ವಿರಾಜಪೇಟೆ ಆ.5 : ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ವತಿಯಿಂದ ವಿರಾಜಪೇಟೆಯ ಅಖಿಲ ಕೊಡವ ಸಮಾಜದ ಸಭಾಂಗಣದಲ್ಲಿ ಕಕ್ಕಡ ಪದಿನೆಟ್ಟ್ ನಮ್ಮೆ ಅದ್ದೂರಿಯಾಗಿ ಆಚರಿಸಲಾಯಿತು.
ಇದೇ ಸಂದರ್ಭ ಮಡಿಕೇರಿ ಆಕಾಶವಾಣಿಯಲ್ಲಿ ಉದ್ಘೋಷಕಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಕೂಪದೀರ ಶಾರದಾ ನಂಜಪ್ಪ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ, ಶಾರದಾ ನಂಜಪ್ಪ ಅವರು ಆಕಾಶವಾಣಿಯಲ್ಲಿ ನಾನೊಬ್ಬ ಉದ್ಯೋಗಿಯಾಗಿ ಸಂಬಳಕ್ಕೆ ಕೆಲಸ ಮಾಡಿದ್ದೇನೆ ಹೊರತು ಹೆಚ್ಚೇನೂ ಮಾಡಿಲ್ಲ, ಆದರೆ ಜನರು ನನಗೆ ತೋರಿಸುತ್ತಿರುವ ಪ್ರೀತಿ ನನ್ನನ್ನು ಮೂಕವಿಸ್ಮಿತಳಾಗಿ ಮಾಡಿದೆ. ಸರ್ಕಾರಿ ಕೆಲಸ ದೇವರ ಕೆಲಸವಾಗಿದ್ದು ಅದನ್ನು ಕೇವಲ ಸಂಬಳಕ್ಕಾಗಿ ಮಾಡದೆ ಮನತೃಪ್ತಿಗಾಗಿ ಮಾಡಿದಾಗ ನಾವು ಜನರಿಗೆ ಹತ್ತಿರವಾಗುತ್ತೇವೆ ಎಂದ ಅವರು ಆಕಾಶವಾಣಿಯ ನೋವು ನಲಿವುಗಳನ್ನು ಹಂಚಿಕೊಂಡರು.
ಆಕಾಶವಾಣಿಯಲ್ಲಿ ಸೇವೆ ಸಲ್ಲಿಸಿದ್ದ 30 ವರ್ಷ ಹಲವು ಕಾರ್ಯಕ್ರಮಗಳನ್ನು ಜನರಿಗೆ ನೀಡಲೂ ಕೇಳುಗರೇ ಕಾರಣ, ಕೇಳುಗರು ಕಾರ್ಯಕ್ರಮಗಳನ್ನು ಬಯಸಿದ್ದಾಗ ಮಾತ್ರ ನಮಗೆ ನೀಡಲು ಸಾಧ್ಯ ಎಂದರು. ಹಾಗೇ ಕೊಡವ ಭಾಷೆ ಹಾಗೂ ಕೊಡವರ ಮೇಲೆ ಅಭಿಮಾನ ಇರುವ ಯಾವುದೇ ಜಾತಿ ಧರ್ಮದ ವ್ಯಕ್ತಿಗಳನ್ನು ಕೂಡ ನಾವು ಅಭಿನಂದಿಸಬೇಕಿದೆ ಹಾಗಾದರೆ ಮಾತ್ರ ಒಂದು ಭಾಷೆ ಬೆಳೆಯಲು ಸಾದ್ಯ ಎಂದು ಅಭಿಪ್ರಾಯಪಟ್ಟ ಅವರು ಯಾವುದೇ ಜಾತಿ ಧರ್ಮಗಳಿರಲಿ ಮಕ್ಕಳಿಗೆ ಮನೆಯಲ್ಲಿ ನಿಮ್ಮ ಮಾತೃಭಾಷೆಯನ್ನು ಕಲಿಸಬೇಕಿದೆ, ನಾಲ್ಕು ಜನ ನಮ್ಮವರು ಸೇರಿದ್ದಾಗ ನಮ್ಮ ಭಾಷೆಯಲ್ಲಿಯೇ ಮಾತನಾಡಬೇಕು ಹೊರತು ಇಂಗ್ಲಿಷ್ ವ್ಯಾಮೋಹಕ್ಕೆ ಬಲಿಯಾಗಬಾರದು. ನಾವು ಯಾವುದೇ ಗೌರವಗಳನ್ನು ಅದರ ಹಿಂದೆ ಹೋಗಿ ಪಡೆಯುವುದಕ್ಕಿಂತ ಅದು ತಾನಾಗಿಯೇ ಬಂದರೆ ಒಳ್ಳೆಯದು ಎಂದ ಅವರು ನಿವೃತ್ತಿಯ ನಂತರವೂ ಕೂಡ ಆಕಾಶವಾಣಿಯೊಂದಿಗೆ ಒಡನಾಟ ಇರುವುದಾಗಿ ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಾಜಿ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಮಾತನಾಡಿ, ಕೊಡವರು ಕೊಡಗಿನಲ್ಲಿರುವವರ ಸಂಖ್ಯೆ ಹೆಚ್ಚಾಗಿ ಹೊರಜಿಲ್ಲೆಯಲ್ಲಿ ಹೊರರಾಜ್ಯದಲ್ಲಿ ನೆಲೆಸಿದ್ದಾರೆ ಎಂದು ಅವರು ಉದ್ಯೋಗದ ನಿಮಿತ್ತ ಅಥವಾ ಮಕ್ಕಳ ವಿದ್ಯಾಭ್ಯಾಸದ ನಿಮಿತ್ತ ಜಿಲ್ಲೆಯಿಂದ ಹೊರಗೆ ಬದುಕು ಕಟ್ಟಿಕೊಂಡಿರುವುದು ತಪ್ಪೇನು ಇಲ್ಲ, ಆದರೆ ಕನಿಷ್ಠ ತಮ್ಮ ಹಕ್ಕನ್ನು ಚಲಾಯಿಸಲು ಪ್ರತಿಯೊಬ್ಬರು ಕೊಡಗಿನಲ್ಲಿ ಮತದಾರರ ಚೀಟಿ ಹೊಂದಬೇಕಿದೆ ಎಂದರು.
ಜಿಲ್ಲೆಯ ಶ್ರೀಮಂತ ಸಂಸ್ಕೃತಿಯನ್ನು ನಮ್ಮ ಮುಂದಿನ ಪೀಳಿಗೆಗೂ ಉಳಿಸಿ ಬೆಳೆಸಬೇಕಾಗಿರುವುದು ನಮ್ಮ ಕರ್ತವ್ಯವಾಗಿದ್ದು, ಮುಂದಿನ ತಲೆಮಾರಿಗೂ ಇಲ್ಲಿನ ಜನಾಂಗ ಹಾಗೂ ಶ್ರೀಮಂತ ಸಂಸ್ಕೃತಿ ಅಳಿಯದೆ ಉಳಿಯಲಿ ಎಂದರು.
ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಮಾತನಾಡಿ ಅಖಿಲ ಕೊಡವ ಸಮಾಜ ಎನ್ನುವುದು ಕೊಡವ ಜನಾಂಗದ ಮಾತೃ ಸಂಸ್ಥೆಯಾಗಿದ್ದು ಕೊಡವರಾಗಿ ಹುಟ್ಟಿದ ಪ್ರತಿಯೊಬ್ಬರೂ ಅಖಿಲ ಕೊಡವ ಸಮಾಜದಲ್ಲಿ ಸದಸ್ಯರಾಗಿದ್ದು, ಆಗ ಹುಟ್ಟಿದ ಮಗು ಗಂಡು ಇರಲಿ ಅಥವಾ ಹೆಣ್ಣಿರಲಿ ತಾನಾಗಿಯೇ ಸಂಸ್ಥೆಯ ಸದಸ್ಯನಾಗುತ್ತಾನೆ. ಸಂಸ್ಥೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಬೇಕಾದರೆ ಕೊಡವ ಜನಾಂಗದ ಪ್ರತಿಯೊಂದು ಕುಟುಂಬ ತಮ್ಮ ವಕ್ಕ ಸದಸ್ಯತ್ವ ತೆಗೆದುಕೊಳ್ಳುವ ಮೂಲಕ ಮಾತೃ ಸಂಸ್ಥೆಗೆ ಬಲತುಂಬಬೇಕಿದೆ. ಹಿರಿಯರು ದೂರದೃಷ್ಟಿಯಿಂದ ಕಟ್ಟಿಬೆಳೆಸಿದ ಸಂಸ್ಥೆಯನ್ನು ಮುಂದಿನ ಪೀಳಿಗೆಗೂ ನಾವು ಉಳಿಸಿ ಬೆಳೆಸಲು ವಕ್ಕ ಸದಸ್ಯ ಅಥವಾ ಜನಾಂಗದ ವಂತಿಗೆ ಅನಿವಾರ್ಯವಾಗಿದೆ ಎಂದರು.
