ಬಾಳೆಲೆ ಆ.5 : ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಂಡಿರುವ ಬಾಳೆಲೆಯ ವಿಜಯಲಕ್ಷ್ಮಿ ಸಂಯುಕ್ತ ಪದವಿ ಪೂರ್ವ ಕಾಲೇಜನ್ನು ವಿವೇಕಾನಂದ ಸೇವಾ ಸಮಿತಿಯ ಪ್ರಮುಖರಾದ ಡಾ ಮಾಪಂಗಡ ಪ್ರತಾಪ್ ಬೆಳ್ಳಿಯಪ್ಪ ಉದ್ಘಾಟಿಸಿದರು.
ಮೈಸೂರಿನ ಶ್ರೀ ರಾಮಕೃಷ್ಣ ವಿದ್ಯಾಶಾಲೆಯಲ್ಲಿ 1979/81ರ ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ಮಾಡಿದ ಬಳಗದವರು ವಿವೇಕಾನಂದ ಸೇವಾ ಸಂಸ್ಥೆಯನ್ನು ಸ್ಥಾಪಿಸಿಕೊಂಡು ವಿವಿಧ ಜನಪರ ಕಾರ್ಯಕ್ರಮಗಳಲ್ಲಿ ತೋಡಗಿಸಿಕೊಂಡಿದ್ದಾರೆ. ಇವರು ಕಳೆದ ಶೈಕ್ಷಣಿಕ ವರ್ಷದಲ್ಲಿ ಬಾಳೆಲೆ ವಿಜಯಲಕ್ಷ್ಮಿ ಸಂಯುಕ್ತ ಪದವಿ ಪೂರ್ವ ಕಾಲೇಜನ್ನು ಅಭಿವೃದ್ಧಿ ಪಡಿಸಲು ಆಯ್ಕೆ ಮಾಡಿಕೊಂಡರು. ಗಿರಿಜನ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿರುವ ಈ ವಿದ್ಯಾಸಂಸ್ಥೆಯನ್ನು ಇಪ್ಪತ್ತು ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗಿದೆ. ಸುಸಜ್ಜಿತ ಗ್ರಂಥಾಲಯ, ಕಂಪ್ಯೂಟರ್ ಕೊಠಡಿ, ಶೌಚಾಲಯ ಸೇರಿದಂತೆ ವ್ಯವಸ್ಥಿತವಾಗಿ ತರಗತಿಗಳನ್ನು ನವೀಕರಿಸಲಾಗಿದೆ.
ಕಟ್ಟಡ ಉದ್ಘಾಟಿಸಿ ಮಾತನಾಡಿದ ಪ್ರತಾಪ್ ಬೆಳ್ಳಿಯಪ್ಪ ವಿದ್ಯೆಯೆಂಬ ಸಂಪತ್ತನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ಶೈಕ್ಷಣಿಕ ಗುರಿಯತ್ತ ಸಾಗಲು ಶ್ರಮಿಸಬೇಕಾಗಿದೆ ಎಂದರು. ನಂತರ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಿದರು. ವಿಜಯಲಕ್ಷ್ಮಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯದರ್ಶಿ ಚಿಮ್ಮಣಮಾಡ ಕೃಷ್ಣ ಗಣಪತಿ, ಸಹ ಕಾರ್ಯದರ್ಶಿ ಪೊಡಮಾಡ ಮೋಹನ್. ಉಪಾಧ್ಯಕ್ಷ ಕಿರುಂದಂಡ ದೇವಯ್ಯ, ಖಜಾಂಚಿ ಅಡ್ಡೇಂಗಡ ದೇವಯ್ಯ, ನಿರ್ದೇಶಕರುಗಳಾದ ಅಡ್ಡೇಂಗಡ ಸಜನ್, ಮಾಚಂಗಡ ಭೀಮಯ್ಯ, ಪ್ರಾಂಶುಪಾಲರಾದ ಪ್ರಭು ಎನ್. ಕೆ, ಮುಖ್ಯ ಶಿಕ್ಷಕ ಚಂದ್ರಶೇಖರ್ ಉಪಸ್ಥಿತರಿದ್ದರು. ಶಿಕ್ಷಕರಾದ ರಾಘವೇಂದ್ರ ಸ್ವಾಗತಿಸಿ, ತಿಮ್ಮರಾಜು ವಂದಿಸಿದರು.