ಮಡಿಕೇರಿ ಆ.5 : ಕೊಡವ ಸಾಹಿತ್ಯ ಉಳಿಯಬೇಕಾದರೆ ಓದುಗರು ಮತ್ತು ಕೊಡವ ಭಾಷೆ ಬಳಸುವವರ ಸಂಖ್ಯೆ ಹೆಚ್ಚಾಗಬೇಕು ಎಂದು ಹಿರಿಯ ಸಾಹಿತಿ ಹಾಗೂ ಎಂ.ಎ ಕೊಡವ ವಿಭಾಗದ ಉಪನ್ಯಾಸಕ ಬಾಚರಣಿಯಂಡ ಅಪ್ಪಣ್ಣ ಅಭಿಪ್ರಾಯಪಟ್ಟಿದ್ದಾರೆ.
ಕೊಡವ ಎಂ.ಎ ಸ್ನಾತಕೋತ್ತರ ವಿಭಾಗ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಹಾಗೂ ಕೊಡವ ಮಕ್ಕಡ ಕೂಟದ ಸಹಯೋಗದಲ್ಲಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಸಾಹಿತಿ ಕೊಟ್ಟುಕತ್ತಿರ ಜಾಲಿ ಸೋಮಣ್ಣ ಬರೆದಿರುವ, ಕೊಡವ ಮಕ್ಕಡ ಕೂಟದ 71ನೇ ಪುಸ್ತಕ “ಕರ್ಮ-ಪ್ರಾರಬ್ಧ” ವನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.
ಪುಸ್ತುತ ದಿನಗಳಲ್ಲಿ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಅಪ್ಪಣ್ಣ, ಓದಲು ಎಷ್ಟು ಸಾಧ್ಯವೊ ಅಷ್ಟು ಓದಬೇಕು. ಇದರಿಂದ ಸಾಹಿತ್ಯ, ಭಾಷೆ, ಜನಪದ ಕಲೆಯ ಬೆಳವಣಿಗೆಯಾಗಲಿದೆ. ನಾವು ಓದಿದ ಪ್ರತಿ ಪುಸ್ತಕವನ್ನು ಸಂಗ್ರಹದ ರೂಪದಲ್ಲಿ ಇಡಬೇಕು. ಅಲ್ಲದೆ ಅದರ ಸಾರಾಂಶವನ್ನು ಮತ್ತೊಬ್ಬರಿಗೆ ತಿಳಿಸುವ ಮೂಲಕ ಸಾಹಿತ್ಯ ಬೆಳವಣಿಗೆಗೆ ಮುಂದಾಗಬೇಕು ಎಂದರು.
ಕೊಡವ ಮಕ್ಕಡ ಕೂಟದ ವತಿಯಿಂದ ಬೊಳ್ಳಜಿರ ಬಿ.ಅಯ್ಯಪ್ಪ ಅವರು ಸಾಹಿತ್ಯ ಕ್ರಾಂತಿ ಮಾಡುತ್ತಿದ್ದು, 71 ಪುಸ್ತಕ ಬಿಡುಗಡೆ ಮಾಡಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಫೀ.ಮಾ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಡಾ.ಮೇಜರ್ ರಾಘವ, ಯಾವುದೇ ಒಂದು ಜನಾಂಗದ ಭಾಷೆ, ಸಂಸ್ಕೃತಿ , ಆಚಾರ, ವಿಚಾರ ಉಳಿಯಬೇಕಾದರೆ ಆ ಭಾಷೆಯಲ್ಲಿ ಕೃತಿಗಳು ಬಿಡುಗಡೆಯಾಗಬೇಕು. ಇಲ್ಲದಿದ್ದರೆ ಭಾಷೆ ಅವನತಿ ಹೊಂದಲು ಕಾರಣವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ನಮ್ಮ ಆಚಾರ, ವಿಚಾರ, ಸಂಸ್ಕೃತಿಯನ್ನು ಉಳಿಸುವಲ್ಲಿ ಹಿರಿಯರ ಕೊಡುಗೆ ಅಪಾರ. ಮುಂದಿನ ಪೀಳಿಗೆಗೆ ಪುಸ್ತಕಗಳ ಮೂಲಕವೂ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಕಾರ್ಯ ಆಗಬೇಕು ಎಂದರು.
ನಾವು ಮಾಡುವ ಪ್ರತೀ ಕಾರ್ಯ ನಮ್ಮ ಜೀವನದ ಭವಿಷ್ಯದ ಖಜಾನೆ ಇದ್ದ ಹಾಗೆ, ಸಮಾಜದ ಕಾನೂನು ಸುವ್ಯವಸ್ಥೆ ಕಾಪಾಡುವುದು ಕೇವಲ ಪೊಲೀಸರ ಕೆಲಸವಲ್ಲ. ನಮ್ಮ ಸಂಸ್ಕೃತಿ, ಇತಿಹಾಸವನ್ನು ಅರ್ಥ ಮಾಡಿಕೊಂಡು ಸೈದ್ಧಾಂತಿಕ ನೆಲೆಯಲ್ಲಿ ಕಾರ್ಯನಿರ್ವಹಿಸಿದರೆ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದರು.
ಎಂ.ಎ ಕೊಡವ ವಿಭಾಗದ ಸಂಯೋಜಕ ಮೇಚಿರ ರವಿಶಂಕರ್ ನಾಣಯ್ಯ ಮಾತನಾಡಿ, ಭಾರತದ ಆಧ್ಯಾತ್ಮಿಕ ಚಿಂತನೆಯಲ್ಲಿ ಕರ್ಮ-ಪ್ರಾರಬ್ಧಕ್ಕೆ ದೊಡ್ಡ ಹಿನ್ನೆಲೆ ಇದ್ದು, ನಾವು ಸಮಾಜಕ್ಕೆ ಏನನ್ನು ನೀಡುತ್ತೇವೆ ಅದೇ ನಮಗೆ ಫಲವಾಗಿ ದೊರಕುತ್ತದೆ. ಇದನ್ನು ಪುಸ್ತಕದಲ್ಲಿ ವಿವರವಾಗಿ ತಿಳಿಸಲಾಗಿದೆ ಎಂದರು.
ಇಂದಿನ ಯುವ ಪೀಳಿಗೆಗೆ ಸಂಸ್ಕೃತಿ, ಪದ್ಧತಿಯ ಬಗ್ಗೆ ಅರಿವಿಲ್ಲ, ಇಂಗ್ಲೀಷ್ ಬಳಕೆಯಿಂದ ಮೂಲ ಕೊಡವ ಭಾಷೆಯ ಪದ ಬಳಕೆ ಕಡಿಮೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಜೀವನಚಕ್ರದ ಸುಳಿಯಲ್ಲಿ ಸಂಬಂಧಗಳಿಗೆ ಪ್ರಾಮುಖ್ಯಕತೆ ನೀಡುವ ಮೂಲಕ ಮುಂದಿನ ಯುವ ಪೀಳಿಗೆಗೆ ಉತ್ತಮ ವಾತಾವರಣವನ್ನು ಕಲ್ಪಿಸಬೇಕು ಎಂದು ಸಲಹೆ ನೀಡಿದರು.
ಕೊಡವ ಮಕ್ಕಡ ಕೂಟದಿಂದ ಸಾಲು ಸಾಲು ಪುಸ್ತಕಗಳನ್ನು ಬಿಡುಗಡೆ ಮಾಡಿ ಕೊಡವ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಲಾಗುತ್ತಿದೆ. ಮುಂದೆಯೂ ಹಲವು ಪುಸ್ತಕಗಳನ್ನು ಬಿಡುಗಡೆ ಮಾಡುವ ಮೂಲಕ ಕೊಡವ ಆಚಾರ, ವಿಚಾರ, ಸಂಸ್ಕೃತಿಯ ಬೆಳವಣಿಗೆಗೆ ಸಹಕಾರಿಯಾಗಲಿ ಎಂದರು.