ಕೊಡವ ಜಾನಪದ ತಜ್ಞ ಬಾಚರಣಿಯಂಡ ಅಪ್ಪಣ್ಣ ಮಾತನಾಡಿ ಕಕ್ಕಡಕ್ಕೆ ಅರ್ಥವಿಲ್ಲದಾಗಿದೆ, ಹಿಂದಿನ ಮಳೆ ಗಾಳಿಯ ಕಕ್ಕಡ ಇದೀಗ ಕಾಣುತ್ತಿಲ್ಲ, ಸುಮಾರು ಐವತ್ತು ವರ್ಷಗಳ ಹಿಂದಿನ ಪರಿಸ್ಥಿತಿಯೇ ಬೇರೆ, ಇತ್ತಿಚಿನ ವರ್ಷಗಳ ಪರಿಸ್ಥಿತಿ ಬೇರೆ. ಜನರು ಬದಲಾದಂತೆ ಪ್ರಕೃತಿಯಲ್ಲಿಯೂ ಬದಲಾವಣೆಯಾಗಿದೆ. ದೇಹದ ಉಷ್ಣಾಂಶವನ್ನು ಸಮತೋಲನವಾಗಿಟ್ಟುಕೊಳ್ಳಲು ನಮ್ಮ ಪೂರ್ವಿಕರು ಕಂಡುಕೊಂಡ ಉಪಾಯ ಈ ಕಕ್ಕಡದ ಹಲವು ತಿನಿಸುಗಳು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದರ ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಬಾಚರಣಿಯಂಡ ರಾಣು ಅಪ್ಪಣ್ಣ ಕಕ್ಕಡ ವಿಶೇಷತೆಗಳ ಬಗೆ ತಿಳಿಸಿ ಕೊಡವತಿಯರು ಪೊಮ್ಮಕ್ಕಡ ಪರಿಷತ್ ಜೊತೆ ಕೈಜೋಡಿಸಲು ಮನವಿ ಮಾಡಿದರು.
ವೇದಿಕೆಯಲ್ಲಿ ಅಖಿಲ ಕೊಡವ ಸಮಾಜ ಉಪಾಧ್ಯಕ್ಷ ಅಜ್ಜಿಕುಟ್ಟೀರ ಸುಬ್ರಮಣಿ ಮಾದಯ್ಯ, ಖಜಾಂಚಿ ಮಂಡೇಪಂಡ ಸುಗುಣ ಮುತ್ತಣ್ಣ, ಪ್ರಧಾನ ಕಾರ್ಯದರ್ಶಿ ಅಮ್ಮುಣಿಚಂಡ ರಾಜ ನಂಜಪ್ಪ, ಸಹ ಕಾರ್ಯದರ್ಶಿ ನಂದೇಟೀರ ರಾಜ, ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಉಪಸ್ಥಿತರಿದ್ದರು.
ಪೊಮ್ಮಕ್ಕಡ ಪರಿಷತ್ ಕಾರ್ಯದರ್ಶಿ ಮಂಡೇಪಂಡ ಗೀತಾ ಮಂದಣ್ಣ ಮಳವಂಡ ಪೂವಿ ಅಜ್ಜಿಕುಟ್ಟೀರ ಶಾಂತಿ, ತೀತೀರ ಊರ್ಮಿಳಾ ಸೇರಿದಂತೆ ಇತರ ನಸದಸ್ಯರು ಇದ್ದರು.
ಬಳಿಕ ಮದ್ದ್ ಪುಟ್ಟ್, ಮದ್ದ್ ಪಾಯಸ ಸೇರಿದಂತೆ ಸಾಮೂಹಿಕ ಕಕ್ಕಡ ಭೋಜನವನ್ನು ಏರ್ಪಡಿಸಲಾಗಿತ್ತು.
Breaking News
- *ಕೆವಿ ಎನ್ಸಿಸಿ ಕೆಡೆಟ್ ಗಳಿಂದ ಕಾಯ೯ಪ್ಪ ಪ್ರತಿಮೆ ಸ್ವಚ್ಛತೆ*
- *ಸೋಮವಾರಪೇಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ*
- *ಕರ್ನಾಟಕ ಉಪ ಚುನಾವಣೆ : ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ*
- *ಮಿಸ್ಟಿ ಹಿಲ್ಸ್ ನಿಂದ ಮಕ್ಕಳಿಗೆ ಸಾಹಸಕ್ರೀಡೆ*
- *ವಿಟಿಯು ರಾಜ್ಯಮಟ್ಟದ ಕಬಡ್ಡಿ : ಪುತ್ತೂರು ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ತಂಡ ದ್ವಿತೀಯ*
- *ವೀರ ಸೇನಾನಿಗಳಿಗೆ ಅಗೌರವ : ಆಮ್ ಆದ್ಮಿ ಪಾರ್ಟಿ ಖಂಡನೆ*
- *ವೀರ ಸೇನಾನಿಗಳಿಗೆ ಅಗೌರವ : ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ*
- *ವಿರಾಜಪೇಟೆ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯಿಂದ ಸ್ಥಳ ಪರಿಶೀಲನೆ*
- *ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಸಾಂಸ್ಕೃತಿಕ ಕಲರವ*
- *ಕಬ್ಬಚ್ಚಿರ ರಶ್ಮಿ ಕಾರ್ಯಪ್ಪಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ*