ಮಡಿಕೇರಿ ಆ.2 : ಆಟಿ ಅಥವಾ ಕಕ್ಕಡ ಆಚರಣೆಯ 18 ನೇ ದಿನ ಆಗಸ್ಟ್ 3. ಕಕ್ಕಡ ಆರಂಭವಾಗಿ 18 ದಿನ ತುಂಬುತ್ತಿದ್ದಂತೆ 18 ಔಷಧೀಯ ಗುಣಗಳನ್ನು ಹೊಂದಿರುವ ಮದ್ದು ಸೊಪ್ಪಿನ ಪಾಯಸ ಅಥವಾ ರುಚಿ ರುಚಿಯಾದ ವಿವಿಧ ಖಾದ್ಯಗಳನ್ನು ಮಾಡಿ ಸೇವಿಸುವುದು ವಿಶೇಷ. ಕೊಡಗಿನ ಮನೆ ಮನೆಗಳಲ್ಲಿ ಮದ್ದು ಸೊಪ್ಪಿನ ಪಾಯಸ ಘಮಘಮಿಸುತ್ತದೆ.
ತುಳುನಾಡಿನಲ್ಲಿ ಆಟಿ 18 ಹೇಗೋ, ಹಾಗೇ ಕೊಡಗಿನಲ್ಲಿ ಕಕ್ಕಡ 18 ಕೂಡ ಒಂದು ವಿಶಿಷ್ಠ ಆಚರಣೆಯಾಗಿದೆ. ಹೇಳಿ ಕೇಳಿ ಹಸಿರ ಕಾನನದ ಗೂಡಾದ ಕೊಡಗಿನಲ್ಲಿ ಔಷಧೀಯ ಗುಣಗಳನ್ನು ಹೊಂದಿರುವ ಹಸಿರ ಗಿಡಗಳಿಗೇನು ಕೊರತೆ ಇಲ್ಲ. ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಯಥೇಚ್ಛವಾಗಿ ಸಿಗುವ ಮರ ಕೆಸ, ಕಣಿಲೆ, ಅಣಬೆ, ಮದ್ದು ಸೊಪ್ಪು ಮಳೆ ಚಳಿ ಗಾಳಿಗೆ ಮಾನವನ ದೇಹವನ್ನು ಬೆಚ್ಚಗಿಡಲು ಸಹಕಾರಿಯಾಗಿದೆ ಮಾತ್ರವಲ್ಲ ಇವುಗಳಲ್ಲಿ ಔಷಧೀಯ ಗುಣಗಳಿವೆ ಎನ್ನುವುದು ಹಿರಿಯರ ನಂಬಿಕೆ. ನಾಟಿ ಕೋಳಿ, ಏಡಿ, ಹೊಳೆ ಮೀನು ಕೂಡ ಕಕ್ಕಡ ತಿಂಗಳಿನಲ್ಲಿ ಮಾಂಸಹಾರಿಗಳ ಹೊಟ್ಟೆಯನ್ನು ಸೇರಿ ದೇಹವನ್ನು ಬೆಚ್ಚಗಿಡಲು ಹಾಗೂ ಆರೋಗ್ಯ ವರ್ಧಕವಾಗಿ ಕೆಲಸ ಮಾಡಲು ಸಹಕರಿಯಾಗಿದೆ.
ಆದರೆ ಇವುಗಳೆಲ್ಲದಕ್ಕಿಂತಲೂ ಭಿನ್ನವಾದ ಖಾದ್ಯವೆಂದರೆ ಮದ್ದು ಸೊಪ್ಪಿನಿಂದ ತಯಾರಿಸಿದ ಪಾಯಸ. ಈ ಪಾಯಸದಿಂದಲೇ ಕಕ್ಕಡ 18 ಕ್ಕೆ ಮಹತ್ವವಿದೆ. ವರ್ಷಕ್ಕೊಂದು ಬಾರಿ ಕಕ್ಕಡ 18 ರಂದು ಮದ್ದು ಸೊಪ್ಪಿನ ಪಾಯಸವನ್ನು ಸೇವಿಸುವ ಪದ್ಧತಿ ಕಳೆದ ಹಲವು ವರ್ಷಗಳಿಂದ ವಾಡಿಕೆಯಲ್ಲಿದೆ. ಕೊಡಗಿನಲ್ಲಿ ಯಥೇಚ್ಛವಾಗಿ ಸಿಗುವ ಈ ಸೊಪ್ಪನ್ನು ಅಥವಾ ಈ ಸೊಪ್ಪಿನಿಂದ ತೆಗೆದ ರಸವನ್ನು ಜಿಲ್ಲೆಯಿಂದ ಹೊರ ಭಾಗದಲ್ಲಿರುವ ಕೊಡಗಿನ ಜನ ಕಕ್ಕಡ 18 ರಂದು ತಮ್ಮ ನೆಂಟರಿಸ್ಟರ ಮೂಲಕ ತರಿಸಿಕೊಂಡು ಸೇವಿಸುವಷ್ಟು ಜನಪ್ರಿಯ ಈ ಮದ್ದಿನ ಸೊಪ್ಪು. ವಿಶಿಷ್ಟವಾದ ಸುವಾಸನೆಯನ್ನು ಹೊಂದಿರುವ ಸೊಪ್ಪಿನಿಂದ ತಯಾರಾದ ಪಾಯಸ, ತಟ್ಟೆ ಹಿಟ್ಟು, ಹಲ್ವ ಹೀಗೆ ಯಾವುದೇ ಖಾದ್ಯವಿದ್ದರೂ ಕೊಡಗಿನ ಜೇನು ಮತ್ತು ತುಪ್ಪದೊಂದಿಗೆ ಸವಿದರೆ ಇವುಗಳ ರುಚಿ ದುಪ್ಪಟ್ಟಾಗಿರುತ್ತದೆ.
