ಮಡಿಕೇರಿ ಆ.4 : ಸ್ವಾತಂತ್ರ್ಯೋತ್ಸವದ ಅಂಗವಾಗಿ ಕೊಡಗಿನ ಆರು ಕಡೆಗಳಲ್ಲಿ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮದ ಪ್ರಯುಕ್ತ ಪಂಜಿನ ಮೆರವಣಿಗೆ, ವಾಹನ ಜಾಥ ಮತ್ತು ಸಭಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹಿಂದು ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ ಕುಕ್ಕೇರ ಅಜಿತ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಆ.9 ರಂದು ವಿರಾಜಪೇಟೆಯಲ್ಲಿ ಸಂಜೆ 6 ಗಂಟೆಗೆ ಪಂಜಿನ ಮೆರವಣಿಗೆಯನ್ನು ಆಯೋಜಿಸಲಾಗಿದೆ. ಮೆರವಣಿಗೆ ತೆಲುಗರ ಬೀದಿ ಮಾರಿಯಮ್ಮ ದೇವಾಲಯದಿಂದ ಆರಂಭಗೊಂಡು ಕ್ಲಾಕ್ ಟವರ್, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಕ್ಕಾಗಿ ಮಹಿಳಾ ಸಮಾಜದ ಬಳಿ ಸಂಜೆ 7.30 ಕ್ಕೆ ಮುಕ್ತಾಯಗೊಳ್ಳಲಿದೆ. ಸುಮಾರು 2 ಕಿ.ಮೀ. ಅಂತರದ ಪಂಜಿನ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು.
ಗೋಣಿಕೊಪ್ಪಲಿನಲ್ಲಿ ಆ.10 ರಂದು ಬೆಳಗ್ಗೆ 10 ಗಂಟೆಗೆ ಸುಮಾರು 10 ಕಿ.ಮೀ. ಅಂತರದ ವಾಹನ ಜಾಥ ನಡೆಯಲಿದೆ. ಅಲ್ಲಿನ ಆರ್‍ಎಂಸಿ ಬಳಿಯಿಂದ ಜಾಥ ಆರಂಭಗೊಂಡು ಖಾಸಗಿ ಬಸ್ ನಿಲ್ದಾಣದ ಮೂಲಕ ಬೈಪಾಸ್ ಮಾರ್ಗವನ್ನು ಹಾದು ಪೊನ್ನಂಪೇಟೆ ಕೊಡವ ಸಮಾಜದ ಬಳಿ ಮುಕ್ತಾಯಗೊಳ್ಳಲಿದೆ. ಬಳಿಕ ಸಭಾ ಕಾರ್ಯಕ್ರಮ ನಡೆಯಲಿದೆಯೆಂದು ತಿಳಿಸಿದರು.
ಜಿಲ್ಲಾ ಕೇಂದ್ರ್ರ ಮಡಿಕೇರಿಯಲ್ಲಿ ಆ.11 ರಂದು ಸಂಜೆ 6 ಗಂಟೆಗೆ ಮಹದೇವಪೇಟೆಯ ಶ್ರೀ ಚೌಡೇಶ್ವರಿ ದೇಗುಲದಿಂದ ಪಂಜಿನ ಮೆರವಣಿಗೆಯನ್ನು ಆಯೋಜಿಸಲಾಗಿದೆ. ಮೆರವಣಿಗೆ ಇಂದಿರಾ ಗಾಂಧಿ ವೃತ್ತ, ಅಂಚೆ ಕಛೇರಿ, ಜ.ತಿಮ್ಮಯ್ಯ ವೃತ್ತ, ಶ್ರೀ ಓಂಕಾರೇಶ್ವರ ದೇವಸ್ಥಾನ ರಸ್ತೆಯ ಮೂಲಕ ಸಾಗಿ ಶ್ರೀ ಲಕ್ಷ್ಮೀ ನರಸಿಂಹ ಕಲ್ಯಾಣ ಮಂಟಪದಲ್ಲಿ ಮುಕ್ತಾಯಗೊಳ್ಳಲಿದೆ. ಬಳಿಕ ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು.
ಮಾದಾಪುರದಲ್ಲಿ ಆ.12 ರಂದು ಸಂಜೆ 6 ಗಂಟೆಗೆ ಜಂಬೂರಿನ ಎಫ್‍ಎಂಸಿ ಬಡಾವಣೆಯಿಂದ ಮಾದಾಪುರ ಪಟ್ಟಣಕ್ಕಾಗಿ ಶ್ರೀ ಗಣಪತಿ ದೇವಾಲಯದವರೆಗೆ ಪಂಜಿನ ಮೆರವಣಿಗೆ ನಡೆಯಲಿದೆ. ಆ.13 ರಂದು ಕೊಡ್ಲಿಪೇಟೆಯಲ್ಲಿ ಸಂಜೆ 6 ಗಂಟೆಗೆ ಆರ್‍ಎಂಸಿ ಮಾರುಕಟ್ಟೆ ಸಮೀಪದ ಶ್ರೀ ಗಣಪತಿ ದೇವಾಲಯದಿಂದ ಆರಂಭಗೊಳ್ಳುವ ಪಂಜಿನ ಮೆರವಣಿಗೆ ಶ್ರೀ ಬಸವೇಶ್ವರ ಕಲ್ಯಾಣ ಮಂಟಪದವರೆಗೆ ನಡೆದು, ಬಳಿಕ ಸಭಾ ಕಾರ್ಯಕ್ರಮ ನಡೆಯಲಿದೆಯೆಂದು ಹೇಳಿದರು.
ಆ.14 ರಂದು ಕುಶಾಲನಗರದ ಬೈಚನಹಳ್ಳಿ ಶ್ರೀ ಮಾರಿಯಮ್ಮ ದೇವಾಲಯದಿಂದ ಪಂಜಿನ ಮೆರವಣಿಗೆ ಆರಂಭಗೊಳ್ಳಲಿದ್ದು, ಮೆರವಣಿಗೆ ಆಕ್ಸಿಸ್ ಬ್ಯಾಂಕ್ ರಸ್ತೆಗಾಗಿ, ರಥ ಬೀದಿ ಐಬಿ ರಸ್ತೆಗಾಗಿ ರೈತ ಭವನದಲ್ಲಿ ಮುಕ್ತಾಯವಾಗಲಿದೆ. ನಂತರ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಅಜಿತ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹಿಂದು ಜಾಗರಣ ವೇದಿಕೆಯ ಜಿಲ್ಲಾ ಸಹ ಸಂಯೋಜಕ ಚೇತನ್ ಶಾಂತಿನಿಕೇತನ, ಸಹ ಸಂಚಾಲಕ ವೈ.ಬಿ.ಭೋಜೇಗೌಡ, ಜಿಲ್ಲಾ ಕಾರ್ಯಕಾರಿಣಿ ಸದಸ್ಯರುಗಳಾದ ಚಾಮೇರ ಪ್ರದೀಪ್, ಸುನಿಲ್ ಮಾದಾಪುರ ಹಾಗೂ ಶಾಂತೆಯಂಡ ತಿಮ್ಮಯ್ಯ ಉಪಸ್ಥಿತರಿದ್ದರು.