“ಕರ್ಮ-ಪ್ರಾರಬ್ಧ” ಪುಸ್ತಕದ ಬರಹಗಾರ ಹಾಗೂ ಸಾಹಿತಿ ಕೊಟ್ಟುಕತ್ತಿರ ಜಾಲಿ ಸೋಮಣ್ಣ ಮಾತನಾಡಿ, ಪ್ರತಿಯೊಂದು ಜೀವಿಯೂ ತನ್ನ ಜೀವಿತದ ಅವಧಿಯಲ್ಲಿ ಮಾಡುವ ಕೆಲಸ ಕಾರ್ಯಗಳು ಕರ್ಮ ಸಿದ್ಧಾಂತಕ್ಕೆ ಒಳಪಟ್ಟಿರುತ್ತವೆ. ಕರ್ಮದಿಂದ ಉಂಟಾದ ಫಲವನ್ನು ವ್ಯಕ್ತಿ ಅನುಭವಿಸಲೇ ಬೇಕು. ಪ್ರಾರಬ್ಧ ಎಂದರೆ ಹಿಂದೆ ಜನ್ಮ ಜನ್ಮಗಳಲ್ಲಿ ಮಾಡಿದ ಕರ್ಮಗಳಲ್ಲಿ ಕೆಲವು ಈ ಜನ್ಮದಲ್ಲಿ ಪ್ರಭಾವ ಬೀರುತ್ತವೆ. ಆದ್ದರಿಂದ ನಮ್ಮ ಜೀವತಾವಧಿಯಲ್ಲಿ ಉತ್ತಮ ಕಾರ್ಯಗಳನ್ನು ಮಾಡುವ ಮೂಲಕ ಪ್ರೀತಿಯಿಂದ ಎಲ್ಲವನ್ನು ಪಡೆದುಕೊಳ್ಳುವಂತಾಗಬೇಕು ಎಂದು ಹೇಳಿದರು.
ವೃತ್ತಿಗೂ, ಜೀವನಕ್ಕೂ ಬಹಳ ವ್ಯತ್ಯಾಸವಿದೆ, ಇಂದು ಸಮಾಜದ ಬಹುತೇಕರಲ್ಲಿ ಹಣವಿದ್ದಲ್ಲಿ ಅಧಿಕಾರ ಪಡೆಯಬಹುದೆಂಬ ನಂಬಿಕೆ ಇದೆ. ಆದರೆ ನಿಜಕ್ಕೂ ಇದು ಸತ್ಯಕ್ಕೆ ದೂರವಾದ ಮಾತು ಎಂದರು.
::: ದಾಖಲೆಯ 71 ನೇ ಪುಸ್ತಕ :::
ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ಸಾಮಾಜಿಕ ಕಳಕಳಿ, ಕೊಡಗಿನ ಅಭ್ಯುದಯ, ಸಂಸ್ಕೃತಿ, ಸಾಹಿತ್ಯ, ಆಚಾರ ವಿಚಾರದ ಬೆಳೆವಣಿಗೆಯ ಮೇಲಿನ ಆಸಕ್ತಿಯಿಂದ ಕೂಟ ನಿರಂತರ ಕಾರ್ಯನಿರ್ವಹಣೆಯಲ್ಲಿ ತೊಡಗಿದೆ. ಜಿಲ್ಲೆಯ ಸಾಹಿತ್ಯ ಪ್ರತಿಭೆಗಳಿಗೆ ನಿರಂತರವಾಗಿ ವೇದಿಕೆಯನ್ನು ಕಲ್ಪಿಸಿಕೊಡುತ್ತಾ ಬಂದಿದೆ. ಕಳೆದ ಅನೇಕ ವರ್ಷಗಳಿಂದ ಉದಯೋನ್ಮುಖ ಬರಹಗಾರರಿಗೆ ಪ್ರೋತ್ಸಾಹ ನೀಡುತ್ತಾ ಕೊಡಗಿನ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸುವ ಪ್ರಯತ್ನವನ್ನು ನಾವು ಮಾಡಿದ್ದೇವೆ ಎಂದು ತಿಳಿಸಿದರು.
