ಮಡಿಕೇರಿ ಜು.31 : 2006 ರಲ್ಲಿ ಜಾರಿಗೆ ಬಂದಿರುವ ಆದಿವಾಸಿ ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನದ ಕುರಿತು ಪರಾಮರ್ಶೆ ಮಾಡಲು ಸುಪ್ರೀಂಕೋರ್ಟ್ ರಚಿಸಿರುವ ಸತ್ಯ ಶೋಧನಾ ಸಮಿತಿಯು ಮೈಸೂರು ಜಿಲ್ಲೆಯ ಹುಣುಸೂರು ತಾಲ್ಲೂಕಿನ ವಿವಿಧ ಹಾಡಿಗಳಿಗೆ ಭೇಟಿ ನೀಡಿತು.
ಕೊಳವಿಗೆ ಹಾಗೂ ಚಿಕ್ಕಹೆಜ್ಜೂರು ಹಾಡಿಗಳಿಗೆ ಭೇಟಿ ನೀಡಿದ ಸಮಿತಿಯ ಸದಸ್ಯರಾದ ಪರಿಸರ ತಜ್ಞ ವಿ.ಕೆ.ಬಹುಗುಣ, ಸುಪ್ರೀಂಕೋರ್ಟ್ ವಕೀಲ ರಿತ್ವಿಕ್‌ದತ್ತ ಹಾಗೂ ಸಂಜಯ್ ಕುಲಕರ್ಣಿ ಅವರುಗಳು ಸ್ಥಳೀಯ ನಿವಾಸಿಗಳಿಂದ ಮಾಹಿತಿ ಸಂಗ್ರಹಿಸಿದರು.
ಪಿರಿಯಾಪಟ್ಟಣ ತಾಲ್ಲೂಕಿನ ರಾಣಿಗೇಟ್ ಹಾಡಿ, ಎಚ್.ಡಿ.ಕೋಟೆ ತಾಲೂಕಿನ ಅನೆಮಾಳ ಮತ್ತು ಮಾಳದ ಹಾಡಿ ಸೇರಿದಂತೆ ವಿವಿಧ ಹಾಡಿಗಳ ನಿವಾಸಿಗಳು ನಮಗೆ ಅನ್ಯಾಯವಾಗಿದೆ, ಕಾಯ್ದೆಯಲ್ಲಿ ಸೂಚಿಸಿರುವಷ್ಟು ಭೂಮಿ ನೀಡಿಲ್ಲ, ಅರ್ಜಿಗಳು ವಿಲೇವಾರಿಯಾಗುತ್ತಿಲ್ಲ ಎಂದು ಅಸಹಾಯಕತೆ ತೋಡಿಕೊಂಡರು.
ಹಾಡಿ ಜನರ ಅಹವಾಲು ಸ್ವೀಕರಿಸಿದ ಸತ್ಯ ಶೋಧನಾ ಸಮಿತಿಯ ಸದಸ್ಯರು ವರದಿ ಆಧರಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಈ ಸಂದರ್ಭ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.









