ಮಡಿಕೇರಿ ಜು.30 : ಮುಂಗಾರಿನ ಆರ್ಭಟ ಕೊನೆಗೊಂಡ ಹಂತದಿಂದಲೇ ಜಿಲ್ಲೆಯ ಕೃಷಿಕರ ಸಮಸ್ಯೆಗಳು ಆರಂಭವಾಗಿದ್ದು, ಉತ್ತು ಬಿತ್ತಿ ಮಾಡಿದ್ದ ಕೃಷಿ ಮಳೆೆ, ಪ್ರವಾಹದಿಂದ ನಾಶವಾಗಿದ್ದರೆ, ಹೆಚ್ಚಿನ ಮಳೆಯಿಂದ ಉದುರುತ್ತಿರುವ ಕಾಫಿ, ಕರಿಮೆಣಸಿನಿಂದ ಗ್ರಾಮೀಣರು ಕಂಗೆಟ್ಟಿದ್ದಾರೆ.
ಎಡೆಬಿಡದೆ ಸುರಿದ ಮಳೆಯಿಂದ ಕಿರು ತೊರೆಗಳು ಉಕ್ಕಿ ಹರಿದು ಮನೆಗಳಿಗೆ, ರಸ್ತೆಗಳಿಗೆ ಹಾನಿಯನ್ನುಂಟುಮಾಡಿದೆ. ಇದಕ್ಕೂ ಮಿಗಿಲಾಗಿ, ಕೃಷಿಯನ್ನೆ ನಂಬಿ ಬದುಕುತ್ತಿರುವ ಜಿಲ್ಲೆಯ ಗ್ರಾಮೀಣ ಭಾಗದ ಜನತೆಯ ಬದುಕು ಸಂಪೂರ್ಣ ಕತ್ತಲಲ್ಲಿ ಮುಳುಗುವಂತಾಗಿದೆ.
ಕಾವೇರಿ ನದಿ ಪಾತ್ರದ ಬಹುತೇಕ ಭಾಗಗಳಲ್ಲಿ ವಾರದ ಕಾಲ ಪ್ರವಾಹದ ನೀರು ಗದ್ದೆ ಬಯಲುಗಳನ್ನು ಆವರಿಸಿದ್ದರಿಂದ ಹಲವೆಡೆಗಳಲ್ಲಿ ನಾಟಿ ಮಾಡಿದ್ದ ಭತ್ತದ ಸಸಿಗಳು ಕೊಳೆತು ಹೋಗಿವೆ. ಹಲವೆಡೆಗಳಲ್ಲಿ ಪ್ರವಾಹದ ನೀರು ಹೊತ್ತು ತರುವ ಮನ್ಣು ಮರಳು ಕೃಷಿ ಭೂಮಿಯನ್ನು ಆವರಿಸುವುದರಿಂದ ನಿರೀಕ್ಷೆಯ ಫಸಲನ್ನು ಕೃಷಿಕ ಪಡೆಯಲು ಸಾಧ್ಯವಾಗದೆ ಇರುವ ದುರ್ಬರ ಸನ್ನಿವೇಶಗಳು ನಿಧಾನವಾಗಿ ಅನಾವರಣಗೊಳ್ಳಲಾರಂಭಿಸಿದೆ.
ಕೊಡಗಿನಲ್ಲಿ ಸಾಮಾನ್ಯವಾಗಿ ಜೂನ್ ತಿಂಗಳಿನಲ್ಲಿ ಮಳೆ ಆರಂಭವಾಗುತ್ತದೆ. ಹದವಾಗಿ ಸುರಿಯುವ ಮಳೆಯನ್ನು ಆಧರಿಸಿ, ಜೂನ್ ಕೊನೆಯ ಭಾಗದಲ್ಲಿ ಬೀಜ ಬಿತ್ತನೆ, ಜುಲೈ ತಿಂಗಳಲ್ಲಿ ನಾಟಿ ಕಾರ್ಯಗಳು ನಡೆಯುತ್ತವೆ.ನದಿ ಪಾತ್ರದ ಹೆಚ್ಚಿನ ಗದ್ದೆಬಯಲುಗಳಲ್ಲಿ ಪ್ರವಾಹವೇರ್ಪಡುವ ಸಾಧ್ಯತೆಗಳ ಹಿನ್ನೆಲೆ ತಡವಾಗಿ ನಾಟಿ ಕಾರ್ಯಮಾಡುವುದು ಹಿಂದಿನಿಂದ ನಡೆದು ಬಂದ ಪದ್ಧತಿ. ಆದರೆ, ಕಳೆದ ನಾಲ್ಕೆöÊದು ವರ್ಷಗಳಿಂದ ಮುಂಗಾರಿನ ಮಳೆ ಮೊದಲಿನಂತೆ ನಿಯಮಿತವಾಗಿ ಬಾರದೆ, ಹಠಾತ್ತನೆ ವಾರಗಟ್ಟಲೆ ಸುರಿಯುತ್ತಿರುವುದರಿಂದ ಕೃಷಿಕನ ಕೃಷಿ ಚಟುವಟಿಕೆಗಳನ್ನು ಹದಗೆಡಿಸಿ ಬದುಕನ್ನು ಹೈರಾಣಾಗಿಸುತ್ತಿದೆ.