ಜಿಲ್ಲೆಯ ಹಲವು ಬರಹಗಾರರು, ಸಾಹಿತಿಗಳು ಬರೆದ ಕೊಡವ, ಕನ್ನಡ, ಇಂಗ್ಲೀಷ್, ಹಿಂದಿ ಸೇರಿದಂತೆ ಒಟ್ಟು 70 ಕೃತಿಗಳನ್ನು ಬಿಡುಗಡೆ ಮಾಡಿದ್ದು, ಇದೀಗ 71 ನೇ ಪುಸ್ತಕವಾಗಿ “ಕರ್ಮ-ಪ್ರಾರಬ್ಧ” ವನ್ನು ಬಿಡುಗಡೆ ಮಾಡುತ್ತಿರುವುದು ಹೆಮ್ಮೆ ಎನಿಸಿದೆ ಎಂದು ಅಯ್ಯಪ್ಪ ಹೇಳಿದರು.
ಕೊಡವ ಮಕ್ಕಡ ಕೂಟದ ಐದು ಪುಸ್ತಕಗಳಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿ ಲಭಿಸಿದ್ದು, ನಾಲ್ಕು ಪುಸ್ತಕಗಳು ಕೊಡವ ಚಲನಚಿತ್ರವಾಗಿ ತೆರೆ ಮೇಲೆ ಪ್ರದರ್ಶನ ಕಂಡಿದೆ.
ಜಾತಿ ಧರ್ಮ, ಭೇದವಿಲ್ಲದೆ ಹಲವು ದಾಖಲೀಕರಣ ಪುಸ್ತಕ, ಸಾಧಕರ ವಿವರದ ಪುಸ್ತಕ ಕೊಡಗಿನ ಹಾಗೂ ಕೊಡವ ಆಚಾರ, ವಿಚಾರಗಳಿಗೆ ಸಂಬಂಧಪಟ್ಟ ಪುಸ್ತಕ, ಮಹಾವೀರ ಚಕ್ರ ಪುರಸ್ಕೃತ ವೀರ ಯೋಧರ ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲೂ ಸಾಹಿತ್ಯ ಬೆಳವಣಿಗೆಗೆ ಕಾರ್ಯನಿರ್ವಹಿಸುವುದಾಗಿ ಅಯ್ಯಪ್ಪ ತಿಳಿಸಿದರು.
ನಿರ್ದೇಶಕ, ನಟ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಪುಸ್ತಕ ದರ ಕಡಿಮೆ ಇದ್ದರೂ ಕೊಂಡುಕೊಳ್ಳುವವರ ಸಂಖ್ಯೆ ಕಡಿಮೆ ಇದೆ. ಸಾಮಾಜಿಕ ಜಾಲತಾಣಗಳ ಬಳಕೆ ಕಡಿಮೆಯಾದಲ್ಲಿ ಓದುಗರ ಸಂಖ್ಯೆ ಹೆಚ್ಚಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಹಾಗೂ ಎಂ.ಎ ಕೊಡವ ಉಪನ್ಯಾಸಕಿ ಬಾಚರಣಿಯಂಡ ರಾಣು ಅಪ್ಪಣ್ಣ, ಎಂ.ಎ ಕೊಡವ ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು.
