ಮಡಿಕೇರಿ ಜು.15 : ಸದೃಢ ಭಾರತದ ನಿರ್ಮಾಣಕ್ಕೆ ಸೇವಾದಳದ ಶಿಕ್ಷಣ ಅತ್ಯವಶ್ಯಕವಾಗಿದೆ. ಸೇವೆಗಾಗಿ ಬಾಳು ಎಂಬಂತೆ ಪ್ರತಿ ಶಾಲೆಯಲ್ಲಿ ಭಾರತ ಸೇವಾದಳದ ಶಾಖೆ ತೆರೆಯಬೇಕು ಎಂದು ಭಾರತ ಸೇವಾದಳದ ಜಿಲ್ಲಾ ಸಂಘಟಕ ಜಿ.ಈ.ರೇವಣ್ಣ ಕರೆ ನೀಡಿದರು.
ವಿರಾಜಪೇಟೆಯ ಜಯಪ್ರಕಾಶ್ ನಾರಾಯಣ ಪ್ರೌಢಶಾಲೆಯಲ್ಲಿ ನಡೆದ ಭಾರತ ಸೇವಾದಳದ ಪುನಶ್ಚೇತನ ಶಿಬಿರ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಂಘಟನೆಯನ್ನು ಬಲಗೊಳಿಸುವ ಉದ್ದೇಶ ಸಂಘಟನೆಗಳದ್ದಾಗಿರುತ್ತದೆ. ಆದರೆ ಭಾರತ ಸೇವಾದಳವು ಮಕ್ಕಳನ್ನು ಹಾಗೂ ಯುವಜನರನ್ನು ಸಂಘಟಿಸಿ ದೇಶದ ಪ್ರಗತಿಗೆ ಮತ್ತು ಭಾವೈಕ್ಯತೆಗೆ ಸಹಕರಿಸುತ್ತಿದೆ ಎಂದರು.
ದೇಶ ಗಳಿಸಿದ ಸ್ವಾತಂತ್ರ್ಯದ ಉಳಿವು ಇಂದಿನ ಅವಶ್ಯಕತೆಯಾಗಿದೆ. ಯುವ ಸಮೂಹದಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ರಾಷ್ಟ್ರಪ್ರೇಮ, ರಾಷ್ಟ್ರೀಯ ಭಾವೈಕ್ಯತೆ ಮತ್ತು ಸರ್ವಧರ್ಮ ಸಮಾನತೆಯ ಕೊರತೆ ಎದ್ದು ಕಾಣುತ್ತಿದೆ. ಇಂತಹ ಸನ್ನಿವೇಶದಲ್ಲಿ ರಾಷ್ಟ್ರಪ್ರೇಮವನ್ನು ಮೂಡಿಸಲು ಭಾರತ ಸೇವಾದಳ ಸಹಕಾರಿಯಾಗಿದೆ ಎಂದು ತಿಳಿಸಿದ ರೇವಣ್ಣ ಅವರು, ಸೇವಾದಳದ ಇತಿಹಾಸದ ಕುರಿತು ಮಾಹಿತಿ ನೀಡಿದರು.
ವಿರಾಜಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಪ್ರಕಾಶ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ದೇಶಪ್ರೇಮವನ್ನು ಬೆಳೆಸುವಲ್ಲಿ ಭಾರತ ಸೇವಾದಳ ಯಶಸ್ವಿಯಾಗಿದ್ದು, ಪ್ರತಿ ಶಾಲೆಯಲ್ಲೂ ಇದರ ಕಾರ್ಯ ಚಟುವಟಿಕೆ ಆರಂಭಗೊಳ್ಳಬೇಕು ಎಂದರು.
ಸೇವಾದಳದ ವಿರಾಜಪೇಟೆ ತಾಲ್ಲೂಕು ಸಮಿತಿ ಅಧ್ಯಕ್ಷ ಎ.ಸಿ.ದೇವಯ್ಯ, ಜಿಲ್ಲಾ ಸಮಿತಿ ಸದಸ್ಯ ಸಿ.ಡಿ.ಮಾದಪ್ಪ ಹಾಗೂ ತಾಲ್ಲೂಕು ದೈಹಿಕ ಪರಿವೀಕ್ಷಕರಾದ ಗಾಯಿತ್ರಿ ಅವರು ಕಾರ್ಯಕ್ರಮ ಉದ್ಘಾಟಿಸಿದರು.
ಶಿಕ್ಷಕಿ ಮೀರಾ ಅಶೋಕ್ ಗೌರವ ವಂದನೆ ಸಲ್ಲಿಸಿದರು. ತಾಲ್ಲೂಕು ದೈಹಿಕ ಶಿಕ್ಷಕರ ಸಮಿತಿಯ ಉಪಾಧ್ಯಕ್ಷ ತಮ್ಮಯ್ಯ ಸ್ವಾಗತಿಸಿ, ಸಮಿತಿಯ ಅಧ್ಯಕ್ಷ ಪಿ.ಎ.ಪ್ರವೀಣ್ ವಂದಿಸಿದರು. ಶಿಕ್ಷಕರಾದ ಜಿ.ಎಸ್.ಶೈಲ, ಎಸ್.ಪಿ.ಆರತಿ, ಬಿ.ಬಿ.ಜಾಜಿ, ಎ.ಕೆ.ನೇತ್ರಾವತಿ ಭಾರತ ಸೇವಾದಳದ ಪುನಶ್ಚೇತನ ಶಿಬಿರದ ಇತರ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.