ಬೆಳೆಗಳ ನಾಶ- ಹಾರಂಗಿ ಬಳಿಯ ಕೂಡಿಗೆ ಮೊದಲಾದೆಡೆಗಳಲ್ಲಿ ಮಳೆಗಿಂತಲು ಹೆಚ್ಚಾಗಿ, ಕಾವೇರಿಯ ಪ್ರವಾಹದೊಂದಿಗೆ ಹಾರಂಗಿಯಿಂದ ಹೊರ ಬಿಡುವ ಭಾರೀ ಪ್ರಮಾಣದ ನೀರಿನಿಂದ ಉಂಟಾಗುವ ಪ್ರವಾಹ ಕೃಷಿ ಭೂಮಿಗಳನ್ನು ಆವರಿಸಿ, ಭಾರೀ ಪ್ರಮಾಣದ ಕೃಷಿ ಹಾನಿಗೆ ಕಾರಣವಾಗುತ್ತಿದೆ.
ಹಾರಂಗಿ, ಕೂಡಿಗೆ ವಿಭಾಗದಲ್ಲಿ ಹೆಚ್ಚಾಗಿ ಭತ್ತ, ಜೋಳ, ಮರಗೆಣಸು ಹೀಗೆ ವಿವಿಧ ಬೆಳೆಗಳನ್ನು ಬೆಳೆಯಲಾಗುತ್ತದೆ. ಈ ಬಾರಿಯ ಕಾವೇರಿ ಮತ್ತು ಹಾರಂಗಿಯಿಂದ ಹೊರ ಬಿಟ್ಟ ನೀರಿನಿಂದ ಸೃಷ್ಟಿಯಾದ ಪ್ರವಾಹ ಇಂತಹ ಕೃಷಿಗಳನ್ನು ಆಪೋಶನ ತೆಗೆದುಕೊಂಡಿದ್ದು, ಬೆಳೆಗಾರರ ಬದುಕನ್ನು ಸಂಕಷ್ಟಕ್ಕೆ ದೂಡಿದೆ.
ಕಾವೇರಿ ಹಾಗೂ ಹಾರಂಗಿ ನದಿಗಳ ಜಲಾನಯನ ಪ್ರದೇಶಗಳಲ್ಲಿ ವ್ಯಾಪಕವಾಗಿ ಮಳೆ ಸುರಿದ ಹಿನ್ನೆಲೆಯಲ್ಲಿ ಕುಶಾಲನಗರ ಆಸುಪಾಸಿನಲ್ಲಿ ಕಾವೇರಿ ನದಿಯಲ್ಲಿ ಪ್ರವಾಹ ಏರ್ಪಟ್ಟು ತಗ್ಗು ಪ್ರದೇಶಗಳಿಗೆ ವ್ಯಾಪಿಸಿದೆ. ಇದರಿಂದಾಗಿ ರೈತರು ಬೆಳೆದಿದ್ದ ಅಪಾರ ಪ್ರಮಾಣದ ಮುಸುಕಿನ ಜೋಳ, ಶುಂಠಿ, ಅಡಿಕೆ ಮೊದಲಾದ ಬೆಳೆಗಳು ಜಲಾವೃತಗೊಂಡು ಅಪಾರ ನಷ್ಟ ಸಂಭವಿಸಿದೆ.
ಕಳೆದ ಐದಾರು ವರ್ಷಗಳಿಂದಲೂ ನಿರಂತರವಾಗಿ ಬಾಧಿಸುತ್ತಿರುವ ನದಿ ಪ್ರವಾಹದಿಂದಾಗಿ ಹೆಬ್ಬಾಲೆ, ಹುಲುಸೆ, ತೊರೆನೂರು, ಶಿರಂಗಾಲ, ಮಣಜೂರು, ಮೂಡಲಕೊಪ್ಪಲು ಗ್ರಾಮಗಳ ನದಿ ಭಾಗದ ರೈತರು ಕೈಗೊಂಡಿದ್ದ ಅಪಾರ ಬೆಳೆಗಳು ನೀರು ಪಾಲಾಗಿವೆ.
ಶಿರಂಗಾಲದ ಕೃಷಿಕ ವೇದ ಮೂರ್ತಿ ಎಂಬ ಕೃಷಿಕ ಒಂದು ಎಕರೆಯಲ್ಲಿ ಬೆಳೆದಿದ್ದ ಶುಂಠಿ ಫಸಲು, ಮೂರು ಎಕರೆ ಗದ್ದೆಯಲ್ಲಿ ಬೆಳೆದಿದ್ದ ಕಟಾವಿಗೆ ಬಂದಿದ್ದ ಮುಸುಕಿನ ಜೋಳ ಸಂಪೂರ್ಣ ಜಲಾವೃತವಾಗಿದ್ದು ಲಕ್ಷಾಂತರ ರೂ. ನಷ್ಟ ವಾಗಿದೆ.