ಕಕ್ಕಡ 18 ಕ್ಕೆ ಜಾನಪದ ಹಾಗೂ ಆಯುರ್ವೇದ ಸ್ಪರ್ಶವಿದೆ. ಈ ದಿನ ಸಂಪ್ರದಾಯದಂತೆ ಸಾಮೂಹಿಕವಾಗಿ ಮನೆಯವರೆಲ್ಲ ಸೇರಿ ಗದ್ದೆಯಲ್ಲಿ ನಾಟಿ ಮಾಡಿ ಆನಂತರ ಮದ್ದು ಸೊಪ್ಪಿನ ಪಾಯಸ ಸೇವಿಸುತ್ತಾರೆ. ಕಕ್ಕಡ ಆರಂಭವಾದ ದಿನದಿಂದ 18 ದಿನಗಳವರೆಗೆ ಪ್ರತಿದಿನ ಒಂದೊಂದು ಔಷಧಿಯಂತೆ ಒಟ್ಟು 18 ಔಷಧಿಗಳು ಈ ಸೊಪ್ಪಿನಲ್ಲಿ ಅಡಕವಾಗುತ್ತದೆ ಎನ್ನುವ ನಂಬಿಕೆ ಇದೆ. 18 ಔಷಧಿಗಳು ಸಂಪೂರ್ಣವಾಗಿ ಸೇರಿಕೊಂಡ ನಂತರವಷ್ಟೇ ಸೊಪ್ಪಿಗೆ ಪರಿಪೂರ್ಣ ಔಷಧೀಯ ಗುಣ ಬರುತ್ತದೆ ಎನ್ನುವ ಕಾರಣಕ್ಕೆ ಕಕ್ಕಡ 18 ರಂದೇ ಮದ್ದು ಸೊಪ್ಪನ್ನು ಕೊಯ್ದು ಖಾದ್ಯವನ್ನು ತಯಾರಿಸಲಾಗುತ್ತದೆ. ಈ ಸೊಪ್ಪನ್ನು ಮಧುಬನ ಎಂದು ಕೂಡ ಕರೆಯುತ್ತಾರೆ.
ಗ್ರಾಮೀಣ ಪ್ರದೇಶದ ಜನರು ತಮ್ಮ ಮನೆಯ ಅಕ್ಕಪಕ್ಕದಲ್ಲೇ ಇದನ್ನು ಬೆಳೆದುಕೊಂಡಿದ್ದರೆ ಪಟ್ಟಣದ ಜನ ಗ್ರಾಮಸ್ಥರು ತಂದು ಮಾರುವ ಸೊಪ್ಪಿಗೆ ಹಣ ನೀಡಿ ಕೊಂಡುಕೊಳ್ಳುತ್ತಾರೆ. ಒಟ್ಟಿನಲ್ಲಿ ಭಾರೀ ಮಳೆ ಗಾಳಿ ಚಳಿಯ ಕೊಡಗಿನಲ್ಲೀಗ ಘಮಘಮಿಸುವ ಬಿಸಿ ಬಿಸಿ ಮದ್ದು ಸೊಪ್ಪಿನ ಪಾಯಸದ್ದೇ ಮಾತು.
Breaking News
- *ಕೊಡವ ನ್ಯಾಷನಲ್ ಡೇ ಹಿನ್ನೆಲೆ : ದೇವಟ್ ಪರಂಬುವಿನಲ್ಲಿ ಸಿಎನ್ಸಿ ಪ್ರಾರ್ಥನೆ*
- *ವೀರ ಸೇನಾನಿಗಳಿಗೆ ಅಗೌರವ : ಮಡಿಕೇರಿ ತಾಲ್ಲೂಕು ಒಕ್ಕಲಿಗರ ಸಂಘ ಖಂಡನೆ*
- *ಕೊಡವ ಮಕ್ಕಡ ಕೂಟದಿಂದ ದಾಖಲೆಯ 100ನೇ ಪುಸ್ತಕ “100ನೇ ಮೊಟ್ಟ್” ಬಿಡುಗಡೆ : ಭಾಷೆ, ಜಾತಿಯನ್ನು ಮೀರಿದ ಜ್ಞಾನ ಭಂಡಾರವೇ ಸಾಹಿತ್ಯ : ಬಾಚರಣಿಯಂಡ ಅಪ್ಪಣ್ಣ*
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*
- *ಕೊಡಗು ಕೃಷಿ ವಿಜ್ಞಾನ ವೇದಿಕೆಯ ಬೆಳ್ಳಿ ಮಹೋತ್ಸವ : ನ.26 ರಂದು ರೈತ ಮೇಳ*