ಮಡಿಕೇರಿ ಆ.6 : ಹವಾಗುಣದಲ್ಲಾಗುತ್ತಿರುವ ಏರುಪೇರಿನಿಂದ ಜಿಲ್ಲೆಯ ರೈತರು ಸಂಕಷ್ಟ ಎದುರಿಸುತ್ತಿದ್ದು, ಸರ್ಕಾರ ಕೃಷಿಕರ ಸಾಲಮನ್ನಾಕ್ಕೆ ಕ್ರಮ ಕೈಗೊಳ್ಳಬೇಕು. ರೈತರ ಪರವಾಗಿ ಚೆಟ್ಟಳ್ಳಿ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಮೂಲಕ ರಾಜ್ಯ ಸರಕಾರಕ್ಕೆ ಪತ್ರ ಬರೆದು ಸಾಲಮನ್ನಾ ಮಾಡಬೇಕೆಂದು ಒತ್ತಾಯಿಸುವುದಾಗಿ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ತಿಳಿಸಿದ್ದಾರೆ.
ಚೆಟ್ಟಳ್ಳಿಯ ನರೇಂದ್ರಮೋದಿ ಭವನದಲ್ಲಿ ನಡೆದ ಚೆಟ್ಟಳ್ಳಿ ಸಹಕಾರ ಸಂಘದ 46ನೇ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸ್ತುತ ಸಂಘ 53.42 ಲಕ್ಷ ರೂ. ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.15 ರಷ್ಟು ಡಿವಿಡೆಂಟ್ ನೀಡಲಾಗುತ್ತಿದೆ. ಸಾಲಮನ್ನಾ ಮತ್ತು ಬಡ್ಡಿಮನ್ನಾದ ಹಣ ಬಂದರೆ ಸಂಘ ಮತ್ತಷ್ಟು ಪ್ರಗತಿ ಸಾಧಿಸಲಿದೆ ಎಂದರು.
ಸಂಘದಲ್ಲಿ ಕುಡಿಯುವ ನೀರಿನ ಘಟಕ, ವಸತಿಗ್ರಹ, ವಿವಿಧ ರೀತಿಯ ಸಾಲ ಯೋಜನೆ, ಗೊಬ್ಬರ ಮಾರಾಟ, ಆರ್‌ಟಿಸಿ ಹಾಗೂ ಛಾಪಾ ಕಾಗದ ಸೌಲಭ್ಯಗಳಿವೆ. ಮುಂದಿನ ದಿನಗಳಲ್ಲಿ ಸಂಘದ ವತಿಯಿಂದ ನೂತನ ಎಲೆಕ್ಟಿçಕ್ ವಾಹನ ಚಾರ್ಜಿಂಜ್ ಪಾಯಿಂಟ್, ಸಂಘದ ಹಿಂಬದಿಯ ಜಾಗದಲ್ಲಿ ಬಡವರಿಗೆ ಅನುಕೂಲವಾಗುವ ಡಯಾಲಿಸ್ ಕೇಂದ್ರ, ನೆಮ್ಮದಿ ಕೇಂದ್ರ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಸಹಕಾರ ಸಂಘ ಮಾಡಲಿದೆ ಎಂದು ತಿಳಿಸಿದರು.
ಚೆಟ್ಟಳ್ಳಿ ವ್ಯಾಪ್ತಿಯ ದೇವಾಲಯಗಳ ಅಭಿವೃದ್ಧಿಗೆ, ಕೊಡವ ಮತ್ತು ಗೌಡ ಸಮಾಜ ಕುಟುಂಬದ ಕೈಮಡಗಳ ಅಭಿವೃದ್ಧಿಗೆ, ಯಾವುದೇ ಸಮುದಾಯ ಭವನ ನಿರ್ಮಾಣಕ್ಕೆ ಚೆಟ್ಟಳಿ ಸಹಕಾರ ಸಂಘದಿoದ ತಲಾ ರೂ.50 ಸಾವಿರ ಆರ್ಥಿಕ ನೆರವು ನೀಡಲಾಗುವುದು ಎಂದು ಮಣಿ ಉತ್ತಪ್ಪ ಭರವಸೆ ನೀಡಿದರು.
