ಮಡಿಕೇರಿ ಆ.2 : ಸೋಮವಾರಪೇಟೆ ಜ್ಞಾನವಿಕಾಸ ಅಂಗ್ಲ ಮಾಧ್ಯಮ ಶಾಲೆಯಲ್ಲಿ ಲಯನ್ಸ್ ಸಂಸ್ಥೆ ವತಿಯಿಂದ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮದ ಅಂಗವಾಗಿ ಮಾಜಿ ಸೈನಿಕರನ್ನು ಸನ್ಮಾನಿಸಲಾಯಿತು.
ಜೈ ಜವಾನ್ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಈರಪ್ಪ ಮಾತನಾಡಿ, ಕಾರ್ಗಿಲ್ ಗೆಲುವು ದೇಶಪ್ರೇಮಿಗಳಿಗೆ ಮರೆಯದ ಅವಿಸ್ಮರಣೀಯ ದಿನವಾಗಿದೆ. 1999ರ ಮೇ ನಲ್ಲಿ ತಿಂಗಳಲ್ಲಿ ಆರಂಭವಾದ ಕಾರ್ಗಿಲ್ ಯುದ್ಧ ಜುಲೈ ಅಂತ್ಯದ ತನಕ ನಡೆಯಿತು. ಪಾಕಿಸ್ತಾನವನ್ನು ನಮ್ಮ ಭಾರತೀಯ ವೀರ ಯೋಧರು ಸದೆ ಬಡಿದು ಅವರು ಅಕ್ರಮಿಸಿಕೊಂಡಿದ್ದ ಜಾಗವನ್ನು ವಶಕ್ಕೆ ಪಡೆದುಕೊಂಡರು ಎಂದು ಸ್ಮರಿಸಿದರು.
ಯುದ್ಧದಲ್ಲಿ ನಮ್ಮ ದೇಶದ 527 ಯೋಧರು ವೀರಮರಣ ಹೊಂದಿದರು. ‘ಅಪರೇಷನ್ ವಿಜಯ್’ ಮೂಲಕ ಕಾರ್ಗಿಲ್-ಡ್ರಾಸ್ ವಲಯದಲ್ಲಿ ಪ್ರದರ್ಶಿಸಿದ ಯೋಧರ ಶೌರ್ಯ ಹಾಗೂ ಗೆಲುವಿನ ನೆನಪಿಗಾಗಿ ಜುಲೈ 26 ಅನ್ನು ಕಾರ್ಗಿಲ್ ವಿಜಯ್ ದಿವಸ್ ಆಗಿ ಆಚರಿಸಲಾಗುತ್ತಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ದೇಶವನ್ನು ಪ್ರೀತಿಸಬೇಕು. ದೇಶ ರಕ್ಷಣೆಯಲ್ಲಿ ಸೈನಿಕರ ತ್ಯಾಗ ದೊಡ್ಡದು ಎಂದು ಹೇಳಿದರು.
ಸಮಾರಂಭದಲ್ಲಿ ನಿವೃತ್ತ ಸೈನಿಕರಾದ ರಾಜರಾಮ್, ಚಂದ್ರಶೇಖರ್, ಎನ್.ಕೆ.ನಿಂಗಪ್ಪ, ಶಶಿಧರ್ ಅವರನ್ನು ಸನ್ಮಾನಿಸಲಾಯಿತು. ಲಯನ್ಸ್ ಅಧ್ಯಕ್ಷ ಎ.ಎಸ್.ಮಹೇಶ್, ಖಜಾಂಚಿ ವೀರಪ್ಪ, ಜಿಲ್ಲಾ ಖಜಾಂಚಿ ಕೆ.ಎಂ.ಜಗದೀಶ್, ಮಾಜಿ ಅಧ್ಯಕ್ಷರಾದ ಕೆ.ಎನ್.ತೇಜಸ್ವಿ, ಸಿ.ಕೆ.ಮಲ್ಲಪ್ಪ, ಯೋಗೇಶ್, ಎಂ.ಎ.ಹರೀಶ್, ಸಿ.ಕೆ.ರೋಹಿತ್, ಪ್ರಮುಖರಾದ ಲಿಂಗರಾಜು, ಬಸವರಾಜು, ಮುಖ್ಯ ಶಿಕ್ಷಕಿ ಲಕ್ಷ್ಮೀ ಇತರರಿದ್ದರು.