ಕೊಡವ ಎಂ.ಎ ವಿದ್ಯಾರ್ಥಿ ಬೊಪ್ಪಂಡ ಶ್ಯಾಮ್ ಪೂಣಚ್ಚ ಅವರು ಬರಹಗಾರ ಕೊಟ್ಟುಕತ್ತಿರ ಜಾಲಿ ಸೋಮಣ್ಣ ಅವರ ಪರಿಚಯ ಮಾಡಿದರು. ಎಂ.ಎ ವಿದ್ಯಾರ್ಥಿಗಳಾದ ಐಚಂಡ ರಶ್ಮಿ ಮೇದಪ್ಪ ಸ್ವಾಗತಿಸಿ, ಕರವಂಡ ಸೀಮಾ ಗಣಪತಿ ಪ್ರಾರ್ಥಿಸಿದರು. ಬೊಳ್ಳಜಿರ ಯಮುನಾ ಅಯ್ಯಪ್ಪ ನಿರೂಪಿಸಿ, ಪುತ್ತರಿರ ವನಿತ ಮುತ್ತಪ್ಪ ವಂದಿಸಿದರು.
Breaking News
- *ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಸಾಂಸ್ಕೃತಿಕ ಕಲರವ*
- *ಕಬ್ಬಚ್ಚಿರ ರಶ್ಮಿ ಕಾರ್ಯಪ್ಪಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ*
- *ಬೋಯಿಕೆರಿ ಅಂಗನವಾಡಿಯಲ್ಲಿ ನಿವೃತ್ತ ಕಾರ್ಯಕರ್ತೆಯರಿಗೆ ಬೀಳ್ಕೊಡುಗೆ : ಸಂಸ್ಕಾರವಂತ ಸಮಾಜ ನಿರ್ಮಾಣದ ರೂವಾರಿಗಳು ಅಂಗನವಾಡಿ ತಾಯಂದಿರು : ತೆನ್ನಿರ ಮೈನಾ ಶ್ಲಾಘನೆ*
- *ವ್ಯಾoಡಮ್ ಎಂಟರ್ಪ್ರೈಸಸ್ ನ ವಾರ್ಷಿಕೋತ್ಸವ : ನ.24 ರಂದು ಲಕ್ಕಿ ಡ್ರಾ ಸಮಾರಂಭ*
- *ಮಾದರಿ ವಿಶೇಷಚೇತನರ ಸ್ವ ಸಹಾಯ ಸಂಘ ಹಾಗೂ ಮಾದರಿ ಗ್ರಾಮ/ ಪಟ್ಟಣ ಪಂಚಾಯತ್ ಪ್ರಶಸ್ತಿಗೆ ಅರ್ಜಿ ಆಹ್ವಾನ*
- *ಹೊಸ್ಕೇರಿಬೆಟ್ಟ ಅಂಗನವಾಡಿ ಕೇಂದ್ರದಲ್ಲಿ ಬಾಲ ಮೇಳ*
- *ಕೊಡಗು : ಸಹಕಾರ ಸಂಘಗಳ ಸುಸ್ಥಿರತೆಗೆ ಎಲ್ಲರೂ ಶ್ರಮಿಸಿ : ಕೆ.ಎನ್.ರಾಜಣ್ಣ ಸಲಹೆ*
- *ಮಡಿಕೇರಿಯಲ್ಲಿ ಪೌರಕಾರ್ಮಿಕರ ದಿನಾಚರಣೆ : ಪೌರಕಾರ್ಮಿಕರಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ : ಡಾ.ಮಂತರ್ ಗೌಡ*
- *ವೀರ ಸೇನಾನಿಗಳಿಗೆ ಅಗೌರವ : ಕಿಡಿಗೇಡಿಯನ್ನು ಬಂಧಿಸಲು ನಾಪೋಕ್ಲು ಕೊಡವ ಸಮಾಜ ಒತ್ತಾಯ*
- *ಇಂದಿರಾ ನಗರ : ನೂತನ ಕಾಂಕ್ರೀಟ್ ರಸ್ತೆ ಉದ್ಘಾಟಿಸಿದ ಶಾಸಕ ಡಾ.ಮಂತರ್ ಗೌಡ*