ಮಡಿಕೇರಿ ಜು.31 : ಕಳೆದ 30 ವರ್ಷಗಳಿಂದ ಮಡಿಕೇರಿ ಆಕಾಶವಾಣಿಯ ಉದ್ಘೋಷಕಿಯಾಗಿ ಕಾರ್ಯನಿರ್ವಹಿಸಿ ಕೇಳುಗರ ಮೆಚ್ಚುಗೆಗೆ ಪಾತ್ರರಾಗಿದ್ದ ಮತ್ತು ತಮ್ಮದೇ ಆದ ಅಭಿಮಾನಿ ವೃಂದವನ್ನು ಹೊಂದಿದ್ದ ಕೂಪದಿರ ಶಾರದ ನಂಜಪ್ಪ ಅವರನ್ನು ಮುಕ್ಕೋಡ್ಲುವಿನ ವ್ಯಾಲಿ ಡ್ಯೂ ಕೊಡವ ಕಲ್ಚರಲ್ ಅಸೋಸಿಯೇಷನ್ ಸಂಘಟನೆ ವಿಭಿನ್ನ ಹಾಗೂ ಸಂಭ್ರಮದಿಂದ ಬೀಳ್ಕೊಟ್ಟಿತು.
ಅಸೋಸಿಯೇಷನ್ ಅಧ್ಯಕ್ಷ ಹಂಚೆಟ್ಟಿರ ಮನುಮುದ್ದಪ್ಪ ಹಾಗೂ ಸಂಗಡಿಗರು ಕೊಡವ ಸಾಂಪ್ರದಾಯಿಕ ಉಡುಗೆ ತೊಟ್ಟು, ದುಡಿಕೊಟ್ಟು ಹಾಡಿನೊಂದಿಗೆ ಆಕಾಶವಾಣಿ ನಿಲಯದ ದ್ವಾರದವರೆಗೆ ಮೆರವಣಿಗೆ ಮೂಲಕ ಶಾರದ ನಂಜಪ್ಪ ಅವರನ್ನು ಕರೆತಂದು ಬೀಳ್ಕೊಟ್ಟರು.
ಈ ಸಂದರ್ಭ ಮಾತನಾಡಿದ ಶಾರದ ನಂಜಪ್ಪ, ಕಳೆದ 30 ವರ್ಷಗಳಿಂದ ಸಂಸ್ಕೃತಿ, ಆಚಾರ, ವಿಚಾರ, ಪದ್ಧತಿ, ಪರಂಪರೆ ಸೇರಿದಂತೆ ವಿವಿಧ ವಿಭಿನ್ನ ಕಾರ್ಯಕ್ರಮಗಳನ್ನು ನಿರೂಪಿಸಿರುವುದು ತೃಪ್ತಿ ತಂದಿದೆ. ಎಲ್ಲಾ ವರ್ಗದ ಜನ ಹಾಗೂ ಆಕಾಶವಾಣಿಯ ಸಿಬ್ಬಂದಿಗಳು ನನ್ನನ್ನು ಅಭಿಮಾನದಿಂದ ಕಾಣುತ್ತಿರುವುದನ್ನು ಕಂಡು ಹೃದಯ ತುಂಬಿ ಬಂದಿದೆ. ಈ ರೀತಿಯ ಬೀಳ್ಕೊಡುಗೆಯ ಕ್ಷಣ ಸಂತಸ ತಂದಿದ್ದು, ಅಭಿಮಾನ ತೋರಿದ ಸರ್ವರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಮಡಿಕೇರಿ ಆಕಾಶವಾಣಿಯ ಉದ್ಘೋಷಕ ಸುಬ್ರಾಯ ಸಂಪಾಜೆ ಮಾತನಾಡಿ, ಮುಕ್ಕೋಡ್ಲುವಿನ ವ್ಯಾಲಿ ಡ್ಯೂ ಕೊಡವ ಕಲ್ಚರಲ್ ಅಸೋಸಿಯೇಷನ್ ಶಾರದಾ ಅವರನ್ನು ಕೊಡವ ಸಂಪ್ರದಾಯದಂತೆ ಬೀಳ್ಕೊಟ್ಟಿರುವುದು ಶ್ಲಾಘನೀಯ ಮತ್ತು ಆಕಾಶವಾಣಿಯ ಮಟ್ಟಿಗೆ ಇದು ಅತ್ಯಂತ ಅಪರೂಪದ ಕ್ಷಣವಾಗಿದೆ ಎಂದರು.
ಭಾಷೆ, ಸಂಸ್ಕೃತಿ, ಕಾರ್ಯಕ್ರಮ ಮತ್ತು ಆಕಾಶವಾಣಿ ನಿಲಯದ ಮೇಲೆ ಇಟ್ಟಿರುವ ಪ್ರೀತಿ, ಗೌರವ ಮುಂದಿನ ದಿನಗಳಲ್ಲಿಯೂ ಇದೇ ರೀತಿ ಇರಲಿ ಎಂದು ಹೇಳಿದರು.
ಅಸೋಸಿಯೇಷನ್ ನ ಪದಾಧಿಕಾರಿಗಳು, ಆಕಾಶವಾಣಿ ತಾಂತ್ರಿಕ ವಿಭಾಗ, ಆಡಳಿತ ವಿಭಾಗದ ಪ್ರಮುಖರು ಹಾಗೂ ಸುದ್ದಿವಾಚಕರು ಸೇರಿದಂತೆ ಹಲವರು ಹಾಜರಿದ್ದರು.
ಇದೇ ಸಂದರ್ಭ ಯುಕೋ ಸಂಘಟನೆಯ ಅಧ್ಯಕ್ಷ ಮಂಜು ಚಿಣ್ಣಪ್ಪ ಅವರು ಶಾರದ ನಂಜಪ್ಪ ಅವರಿಗೆ ಹೂಗುಚ್ಚ ನೀಡಿ ಶುಭ ಹಾರೈಸಿದರು.









