ಮಡಿಕೇರಿ, ಜು.30 : ಮಹಾತ್ಮ ಗಾಂಧೀಜಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವ ಹಾಗೂ ಆದರ್ಶಗಳು ಇಂದಿನ ಕಾಲಘಟ್ಟಕ್ಕೂ ಪ್ರಸ್ತುತ. ಉತ್ತಮ ಸಮಾಜ ನಿರ್ಮಾಣಕ್ಕೆ ಅವರ ಜೀವನಾದರ್ಶನಗಳನ್ನು ಎಲ್ಲರು ಅಳವಡಿಸಿಕೊಳ್ಳಬೇಕಾಗಿದೆ ಎಂದು ಮೈಸೂರು ಮುಕ್ತ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿ ಡಾ. ಬಿ.ಆರ್. ಕವಿತಾ ರೈ ಕರೆ ನೀಡಿದರು.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಶೈಕ್ಷಣಿಕ ಸಾಧನೆಗೈದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯಭಾಷಣಗಾರರಾಗಿ ಪಾಲ್ಗೊಂಡು ಮಾತನಾಡಿದರು.
ಕರಪತ್ರಗಳ ಮೂಲಕ ವಿಷಯಗಳನ್ನು ಒಂದೆಡೆಯಿಂದ ಮತ್ತೊಂದೆಡೆ ಸ್ವಾತಂತ್ರö್ಯ ಪೂರ್ವದಲ್ಲಿ ಸಾಗಿಸಿ ವಿಚಾರ ವಿನಿಮಯ ಮಾಡಿಕೊಳ್ಳಲಾಗುತಿತ್ತು. ಹೆರ್ಮನ್ ಮ್ಯೋಗ್ಲಿಂಗ್ ಮಂಗಳೂರು ಸಮಾಚಾರ ಆರಂಭಿಸಿ ಕರ್ನಾಟಕದಲ್ಲಿ ಪತ್ರಿಕೆ ಹುಟ್ಟಿಗೆ ಕಾರಣೀಭೂತರಾದರು. ಪತ್ರಕರ್ತರಿಗೆ ಜವಾಬ್ದಾರಿ, ನೈತಿಕತೆ ಇರಬೇಕು. ಇಂದು ವಿದ್ಯುನ್ಮಾನಗಳ ಆವಿಷ್ಕಾರದಿಂದ ಸುದ್ದಿಗಳು ಸುಲಭವಾಗಿ ಜನರಿಗೆ ದೊರೆಯುತ್ತದೆ. ಆದರೆ, ಯಾವುದೇ ಯಂತ್ರೋಪಕರಣವಿಲ್ಲದ ಸಮಯದಲ್ಲಿ ಪತ್ರಿಕೆಗಳು ಆರಂಭಗೊಂಡು ಸಮಾಜದ ಸುಧಾರಣೆಗೆ ಕಾರಣವಾದವು. ದೊಡ್ಡ ಮಟ್ಟದ ಮಾನನಷ್ಡ ಪ್ರಕರಣವನ್ನು ಪತ್ರಕರ್ತರು ಇಂದು ಎದುರಿಸುತ್ತಿದ್ದಾರೆ. ಇದರಿಂದ ನಿರ್ಭೀತ ಪತ್ರಿಕೋದ್ಯಮಕ್ಕೆ ತೊಡಕು ಉಂಟಾಗಿದೆ ಎಂದು ವಿಷಾದಿಸಿದರು.
