೇಕ ಕಾಫಿ ಗಿಡಗಳಿಗೆ ಹಾನಿಯಾಗಿದೆ. ಮರಕ್ಕೆ ಹಬ್ಬಿಸಲಾಗಿದ್ದ ಕಾಳುಮೆಣಸಿನ ಬಳ್ಳಿ ನಾಶವಾಗಿದೆ. ಸ್ಪಿಂಕ್ಲರ್ ಪೈಪ್ ಗಳು ಮುರಿದು ಹೋಗಿವೆ, ಬಾಳೆ ಗಿಡಗಳನ್ನು ಆನೆ ತಿಂದು ತೇಗಿದೆ. ಒಂಟಿ ಸಲಗ ತೋಟದ ತುಂಬೆಲ್ಲ ಓಡಾಡಿದ ಪರಿಣಾಮ ಗಿಡಗಳೆಲ್ಲವೂ ಹಾನಿಗೊಳಗಾಗಿದ್ದು, ಅಪಾರ ನಷ್ಟ ಉಂಟಾಗಿದೆ.
ಕಾಡಾನೆ ದಾಳಿ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಬೆಳೆಗಾರ ಮೋಹನ ನಮ್ಮಂತಹ ಸಣ್ಣ ಬೆಳೆಗಾರರಿಗೆ ಇದು ತುಂಬಲಾರದ ನಷ್ಟವಾಗಿದೆ ಎಂದರು. ಪರಿಹಾರಕ್ಕಾಗಿ ಇಲಾಖೆಯಿಂದ ಇಲಾಖೆಗೆ ಅರ್ಜಿ ಹಿಡಿದು ಅಲೆದಾಡಬೇಕಾಗಿದೆ. ಇದರಿಂದ ನಮ್ಮ ಸಮಯವೂ ವ್ಯರ್ಥ, ಹಣವೂ ವ್ಯರ್ಥ, ಪರಿಹಾರವೂ ಅಲ್ಪ ಮೊತ್ತದ್ದಾಗಿರುತ್ತದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಕಾಡಾನೆ ದಾಳಿ ಮಾಡಿದಾಗ ಅಲ್ಪ ಪರಿಹಾರ ನೀಡಿ ಕಣ್ಣೊರೆಸುವ ಬದಲು ವನ್ಯಜೀವಿಯ ಉಪಟಳ ತಡೆಗೆ ಶಾಶ್ವತ ಪರಿಹಾರ ಸೂಚಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.
ಇಂಜಿಲಗೆರೆಯಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿರುವ ಬಗ್ಗೆ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.