ಮಡಿಕೇರಿ ಆ.1 : ಭಾರತದ ವಿಭಿನ್ನ ಸ್ಥಾನಗಳಿಂದ ಈಶ್ವರೀಯ ಸೇವೆಯಲ್ಲಿ ಸಮರ್ಪಿತರಾಗಿರುವ ರಾಜಯೋಗಿ ಶಿಕ್ಷಕಿಯರು, ಕುಮಾರ ಕುಮಾರಿಯರು 50 ಜನರ ತಂಡ ತಮ್ಮ ತಮ್ಮ ಸ್ಥಾನಗಳ ಸಂಸ್ಕೃತಿಗಳ ಮಾಹಿತಿಗಳನ್ನು ರಷ್ಯಾದ ಸಹೋದರ ಸಹೋದರಿಯರಿಗೆ ಅರಿವು ಮೂಡಿಸಿದರು.
ರಷ್ಯಾದ ಮಾಸ್ಕೋ ಮತ್ತು ಸೇಂಟ್ ಪೀಟರ್ಸ್ ಬರ್ಗ್ ಗೆ ಎರಡು ವಾರಗಳ ಪ್ರವಾಸ ಕೈಗೊಂಡ ಬ್ರಹ್ಮಾಕುಮಾರೀಸ್ ಮಡಿಕೇರಿ ಶಾಖೆಯ ಬ್ರಹ್ಮಾಕುಮಾರಿ ಧನಲಕ್ಷ್ಮಿ ಅಕ್ಕನವರು ಹಾಗೂ ರಾಜಯೋಗಿ ಶಿಕ್ಷಕಿಯರು, ಕುಮಾರ ಕುಮಾರಿಯರು ಅಲ್ಲಿಯ ಸಂಸ್ಕೃತಿ ಕಲೆಗಳ ಬಗ್ಗೆ ವಿಶೇಷ ಅನುಭವ ಪಡೆದರು.
ಮಡಿಕೇರಿ ಶಾಖೆಯ ಬ್ರಹ್ಮಾಕುಮಾರಿ ಧನಲಕ್ಷ್ಮಿ ಅಕ್ಕ ಮಾತನಾಡಿ, ಅಲ್ಲಿಯ ಜನರ ಕಲಾಭಿಮಾನ ಅಧ್ಯಾತ್ಮ ಪ್ರೀತಿ ಕೇಂದ್ರಗಳ ಸೇವಾ ಕಾರ್ಯಗಳು ವರ್ಣನಾತೀತ. ಭಾರತದ ಬಗ್ಗೆ ಇರುವ ಅಭಿಮಾನ ಪ್ರೀತಿ ಅವರ ಮಾತು ಸತ್ಕಾರಗಳಲ್ಲಿ ಅನುಭವವಾಗುತ್ತಿತ್ತು. ಹಿಂದಿ ಭಾಷೆ ಕಲಿತು ಮಾತನಾಡುವುದು, ಹಾಡುವುದು, ಭಾರತೀಯ ನೃತ್ಯಗಳು ಅಲ್ಲಿಯ ಸಹೋದರ ಸಹೋದರಿಯರು ಆತ್ಮೀಯತೆಯಿಂದ ಕಲಿತು ಎಲ್ಲರ ಮುಂದೆ ಪ್ರದರ್ಶಿಸಿದರು. ಕಲೆಗೆ ದೇಶ ಭಾಷೆಗಳ ಬಂಧನವಿಲ್ಲ ಎಂಬ ಅರಿವು ಮೂಡಿಸಿದರು ಎಂದರು.