ಮನುಷ್ಯನನ್ನು ಮನುಷ್ಯ ಅವಮಾನಿಸುವ, ಅನುಮಾನಿಸುವ ಕಾಲಘಟ್ಟದಲ್ಲಿ ಡಾ. ಅಂಬೇಡ್ಕರ್ ‘ಮೂಕನಾಯಕ’ ಸೇರಿದಂತೆ ಮೂರು ಪತ್ರಿಕೆಯನ್ನು ಹೊರತಂದು ಸಾಮಾಜಿಕ ಸುಧಾರಣೆಗೆ ಕಾರಣರಾದರು. ಜಾತಿವಿರೋಧ ಚಳುವಳಿಯನ್ನು ಅಕ್ಷರ ಕ್ರಾಂತಿ ಮೂಲಕ ಮಾಡಿದ ಹೆಗ್ಗಳಿಕೆ ಅಂಬೇಡ್ಕರ್ ಅವರದ್ದಾಗಿದೆ. ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಶಿಕ್ಷಣವಂತರಾದ ಪರಿಣಾಮ ಅಂಬೇಡ್ಕರ್ ಸಾಧನೆ ಮಾಡಿದ್ದಲ್ಲದೆ ಸಾಮಾಜಿಕ ಭದ್ರತೆಯನ್ನು ಎಲ್ಲ ವರ್ಗಕ್ಕೆ ನೀಡಿದರು. ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಒಳ್ಳೆಯ ಬದಲಾವಣೆ ತರಲು ಸಾಧ್ಯ ಎಂದು ಕವಿತಾ ರೈ ಪ್ರತಿಪಾದಿಸಿದರು.
ದಕ್ಷಿಣ ಆಫ್ರಿಕಾದಿಂದ ಗಾಂಧೀಜಿ ಅವರ ಸಂಪಾದಕತ್ವದ ಪತ್ರಿಕೆ ಭಾರತಕ್ಕೆ ಬರುತಿತ್ತು. ಇಡೀ ದೇಶದ ಹಿತಾಸಕ್ತಿ ಕಾಯುವ ನಿಟ್ಟಿನಲ್ಲಿ ಅವರು ಪತ್ರಿಕೆಗಳನ್ನು ಬಳಸಿಕೊಂಡರು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲೂ ಪತ್ರಿಕೆಯನ್ನು ಹೊರತಂದು ಜನರಲ್ಲಿ ದೇಶಭಿಮಾನ ಮೂಡಿಸಿದರು. ಸ್ವಾತಂತ್ರ್ಯ ಭಾರತದ ಪರಿಕಲ್ಪನೆ ಇಲ್ಲದ ಅನಕ್ಷರಸ್ಥರೇ ಹೆಚ್ಚಿದ್ದ ಸಂದರ್ಭ ದೇಶದಲ್ಲಿ ಹಲವರು ಪತ್ರಿಕೆ ಆರಂಭಿಸಿ ಜನರಿಗೆ ವಿಷಯ ತಿಳಿಸುವ ಪ್ರಯತ್ನ ಮಾಡಿದ್ದು ಗಮನಾರ್ಹ ಎಂದ ಅವರು, ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಗಾಂಧೀಜಿ ಅವರ ಪ್ರತಿಪಾದನೆಗಳು ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿಯೇ ಇರುತ್ತದೆ. ಈ ನಿಟ್ಟಿನಲ್ಲಿ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಅಂಬೇಡ್ಕರ್, ಗಾಂಧೀಜಿ ಸೇರಿದಂತೆ ಬಾಲಗಂಗಾಧರ ತಿಲಕ್, ದಾದಾ ಬಾಯಿ ನವರೋಜಿ ಅಂತವರು ಸಮಾಜ ಸುಧಾರಣೆಗೆ ಪತ್ರಿಕೆಗಳನ್ನು ಅಸ್ತçವನ್ನಾಗಿ ಮಾಡಿಕೊಂಡಿದ್ದರು ಎಂದು ವಿವರಿಸಿದರು.
