ವಿರಾಜಪೇಟೆ ಜು.15 : ನಗರದಲ್ಲಿ ವಾಹನ ಸಂಚಾರವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರಸ್ತೆಯ ಇಕ್ಕೆಲಗಳಲ್ಲಿ ವಾಹನ ನಿಲುಗಡೆಗೊಳಿಸಿ ತೆರಳುವುತ್ತಿರುವುದರಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪರದಾಡುವಂತಾಗಿದ್ದು, ಸೂಕ್ತ ರೀತಿಯಲ್ಲಿ ವಾಹನ ನಿಲುಗಡೆಗೊಳಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ವಿರಾಜಪೇಟೆ ನಗರದಲ್ಲಿ ವಾಹನಗಳ ದಟ್ಟಣೆ ಕಾಣಿಸಿಕೊಂಡಿದ್ದು, ಬೆಳಿಗ್ಗೆ ಮತ್ತು ಸಂಜೆ ವೇಳೆಗೆ ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರಿಗೆ ರಸ್ತೆ ಸಂಚಾರದಲ್ಲಿ ಅನಾನುಕೂಲವಾಗುತ್ತಿದೆ.
ವಿರಾಜಪೇಟೆ ನಗರದ ಮೂರ್ನಾಡು ರಸ್ತೆಯಿಂದ ಚಿಕ್ಕಪೇಟೆ ಜಂಕ್ಷನ್ ವರೆಗೆ ರಸ್ತೆಯ ಎರಡು ಬದಿಯಲ್ಲಿ ವಾಹನ ನಿಲುಗಡೆಗೊಳಿಸಿ ವಾಹನ ಚಾಲಕರು ಹಿಂದುರುಗುತ್ತಿದ್ದಾರೆ. ಸಂತ ಅನ್ನಮ್ಮ ಕಾಲೇಜು, ಸರ್ಕಾರಿ ಪದವಿ ಪೂರ್ವ ಮತ್ತು ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಜಯಪ್ರಕಾಶ್ ನಾರಾಯಣ್ ಪ್ರೌಢಶಾಲೆ, ಕಾವೇರಿ ಆಂಗ್ಲ ಮಾದ್ಯಮ ಶಾಲೆ ಮತ್ತು ತ್ರಿವೇಣಿ ಆಂಗ್ಲ ಮಾದ್ಯಮ ಶಾಲೆಗಳಿಗೆ ತೆರಳುವ ಶಾಲಾ ಕಾಲೇಜು ವಿದ್ಯಾರ್ಥಿಗಳು ಈ ಮಾರ್ಗದಲ್ಲೇ ತೆರಳಬೇಕಾಗಿದ್ದು, ಮಠದ ಗದ್ದೆಯ ಸಮೀಪದ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಬೃಹತ್ ವಾಹನಗಳು ನಿಲುಗಡೆಗೊಳ್ಳುತ್ತವೆ. ಅಲ್ಲದೆ ಇದೇ ಮಾರ್ಗದಲ್ಲಿ ವಿದ್ಯುತ್ ಇಲಾಖೆ ಟೆಲಿಕಾಂ ಇಲಾಖೆ, ಖಾಸಾಗಿ ಬೃಹತ್ ಮಳಿಗೆಗಳು ಕಾರ್ಯನಿರ್ವಹಿಸುತ್ತಿದೆ. ರಸ್ತೆಯ ಬದಿಗಳಲ್ಲಿ ವಾಹನ ನಿಲುಗಡೆಯಿಂದಾಗಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡಚಣೆಯಾಗಿದ್ದು, ವಿದ್ಯಾರ್ಥಿಗಳು ಮುಖ್ಯ ರಸ್ತೆಯಲ್ಲೇ ಸಂಚಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ದಿನನಿತ್ಯ ಬೆಳಿಗ್ಗೆ ಮತ್ತು ಸಂಜೆ ವಿದ್ಯಾರ್ಥಿಗಳು ಸಾವಿರಾರು ಸಂಖ್ಯೆಯಲ್ಲಿ ಒಡಾಡುತ್ತಿದ್ದು, ಶಾಲೆ ಮತ್ತು ಕಾಲೇಜುಗಳಿಗೆ ತೆರಳುವ ಭರದಲ್ಲಿ ಅನಾಹುತಗಳು ಸಂಭವಿಸುವ ಘಟನೆಗಳು ಎದುರಾಗಬಹುದು. ಈ ಸಮಯದಲ್ಲಿ ವಾಹನಗಳನ್ನು ನಿಯಂತ್ರಿಸಲು ಪೊಲೀಸು ಇಲಾಖೆಯು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಮಾಳೇಟಿರ ಬೋಪಣ್ಣ ಚಿಕ್ಕಪೇಟೆ ನಿವಾಸಿ: ಪಟ್ಟಣ ಪಂಚಾಯಿಂದ ಪುರಸಭೆಯಾಗಿ ಮೇಲ್ದರ್ಜೆಗೆ ಎರಿಕೆ ಕಂಡಿರುವ ನಗರವು, ದಿನಕಳೆದಂತೆ ವಾಹನ ಸಂಚಾರದಲ್ಲಿಯು ಪ್ರಗತಿ ಕಂಡಿದೆ. ಈ ಮಾರ್ಗದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಶಾಲಾ ಕಾಲೇಜು ವಿಧ್ಯಾರ್ಥಿಗಳು ದಿನನಿತ್ಯ ತೆರಳುತ್ತಾರೆ. ಮಠದ ಗದ್ದೆ ಸೇರಿದಂತೆ ಮುರ್ನಾಡು ಜಂಕ್ಷನ್ ನಿಂದ ಚಿಕ್ಕಪೇಟೆ ಜಂಕ್ಷನ್ ವರೆಗೆ ರಸ್ತೆಯ ಎರಡು ಬದಿಗಳಲ್ಲಿ ಸಾಲುಸಲಾಗಿ ಬೃಹತ್ ವಾಹನಗಳು ಸೇರಿದಂತೆ ಇತರ ವಾಹನಗಳು ನಿಲುಗಡೆಗೊಳ್ಳುತ್ತದೆ. ಇದರಿಂದ ವಿದ್ಯಾರ್ಥಿಗಳ ಸುಗಮ ಸಂಚಾರಕ್ಕೆ ಅಡಚರಣೆಯಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಇಲಾಖೆಯು ವಾಹನ ನಿಲುಗಡೆಯನ್ನು ಕ್ರಮಬದ್ದಗೊಳಿಸುವಂತೆ ಮಾಡಬೇಕು ಎಂದರು.
ಶ್ರೀಧರ್ ಪಿ.ಎಸ್.ಐ. ನಗರ ಪೊಲೀಸು ಠಾಣೆ ವಿರಾಜಪೇಟೆ: ನಗರ ವೃದ್ಧಿಯಾದಂತೆ ವಾಹನ ದಟ್ಟಣೆಯು ಹೆಚ್ಚುತ್ತದೆ. ಇದು ಸಾಮಾನ್ಯ. ಮೂರ್ನಾಡು ರಸ್ತೆಯಿಂದ ಚಿಕ್ಕಪೇಟೆ ಜಂಕ್ಷನ್ ವರೆಗೆ ವಾಹನ ಚಾಲಕರು ಮನಬಂದಂತೆ ವಾಹನ ನಿಲುಗಡೆಗೊಳಿಸಿ ತೆರಳುವುದು ಕಂಡು ಬಂದಿದೆ. ಇದರಿಂದ ವಾಹನ ಸಂಚಾರದಲ್ಲಿ ಅಡಚಣೆಯಾಗುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ ಮಠದ ಗದ್ದೆ ಮತ್ತು ಪೆಟ್ರೋಲ್ ಬಂಕ್ ಸಮೀಪದಲ್ಲಿ ಬೃಹತ್ ವಾಹನಗಳನ್ನು ನಿಲುಗಡೆಗೆ ನಿಷೇಧ ಮಾಡುವಂತೆ ಕ್ರಮ ವಹಿಸಲಾಗುತ್ತದೆ ಎಂದು ಹೇಳಿದರು.
ವರದಿ : ಕಿಶೋರ್ ಕುಮಾರ್ ಶೆಟ್ಟಿ