ನಾಪೋಕ್ಲು ಜು.10 : ವಿರಾಜಪೇಟೆಯಿಂದ ನಾಪೋಕ್ಲುವಿಗೆ ತೆರಳುತ್ತಿದ್ದ ಖಾಸಗಿ ಬಸ್ಸೊಂದು ರಸ್ತೆಯಂಚಿಗೆ ಸರಿದಿದೆ. ಮರಂದೋಡು ಗ್ರಾಮದ ಮೇರಿಯಂಡ ಮೊಟ್ಟೆ ಎಂಬಲ್ಲಿ ಬಸ್ಸು ಇನ್ನೊಂದು ವಾಹನಕ್ಕೆ ಸೈಡ್ ಕೊಡುವ ಸಂದರ್ಭ ರಸ್ತೆಯಂಚಿಗೆ ಸರಿದಿದ್ದು, ಪ್ರಯಾಣಿಕರು ಪರಾಗಿದ್ದಾರೆ.
ಬಸ್ಸಿನಲ್ಲಿ ಶಿಕ್ಷಕರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಸುಮಾರು 25 ಜನ ಇದ್ದು ಪಾಯದಿಂದ ಪಾರಾಗಿದ್ದಾರೆ. ಬಳಿಕ ಇತರ ವಾಹನದ ನೆರವಿನಿಂದ ಬಸ್ ಅನ್ನು ಸ್ಥಳದಿಂದ ತೆರವುಗೊಳಿಸಲಾಯಿತು.
ಇಲ್ಲಿನ ರಸ್ತೆ ಕಿರಿದಾಗಿದ್ದು, ವಾಹನ ಸಂಚಾರಕ್ಕೆ ಪದೇಪದೇ ಅಡ್ಡಿಯಾಗುತ್ತಿದೆ. ಮುಖಾಮುಖಿಯಾಗಿ ಎರಡು ವಾಹನಗಳು ಬಂದರೆ ಸಂಚರಿಸಲು ಸಾಧ್ಯವಾಗುತ್ತಿಲ್ಲ. ರಸ್ತೆಯನ್ನು ವಿಸ್ತರಿಸಬೇಕು. ತಪ್ಪಿದಲ್ಲಿ ರಸ್ತೆಯಂಚಿಗೆ ತಡೆಗೋಡೆ ನಿರ್ಮಾಣ ಮಾಡಬೇಕು ಎಂದು ಸ್ಥಳೀಯರಾದ ಚೋಯಮಾಡಂಡ ಹರೀಶ್ ಆಗ್ರಹಿಸಿದ್ದಾರೆ.
ಈ ಬಗ್ಗೆ ಲೋಕೋಪಯೋಗಿ ಇಲಾಖೆಗೆ ಹಾಗೂ ಗ್ರಾಮ ಪಂಚಾಯಿತಿಗೆ ಮನವಿ ಮಾಡಲಾಗಿತ್ತು. ಆದರೂ ಸಂಬಂಧಿಸಿದವರು ಸ್ಪಂದಿಸಿಲ್ಲ ಇದರಿಂದಾಗಿ ಸಮಸ್ಯೆ ಪುನರಾವರ್ತನೆಯಾಗುತ್ತಿದ್ದು, ಸಂಬಂಧಿಸಿದವರು ಜೀವಹಾನಿ ಆಗುವ ಮೊದಲು ಸೂಕ್ತ ಕ್ರಮ ಕೈಗೊಳ್ಳುವಂತೆ ಹರೀಶ್ ಒತ್ತಾಯಿಸಿದ್ದಾರೆ .
ವರದಿ : ದುಗ್ಗಳ ಸದಾನಂದ.