ಶಕ್ತಿ ದಿನಪತ್ರಿಕೆ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗದೊಂದಿಗೆ ಪತ್ರಿಕಾರಂಗ ಪ್ರಜಾಪ್ರಭುತ್ವ ನಾಲ್ಕನೇ ಅಂಗವಾಗಿದೆ. ಪತ್ರಿಕಾ ರಂಗದಲ್ಲಿ ಕಾರ್ಯನಿರ್ವಹಿಸುವುದು ಸುಲಭದ ಮಾತಲ್ಲ. ಸವಾಲಿನ ನಡುವೆ ಕೆಲಸ ಮಾಡಬೇಕಾಗುತ್ತದೆ. ಸುದ್ದಿಗಳು ಸಮಾಜದ ಶುದ್ಧೀಕರಣ ಮಾಡುತ್ತವೆ. ಇಂದು ಪ್ರಪಂಚದ ವಿದ್ಯಮಾನಗಳನ್ನು ಅಂಗೈನಲ್ಲಿರುವ ಮೊಬೈಲ್‌ನಲ್ಲಿ ತಿಳಿದುಕೊಳ್ಳಬಹುದು. ಕ್ರಾಂತಿಕಾರಕ ಬದಲಾವಣೆ ಮಾಧ್ಯಮ ರಂಗದಲ್ಲಾಗಿದೆ. ಆದರೆ, ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಸುಳ್ಳು ಹೆಚ್ಚಾಗಿ ಹಬ್ಬುತ್ತಿದೆ. ಸತ್ಯಾಸತ್ಯೆಗಳನ್ನು ಪರಿಶೀಲಿಸಿ ಪತ್ರಕರ್ತರು ಜನರಿಗೆ ವಿಷಯ ಮುಟ್ಟಿಸಬೇಕು ಎಂದು ತಿಳಿಸಿದರು.
ಇಂದಿಗೂ ಪತ್ರಿಕೆಗಳ ಮೇಲಿರುವ ವಿಶ್ವಾಸರ್ಹತೆ ಕಡಿಮೆಯಾಗಿಲ್ಲ. ಬಾದ್ಯತೆ ಹಾಗೂ ಬದ್ಧತೆ ಇರುವುದರಿಂದ ಇದು ಸಾಧ್ಯವಾಗಿದೆ. ಸಮಾಜದ ಹಿತಾಸಕ್ತಿ ಕಾಪಾಡುವುದು ಪತ್ರಕರ್ತರ ಜವಾಬ್ದಾರಿಯಾಗಿದೆ. ವೃತ್ತಿಯ ಒತ್ತಡದಲ್ಲಿ ಪತ್ರಕರ್ತರು ಇರುತ್ತಾರೆ. ಸಮಾಜದ ಬದಲಾವಣೆ, ಸುಧಾರಣೆಗೆ ಹಾಗೂ ಆಡಳಿತ ಜನರ ನಡುವಿನ ಸಂಪರ್ಕ ಕೊಂಡಿಗಳಾಗಿ ಪತ್ರಿಕೆಗಳು ಕೆಲಸ ಮಾಡಬೇಕೆಂದು ಹೇಳಿದ ಅವರು, ಪತ್ರಿಕಾ ವಿತರಕರು ಹಲವು ಎಡರು, ತೊಡರುಗಳ ನಡುವೆ ಪತ್ರಿಕೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಇಂದು ವ್ಯವಸ್ಥೆ ಕಲುಷಿತಗೊಂಡಿದೆ. ಜನರಲ್ಲಿ ಸಮಾಜದ ಆಶಯಗಳು ಮರೆಯಾಗುತ್ತಿವೆ. ಅಚ್ಚುಮೊಳೆಯಿಂದ ಆರಂಭವಾದ ಪತ್ರಿಕೆ ಇಂದು ಡಿಜಿಟಲೈಸ್ಡ್ ಆಗಿದೆ. ಮಾಧ್ಯಮ ಇಂದು ಉದ್ಯಮವಾಗಿ ಪರಿವರ್ತನೆಗೊಂಡಿದೆ. ಜನರ ಧ್ವನಿಯಾಗಿ ಪತ್ರಕರ್ತರು ಇರಬೇಕು. ಸ್ಥಳೀಯ ಸಮಸ್ಯೆಗಳ ಬಗ್ಗೆ ಹೆಚ್ಚಾಗಿ ಗಮನ ಸೆಳೆಯಬೇಕು ಎಂದು ಕಿವಿಮಾತನಾಡಿದರು.
