ಸಿದ್ದಾಪುರ ಜು.31 : ಮಣಿಪುರ ಜನಾಂಗಿಕ ಸಂಘರ್ಷದ ಕುರಿತು ಜಿಲ್ಲೆಯ ಜನತೆಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಆ.6 ರಂದು ಸಿದ್ದಾಪುರದ ಗುಹ್ಯ ಅಗಸ್ತ್ಯೇಶ್ವರ ಸಹಕಾರ ಸಂಘದ ಸಭಾಂಗಣದಲ್ಲಿ ವಿಚಾರ ಸಂಕಿರಣ ನಡೆಯಲಿದೆ ಎಂದು ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷ ತಿಳಿಸಿದೆ.
ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಿಲ್ಲಾ ಕಾರ್ಯದರ್ಶಿ ಹೆಚ್.ಬಿ.ರಮೇಶ್, ಮಣಿಪುರದಲ್ಲಿ ಎರಡು ಜನಾಂಗದ ನಡುವೆ ನಡೆಯುತ್ತಿರುವ ಸಂಘರ್ಷದಲ್ಲಿ ಅಪಾರ ಪ್ರಮಾಣದಲ್ಲಿ ಆಸ್ತಿಪಾಸ್ತಿ ನಾಶವಾಗಿ ಪ್ರಾಣಹಾನಿ ಸಂಭವಿಸಿದರು ಕೇಂದ್ರ ಹಾಗೂ ಅಲ್ಲಿನ ಸರ್ಕಾರ ಘರ್ಷಣೆ ತಡೆಯುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿ ಅತ್ಯಾಚಾರ ಮಾಡಿರುವುದು ವಿಶ್ವದ ಮುಂದೆ ದೇಶ ತಲೆತಗ್ಗಿಸುವಂತಹ ಹೇಯ ಕೃತ್ಯವನ್ನು ಖಂಡಿಸಿದ ಅವರು, ಭೇಟಿ ಬಚಾವೋ-ಭೇಟಿ ಪಡಾವೋ ಅನ್ನುವ ಪ್ರಧಾನಿ ಘಟನೆ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜಾತ್ಯತೀತ ಶಕ್ತಿಗಳಿಂದ ಹೋರಾಟ ರೂಪಿಸುವ ಘಟನೆ ಬಗೆಗಿನ ವಿವರಣೆಯನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಸಂಕೀರ್ಣ ನಡೆಯಲಿದೆ. ಜಾತ್ಯತೀತ ನಿಲುವನ್ನು ಒಪ್ಪುವ ಪ್ರತಿಯೊಬ್ಬರು ಈ ಸಭೆಯಲ್ಲಿ ಹಾಜರಿದ್ದು, ಸಲಹೆ ನೀಡಬೇಕು ಎಂದು ಮನವಿ ಮಾಡಿದರು.
ಕಾರ್ಮಿಕ ಮುಖಂಡ ಮಹದೇವ್ ಮಾತನಾಡಿ, ಕುಕ್ಕಿ ಮತ್ತು ಮೇಟಿ ಸಮುದಾಯಗಳ ನಡುವೆ ನಡೆದ ಘಟನೆಯನ್ನು ಬಿಜೆಪಿಯವರು ಕ್ರಿಶ್ಚಿಯನ್, ಮುಸ್ಲಿಂ ಹಾಗೂ ದಲಿತರ ಮೇಲೆ ತಿರುಗಿಸಿದ್ದು, ಚರ್ಚ್, ಮಸೀದಿ ನಾಶಗೊಳಿಸಿ ಮಹಿಳೆಯರ ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬಂದಿದ್ದರು ಕೇಂದ್ರ ಸರ್ಕಾರ ಶಾಂತಿ ಸೌಹಾರ್ದತೆಗೆ ಮುಂದಾಗದೆ ಇರುವುದು ಖಂಡನಿಯ.
ತಕ್ಷಣವೇ ಅಲ್ಲಿನ ಸರಕಾರವನ್ನು ವಿಸರ್ಜಿಸಬೇಕು ಎಂದು ಒತ್ತಾಯಿದ ಅವರು, ಜಾತ್ಯತೀತ ಮನಸ್ಸುಗಳು ಒಂದುಗೂಡಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘಟನಾ ಸಮಿತಿ ಸದಸ್ಯ ಎ.ಸಿ.ಸಾಬು, ಮುಖಂಡರಾದ ಎನ್ .ಡಿ.ಕುಟ್ಟಪನ್ ಹಾಜರಿದ್ದರು.