ಮಡಿಕೇರಿ ಆ.2 : ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸೇರಿದಂತೆ ಸಮಾಜವನ್ನು ಸರಿದಾರಿಯಲ್ಲಿ ಕರೆದೊಯ್ಯುವ ಪ್ರಮುಖ ಅಂಗವೇ ಪತ್ರಿಕಾ ರಂಗ ಎಂದು ಮಡಿಕೇರಿ ಕ್ಷೇತ್ರದ ಮಾಜಿ ಶಾಸಕ ಅಪ್ಪಚ್ಚು ರಂಜನ್ ಅಭಿಪ್ರಾಯಪಟ್ಟರು.
ಕುಶಾಲನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಕುಶಾಲನಗರ ಪ್ರೆಸ್ ಕ್ಲಬ್, ಸಂಗಮ ಟಿವಿ ಚಾನಲ್ ಮತ್ತು ವಂಶಿ ನ್ಯೂಸ್ ಸಹಯೋಗದೊಂದಿಗೆ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಕಾವೇರಿ ರತ್ನ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಪತ್ರಿಕೆಯ ವರದಿಗಳಿಗೆ ಇಡೀ ಸಮಾಜದ ಚಿತ್ರಣ ಬದಲಿಸುವ ಶಕ್ತಿ ಇದೆ ಎಂದರು.
ಕಾರ್ಯಕ್ರಮದಲ್ಲಿ ಖಾಸಗಿ ವಾಹಿನಿ ವರದಿಗಾರ ಸುರ್ಜಿತ್ ಕುಮಾರ್, ಶಿಕ್ಷಕ ಎಚ್.ಸಿ.ರಮೇಶ್, ಶಿಕ್ಷಕರಾದ ನಗಿನ ಬಾನು, ಮಂಜೇಗೌಡ, ಉಪನ್ಯಾಸಕ ಮೋಹನ್ ಕುಮಾರ್, ಲೀಲಾಕುಮಾರಿ ತೊಡಿಕಾನ, ಸುಶೀಲಾ, ಕೆ.ಬಿ.ರಾಜು, ಮಾಲದೇವಿ ಸೇರಿದಂತೆ 16 ಸಾಧಕರಿಗೆ ಕಾವೇರಿ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರೆಸ್‌ಕ್ಲಬ್ ಅಧ್ಯಕ್ಷ ಎಚ್.ಎಂ. ರಘು ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ, ಪುರಸಭಾ ಸದಸ್ಯ ಅಮೃತ್ ರಾಜ್, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ದಾಮೋದರ, ಬಾಲಕಿಯರ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಪುಷ್ಪಾ, ಪತ್ರಕರ್ತ ಭರಮಣ್ಣ ಬೆಟ್ಟಗೇರಿ, ಟೋನಿ, ಕಾಲೇಜಿನ ಪ್ರಭಾರ ಪ್ರಾಂಶುಪಾಲ ನಾಗೇಶ್
ಉಪಸ್ಥಿತರಿದ್ದರು.