ಸಮಾಜ ಸೇವಕ ಟಿ.ಆರ್. ವಾಸುದೇವ್ ಮಾತನಾಡಿ, ಪ್ರತಿಭೆಗಳನ್ನು ಪ್ರೋತ್ಸಾಹಿಸುವುದರಿಂದ ಅವರನ್ನು ಹುರಿದುಂಬಿಸಿದಂತಾಗುತ್ತದೆ. ಅವರಲ್ಲಿ ಓದುವ ಹಠ, ಛಲ ಮೂಡುತ್ತದೆ. ಉತ್ತಮ ವ್ಯಕ್ತಿ ಸೃಷ್ಟಿಸುವಲ್ಲಿ ಶಿಕ್ಷಕರು ಮಹತ್ತರ ಪಾತ್ರ ವಹಿಸಿದ್ದಾರೆ. ತಿದ್ದಿತೀಡಿ ಸಮಾಜದ ಮುಖ್ಯವಾಹಿನಿಗೆ ತರುತ್ತಿದ್ದಾರೆ. ಮಾಧ್ಯಮಕ್ಕೆ ಜಗತ್ತನ್ನೇ ಬದಲಾಯಿಸುವ ಶಕ್ತಿ ಇದೆ ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳನ್ನು ಶಿಕ್ಷಣವಂತರಾಗಿ ಮಾಡುವ ಜವಾಬ್ದಾರಿ ಪೋಷಕರ ಹೆಗಲ ಮೇಲಿದೆ. ಶಿಕ್ಷಣದಿಂದ ವ್ಯಕ್ತಿತ್ವ ಬದಲಾವಣೆಯಾಗಿ ಉತ್ತಮ ಪ್ರಜೆಯಾಗಿ ಹೊರಹೊಮ್ಮಬಹುದು. ಪ್ರತಿಯೊಬ್ಬರು ಶಿಕ್ಷಣವಂತರಾಗಬೇಕು ಎಂದ ಅವರು, ಕಪೋಲಕಲ್ಪಿತ ವಿಚಾರವನ್ನು ಜನರಿಗೆ ನೀಡಬಾರದು. ಸುದ್ದಿ ನೀಡುವಾಗ ಸ್ಪಷ್ಟತೆ ಇರಬೇಕು. ಜನರಿಗೆ ನಿಖರ ಸುದ್ದಿ ನೀಡಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಂಗವಾಗಿ ಗೋಣಿಕೊಪ್ಪದ ಪತ್ರಿಕಾ ಏಜೆಂಟ್ ನಂಗಾರು ಜಮುನಾ ವಸಂತ್ ಹಾಗೂ ಸೋಮವಾರಪೇಟೆಯ ಶಿವಕುಮಾರ್ ಅವರನ್ನು ಸನ್ಮಾನಿಸಲಾಯಿತು. ಸಂಘದ ಸದಸ್ಯರ ಒಟ್ಟು 30 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.
ಪ್ರಾಧ್ಯಾಪಕಿ ಡಾ. ಕವಿತಾ ರೈ ಹಾಗೂ ಕೊಡವ ಸ್ನಾತಕೋತ್ತರದಲ್ಲಿ ಶೇ 79 ಅಂಕ ಗಳಿಸಿದ ಸಂಘದ ಸದಸ್ಯ ಬೊಳ್ಳಜಿರ ಬಿ. ಅಯ್ಯಪ್ಪ ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು.
ಕಾರ್ಯಕ್ರಮ ಸಂಚಾಲಕ ಹೆಚ್.ಜೆ. ರಾಕೇಶ್, ಸಹ ಸಂಚಾಲಕ ಜೈರುಸ್ ಥೋಮಸ್ ಅಲೆಗ್ಸಾಂಡರ್ ಹಾಜರಿದ್ದರು.
ಸಮೃದ್ಧಿ ಆಚಾರ್ಯ ಪ್ರಾರ್ಥಿಸಿ, ಪ್ರಧಾನ ಕಾರ್ಯದರ್ಶಿ ಬಾಚರಣಿಯಂಡ ಅನುಕಾರ್ಯಪ್ಪ ಸ್ವಾಗತಿಸಿ, ಖಜಾಂಚಿ ಆನಂದ್ ಕೊಡಗು ಹಾಗೂ ಸದಸ್ಯ ಚನ್ನನಾಯಕ್ ನಿರೂಪಿಸಿ, ಪ್ರಭುದೇವ್ ವಂದಿಸಿದರು.