ವಿರಾಜಪೇಟೆ ಆ.7 : ಕೊಡಗಿನಲ್ಲಿ ಮುಂಗಾರು ