ಮಡಿಕೇರಿ ಆ.3 : ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆಯ ಕುರಿತು ಸಿಎನ್‍ಸಿ ಬೇಡಿಕೆಗೆ ಪೂರಕವಾಗಿ ಆಯೋಗವನ್ನು ರಚಿಸಬೇಕೆಂದು ಖ್ಯಾತ ಅರ್ಥಶಾಸ್ತ್ರಜ್ಞ ಡಾ.ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಹೈಕೋರ್ಟ್ ನಲ್ಲಿ ನಡೆಯಿತು.
ವಿಚಾರಣೆಯನ್ನು ಸೆ.5 ಕ್ಕೆ ಮುಂದೂಡಲಾಗಿದ್ದು, ಮೂವರು ಪ್ರತಿವಾದಿಗಳು ಮುಂದಿನ 4 ವಾರಗಳಲ್ಲಿ ಉತ್ತರ ನೀಡುವಂತೆ ಕೋರ್ಟ್ ನಿರ್ದೇಶನ ನೀಡಿತು.
ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ ಹಾಗೂ ನ್ಯಾಯಮೂರ್ತಿ ಎಂಜೆಎಸ್.ಕಮಲ್ ಅವರ ವಿಭಾಗೀಯ ಪೀಠವು ಪ್ರಕರಣದ ವಿಚಾರಣೆ ನಡೆಸಿತು. ಡಾ. ಸುಬ್ರಮಣಿಯನ್ ಸ್ವಾಮಿ ಅವರು ಇಂದು ವಿಚಾರಣೆಗೆ ಹಾಜರಾಗಿ ಹೈಕೋರ್ಟ್ ವಿಭಾಗೀಯ ಪೀಠದ ಮುಂದೆ ಪ್ರಕರಣವನ್ನು ವಾದಿಸಿದರು. ಅರ್ಜಿದಾರರ ಪರವಾಗಿ ವಕೀಲರಾದ ಎಂ.ಎಸ್.ನಾರಾಯಣ ಕಿರಣ್, ವಿಕ್ರಮ್ ಹೆಗ್ಡೆ ಹಾಗೂ ಪಾರ್ಥ್ ಅವರು ಹಾಜರಾಗಿದ್ದರು.
ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಹಾಗೂ ವಿಎಚ್‍ಎಸ್ ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಶೆಟ್ಟಿ ಹೈಕೋರ್ಟ್‍ನಲ್ಲಿ ಉಪಸ್ಥಿತರಿದ್ದರು.
ಡಾ.ಸುಬ್ರಮಣಿಯನ್ ಸ್ವಾಮಿ ಅವರು ಹೈಕೋರ್ಟ್‍ಗೆ ಸಲ್ಲಿಸಿದ ರಿಟ್ ಅರ್ಜಿ ಸಂಖ್ಯೆ-7769/2023 ರ ಪಿಐಎಲ್ ದೀರ್ಘಕಾಲ ಬಾಕಿ ಉಳಿದಿರುವುದನ್ನು ಖಚಿತಪಡಿಸಿಕೊಳ್ಳಲು ಆಯೋಗವನ್ನು ಕೋರಿದರು. ಕೊಡವ ನ್ಯಾಶನಲ್ ಕೌನ್ಸಿಲ್ ನ ಕೊಡವಲ್ಯಾಂಡ್ ಜಿಯೋ-ರಾಜಕೀಯ ಸ್ವಾಯತ್ತತೆಯ ನ್ಯಾಯಸಮ್ಮತ ಬೇಡಿಕೆಯನ್ನು ಮಂಡಿಸಲಾಯಿತು.
ಇದರಲ್ಲಿ ಎನ್.ಯು.ನಾಚಪ್ಪ ಅವರು ಅರ್ಜಿದಾರ ಸಂಖ್ಯೆ-2 ಆಗಿದ್ದಾರೆ. ಕೇಂದ್ರ ಕಾನೂನು ಸಚಿವಾಲಯ, ಕೇಂದ್ರ ಗೃಹ ಸಚಿವಾಲಯ ಮತ್ತು ಕರ್ನಾಟಕ ರಾಜ್ಯವನ್ನು ಪ್ರತಿವಾದಿ ಸಂಖ್ಯೆ ಕ್ರಮವಾಗಿ 1, 2 ಮತ್ತು 3 ಎಂದು ಉಲ್ಲೇಖಿಸಲಾಗಿದೆ.
ಎಲ್ಲಾ ಮೂವರು ಪ್ರತಿವಾದಿಗಳು ಉತ್ತರ ನೀಡಲು 8 ವಾರಗಳ ಕಾಲಾವಕಾಶವನ್ನು ಕೋರಿದರು. ಆದರೆ ಕೋರ್ಟ್ ಉತ್ತರಿಸಲು ನಾಲ್ಕು ವಾರಗಳ ಸಮಯವನ್ನು ನೀಡಿತು.
ಸಿಎನ್‍ಸಿ ಪ್ರಮುಖರಾದ ಕಲಿಯಂಡ ಪ್ರಕಾಶ್, ಲೆಫ್ಟಿನೆಂಟ್ ಕರ್ನಲ್ ಪಾರ್ವತಿ, ಶ್ರೇಯಾ ನಾಚಪ್ಪ, ಕಾಂಡೇರ ಸುರೇಶ್, ಪಾರ್ವಂಗಡ ನವೀನ್, ಅರೆಯಡ ಗಿರೀಶ್, ಬೊಟ್ಟಂಗಡ ಗಿರೀಶ್, ಚಂಬಂಡ ಜನತ್, ಬೇಪಡಿಯಂಡ ದಿನು, ಕಿರಿಯಮಾಡ ಶೆರಿನ್, ಅಜ್ಜಿಕುಟ್ಟೀರ ಲೋಕೇಶ್, ಪುಲ್ಲೇರ ಕಾಳಪ್ಪ, ವಿಎಚ್‍ಎಸ್ ಸದಸ್ಯರಾದ ರವಿಶಂಕರ್, ನಟರಾಜ್ ಹೈಕೋರ್ಟ್ ಕಲಾಪವನ್ನು ವೀಕ್ಷಿಸಿದರು.