ಸಿದ್ದಾಪುರ ಜು.29 : ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪದ ಇಂಜಿಳಗೆರೆ ನಿವಾಸಿ ಟಿ.ಎ.ಪ್ರಕಾಶ್ ಎಂಬವರ ಮನೆ ಅಂಗಳದಲ್ಲಿ ಕಾಡಾನೆ ಪ್ರತ್ಯಕ್ಷಗೊಂಡು ಆತಂಕ ಸೃಷ್ಟಿಸಿದೆ.
ನಡುರಾತ್ರಿ ಮನೆಯ ಅಂಗಳದಲ್ಲಿ ಕಾಣಿಸಿಕೊಂಡ ಕಾಡಾನೆ ಪಕ್ಕದ ತೋಟಕ್ಕೆ ತೆರಳಿ ಬಾಳೆ, ಅಡಿಕೆ ಮತ್ತಿತರ ಸಸಿಗಳನ್ನು ಧ್ವಂಸ ಮಾಡಿದೆ.
ಈ ಭಾಗದಲ್ಲಿ ಕಾಡಾನೆಗಳ ದಾಂಧಲೆ ಮಿತಿ ಮೀರಿದ್ದು, ಕೃಷಿಕರ ತೋಟಕ್ಕೆ ನುಗ್ಗಿ ತೆಂಗಿನ ಸಸಿ, ಅಡಿಕೆ ಹಾಗೂ ಬಾಳೆ ಸಸಿಗಳನ್ನು ತಿಂದು ಹಾನಿಗೊಳಿಸುತ್ತಿವೆ. ಇದೇ ವ್ಯಾಪ್ತಿಯ ಬೆಳೆಗಾರ ಮೋಹನ್ ಎಂಬುವವರ ತೋಟಕ್ಕೆ ಲಗ್ಗೆಯಿಟ್ಟಿದ್ದ ಕಾಡಾನೆ ಹಲಸಿನ ಮರ ಸೇರಿದಂತೆ ಕಾಫಿ ಫಸಲನ್ನು ನಾಶಪಡಿಸಿತ್ತು.
ಕಾಡಾನೆ ಹಾವಳಿಯನ್ನು ತಡೆಯಲು ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಮ್ಮ ವ್ಯಾಪ್ತಿಯಲ್ಲಿ ಹಲವು ಸಮಯದಿಂದ ಕಾಡಾನೆ ಹಾವಳಿ ಮಿತಿ ಮೀರಿದೆ. ಈ ಬಗ್ಗೆ ಅರಣ್ಯ ಇಲಾಖೆಗೂ ಮಾಹಿತಿ ನೀಡಿದ್ದೇವೆ ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ತಕ್ಷಣವೇ ಇಲಾಖೆ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯ ಮಾಡುವಂತೆ ಒತ್ತಾಯಿಸಿದ್ದಾರೆ. :: ಟಿ.ಎ.ಪ್ರಕಾಶ್, ಸಣ್ಣ ಕೃಷಿಕ ಇಂಜಿಳಗೆರೆ ::