ಹಾಗೆಯೇ ಹುಲುಸೆ ಗ್ರಾಮದಲ್ಲಿ ಕಪನಪ್ಪ, ಶಿವನಂಜಪ್ಪ ಎಂಬವರು ಐದು ಎಕರೆಯಲ್ಲಿ ಬೆಳೆದಿದ್ದ ಎರಡು ವರ್ಷದ ಅಡಿಕೆ ತೋಟ ನೀರು ಪಾಲಾಗಿದೆ.
ಹೀಗೆ ನದಿಯಂಚಿನ ಗ್ರಾಮಗಳ ಇನ್ನೂ ಅನೇಕ ರೈತರ ಕೃಷಿ ಫಸಲು ಜಲಾವೃತವಾಗಿದ್ದು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.
ಕಾಫಿ ಕೃಷಿಯ ಸಂಕಷ್ಟ-ಕಳೆದ ಸಾಲಿನ ಭಾರೀ ಮಳೆಯಿಂದ ಜಿಲ್ಲೆಯ ಕಾಫಿ ಉತ್ಪಾದನೆ ಗಣನೀಯ ಕುಸಿತ ಕಂಡಿತ್ತು. ಈ ಬಾರಿಯಾದರು ಉತ್ತಮ ಫಸಲನ್ನು ಪಡೆಯಬಹುದೆನ್ನುವ ಬೆಳೆಗಾರನ ನಿರೀಕ್ಷೆಗಳಿಗೆ ಸುಮಾರು ವಾರದ ಕಾಲ ಸುರಿದ ಭಾರೀ ಮಳೆ ತಣ್ಣೀರೆರಚುವ ಸಾಧ್ಯತೆಗಳು ಕಾಣಿಸಲಾರಂಭಿಸಿದೆ. ಭಾರೀ ಮಳೆಯಿಂದ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಕಾಫಿಯ ಹೀಚು ಗಾಯಿಗಳು ಕೊಳೆತು ಉದುರುತ್ತಿದ್ದು, ಫಸಲಿನ ಮೇಲೆ ದುಷ್ಪರಿಣಾಮ ಬೀರಲಾರಂಭಿಸಿದೆ.
ಒಂದೆಡೆ ಪ್ರಾಕೃತಿಕ ವಿಕೋಪಗಳಿಂದ ಜಿಲ್ಲೆಯ ಬೆಳೆಗಾರ ನಲುಗುತ್ತಿದ್ದರೆ, ಮತ್ತೊಂದೆಡೆ ವನ್ಯ ಜೀವಿಗಳ ಹಾವಳಿ ಕೃಷಿ ಚಟುವಟಿಕೆಗಳನ್ನು ಹಾಳುಗೆಡಹುತ್ತಿರುವುದು ಕೊಡಗಿನ ಕೃಷಿಕನ ಸಂಕಷ್ಟಗಳನ್ನು ಮತ್ತಷ್ಟು ವಿಸ್ತರಿಸಿದೆ.
Breaking News
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*
- *ಕೊಡಗು ಕೃಷಿ ವಿಜ್ಞಾನ ವೇದಿಕೆಯ ಬೆಳ್ಳಿ ಮಹೋತ್ಸವ : ನ.26 ರಂದು ರೈತ ಮೇಳ*
- *ಡಿ.1 ರಂದು ಗಾಳಿಬೀಡುವಿನಲ್ಲಿ ಬಾಣೆ ಹಬ್ಬ*
- *ನ.26 ರಂದು ಮಡಿಕೇರಿಯಲ್ಲಿ ಜಿಕೀರ್, ಜಾರಿ ಮತ್ತು ನಾತೆ-ರಸುಲ್” ಗಾಯನ*
- *ವಿಶ್ವಾಸ್ ವೆಂಕಟ್ ಗೆ ಟೇಬಲ್ ಟೆನ್ನಿಸ್ ನಲ್ಲಿ ರನ್ನರ್ ಪ್ರಶಸ್ತಿ*
- *ದೇಶ ದ್ರೋಹದ ಪ್ರಕರಣ ದಾಖಲಿಸಲು ಕೆ.ಜಿ.ಬೋಪಯ್ಯ ಆಗ್ರಹ*
- *ಬಿಜೆಪಿ, ಜೆಡಿಎಸ್ ಗೆ ಜನ ತಕ್ಕ ಪಾಠ ಕಲಿಸಿದ್ದಾರೆ : ಎಂ.ಎ.ಕಲೀಲ್ ಬಾಷ*