ಸುಂಟಿಕೊಪ್ಪ,ಆ.3: ಗುರುವಾರದಂದು ನಿಗಧಿಯಾಗಿದ್ದ ಗ್ರೇಡ್ 1 ಪಂಚಾಯಿತಿಯ 2ನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯು ತಾಂತ್ರಿಕ ದೋಷದ ಹಿನ್ನಲೆಯಲ್ಲಿ ಆ.10ಕ್ಕೆ ಮುಂದೂಡಲಾಗಿದೆ ಎಂದು ಚುನಾವಣಾ ಅಧಿಕಾರಿ ವರದರಾಜ್ ತಿಳಿಸಿದ್ದಾರೆ.
ಅಧ್ಯಕ್ಷ ಸ್ಥಾನವು ಬಿಸಿಎಂ (ಎ) ಮತ್ತು ಉಪಾಧ್ಯಕ್ಷ ಸ್ಥಾನವು ಪರಿಶಿಷ್ಟ ಜಾತಿ ಮಹಿಳೆ ಮೀಸಲಾಗಿದ್ದು, ಸಲ್ಲಿಕೆಯಾಗಿದ್ದ 7 ಅಧ್ಯಕ್ಷ ಆಕಾಂಕ್ಷಿಗಳ ನಾಮಪತ್ರ ಪರಿಶೀಲನೆ ಸಂದರ್ಭ ಸಂಬಂಧಿಸಿದ ಆಭ್ಯರ್ಥಿಗಳು ಆಯಾ ತಾಲೂಕು ತಹಶೀಲ್ದಾರ್ ನೀಡಿದ ಜಾತಿ ಪ್ರಮಾಣಪತ್ರ, ನಾಮಪತ್ರದ ಜೊತೆಗೆ ಸಲ್ಲಿಸಬೇಕಾಗಿದ್ದು, ಪ್ರಸ್ತುತ ಅಭ್ಯರ್ಥಿಗಳು ಸಲ್ಲಿಸಿದ ನಾಮಪತ್ರಗಳು ತಿರಸ್ಕೃತಗೊಂಡಿದೆ. ಈ ಹಿನ್ನೆಲೆ ಪ್ರಮಾಣ ಪತ್ರ ಒದಗಿಸಲು 7 ದಿನಗಳ ಕಾಲಾವಕಾಶ ನೀಡಿ ಚುನಾವಣೆಯನ್ನು ಆ.10 ರ ಗುರುವಾರಕ್ಕೆ ಮುಂದೂಡಿ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ವರದರಾಜ್ ಆದೇಶಿಸಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ 7 ಜನ ಆಭ್ಯರ್ಥಿಗಳಾಗಿ ಬಿಜೆಪಿ. ಬೆಂಬಲಿತ ಪಕ್ಷದ ಪಿ.ಆರ್.ಸುನಿಲ್, ಬಿ.ಎಂ.ಸುರೇಶ್, ಕಾಂಗ್ರೆಸ್ ಬೆಂಬಲಿತ ರಫೀಕ್ ಖಾನ್, ಆಲಿಕುಟ್ಟಿ, ಪಕ್ಷೇತರರಾಗಿ ಶಬ್ಬೀರ್ ಪ್ರಸಾದ್ ಕುಟ್ಟಪ್ಪ, ಎಸ್‍ಡಿಪಿಐ ಬೆಂಬಲಿತ ಆಭ್ಯರ್ಥಿಯಾಗಿ ನಾಗರತ್ನ ಸುರೇಶ್ ನಾಮಪತ್ರ ಸಲ್ಲಿಸಿದರು.
ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಆಭ್ಯರ್ಥಿಯಾಗಿ ಶಿವಮ್ಮ ಮಹೇಶ್, ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ವಸಂತಿ ನಾಮಪತ್ರವನ್ನು ಸಲ್ಲಿಸಿದರು.
ದಿಢೀರ್ ಬೆಳವಣಿಗೆಯಿಂದ ಅಚ್ಚರಿಗೊಳಗಾದ ಅಭ್ಯರ್ಥಿಗಳು ಚುನಾವಣಾ ಅಧಿಕಾರಿಯೊಂದಿಗೆ
ಸ್ಪಷ್ಟನೆ ಬಯಸಿದಾಗ ಚುನಾವಣಾ ಅಧಿಕಾರಿಗಳು ಚುನಾವಣೆ ಪ್ರಕ್ರಿಯೆಯನ್ನು ಅದರ ಮಾನದಂಡದಂತೆ ನೆಡೆಸಬೇಕೆಂದು ಹೇಳಿದ್ದಾರೆ. ಇದರಿಂದ ಅಸಾಮಾಧಾನಗೊಂಡ ಕೆಲವು ಅಭ್ಯರ್ಥಿಗಳು ಚುನಾವಣಾ ಅಧಿಕಾರಿಯೊಂದಿಗೆ ಚರ್ಚೆಗೆ ಮುಂದಾಗಿದ್ದು, ಕೆಲವು ಸದಸ್ಯರು ತಕ್ಷಣವೇ ಚುನಾವಣಾ ಪ್ರಕ್ರಿಯೆ ಸಭೆಯಿಂದ ಹೊರನಡೆದಿದ್ದಾರೆ.
ಈ ಸಂದರ್ಭ ಒಳಗಿನ ಬೆಳವಣಿಗೆಯ ಬಗ್ಗೆ ಸುಳಿವು ಆರಿತ ಬಿಜೆಪಿಯ ಜಿಲ್ಲಾ ಮಾಜಿ ಅಧ್ಯಕ್ಷ ಬಿ.ಬಿ.ಭಾರತೀಶ್ ಎಸ್‍ಡಿಪಿಐನ ಜಿಲ್ಲಾ ಸಮಿತಿ ಸದಸ್ಯ ಉಸ್ಮಾನ್, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ವಿ.ಪಿ.ಶಶಿಧರ್ ಜಿ.ಪಂ.ಮಾಜಿ ಸದಸ್ಯ ಪಿ.ಎಂ.ಲತೀಫ್ ಚುನಾವಣಾಧಿಕಾರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಿದರಲ್ಲದೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ಈ ಸಂದರ್ಭ ಸುಂಟಿಕೊಪ್ಪ ಠಾಣಾಧಿಕಾರಿ ಎಂ.ಸಿ.ಶ್ರೀಧರ್, ಅಪರಾಧ ವಿಭಾಗದ ಎಸ್.ಐ. ಹೆಚ್.ಸಿ.ಸ್ವಾಮಿ, ಸಿಬ್ಬಂದಿಗಳು ಬಂದೋಬಸ್ತ್ ಕಲ್ಪಿಸಿದರು.
ಪಂಚಾಯಿತಿ ಅಭಿವೃದ್ಧಿ ಬಿ.ಎಚ್.ವೇಣುಗೋಪಾಲ್, ಸಿಬ್ಬಂದಿಗಳು ಚುನಾವಣಾ ಪ್ರಕ್ರಿಯೆಯ ಪಾಲ್ಗೊಂಡಿದ್ದರು.