ಎಲ್ಲಾ ವರ್ಗದ ಜನರ ಸಹಕಾರ, ಸಿಬ್ಬಂದಿಗಳ ಕಾರ್ಯದಕ್ಷತೆ ಮತ್ತು ಒಗ್ಗಟ್ಟಿನ ಫಲದಿಂದ ಇಂದು ಸಂಘ ಪ್ರಗತಿಯನ್ನು ಸಾಧಿಸಿದೆ ಎಂದರು.
::: ಸನ್ಮಾನ :::
ಲೆಕ್ಕ ಪರಿಶೋಧಕರಾಗಿ ಸೇವೆ ಸಲ್ಲಿಸಿದ ಹೆಚ್.ಬಿ.ರಮೇಶ್ ಅವರನ್ನು ಸಭೆಯಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು. ರಾಜ್ಯ ಪ್ರಶಸ್ತಿ ವಿಜೇತ ಪತ್ರಕರ್ತ ಪುತ್ತರಿರ ಕರುಣ್ ಕಾಳಯ್ಯ ಹಾಗೂ ಹಿರಿಯ ಸಾಹಿತಿ, ಸಂಘದ ಉಪಾಧ್ಯಕ್ಷ ಕಣಜಾಲು ಪೂವಯ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಉತ್ತಮ ಅಂಕ ಪಡೆದ 7 ನೇ ತರಗತಿಯಿಂದ ಪದವಿ ಶಿಕ್ಷಣದವರೆಗಿನ ಸಂಘದ ಸದಸ್ಯರ ಮಕ್ಕಳಿಗೆ ನೆನಪಿನ ಕಾಣಿಕೆ ನೀಡಿ ಪ್ರೋತ್ಸಾಹಿಸಲಾಯಿತು.
ಸಂಘದಿoದ ಹೆಚ್ಚು ಸಿಮೆಂಟ್ ಖರೀದಿಸಿ ನೂತನ ಗೃಹ ನಿರ್ಮಾಣ ಮಾಡಿದ ಕೊಂಗೇಟಿರ ವಾಣಿ ಕಾಳಪ್ಪ ಹಾಗೂ ಹಿರಿಯ ಸಿಬ್ಬಂದಿ ಹೆಚ್.ಸಿ.ಹರಿಣಿ ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಮಡಿಕೇರಿ ಗೌಡಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ, ಚೇರಳಗೌಡ ಸಮಾಜದ ಅಧ್ಯಕ್ಷ ಅಯ್ಯಂಡ್ರ ರಾಘವಯ್ಯ, ಚೆಟ್ಟಳ್ಳಿ ಕೊಡವ ಸಮಾಜದ ನಿರ್ದೇಶಕ ಬಟ್ಟೀರ ರಕ್ಷ ಕಾಳಪ್ಪ, ನಿರ್ದೇಶಕರಾದ ಪುತ್ತರಿರ. ಎಂ.ಸೀತಮ್ಮ, ಕೆ.ಅಪ್ಪಣ್ಣ, ಪೇರಿಯನ, ಎಸ್.ಪೂಣಚ್ಚ, ಪುತ್ತರಿರ ಪಿ.ನಂಜಪ್ಪ, ನೂಜಿಬೈಲು ಡಿ.ನಾಣಯ್ಯ, ಅಡಿಕೇರ ಈ.ಮುತ್ತಪ್ಪ, ಮರದಾಳು ಎಸ್.ಉಲ್ಲಾಸ, ಬಿ.ಎಂ.ಕಾಶಿ, ಧನಂಜಯ ಟಿ.ಎಸ್, ಶಾಂತಪ್ಪ ಬಿ, ಬಿ.ಕೆ.ಸೀತಮ್ಮ, ಆರ್ಥಿಕ ಬ್ಯಾಂಕಿನ ಪ್ರತಿನಿಧಿ ಚಿತ್ರವಲ್ಲಿ ಕೆ.ಕೆ. ಉಪಸ್ಥಿತರಿದ್ದಾರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಂದಿಸಿ ಕೆ.ಎಸ್ ಪ್ರಾರ್ಥಿಸಿ, ಬಲ್ಲಾರಂಡ ಮಣಿ ಉತ್ತಪ್ಪ ಸ್ವಾಗತಿಸಿ, ನಂದಿನಿ ಕೆ.ಎಸ್ ವಂದಿಸಿದರು.










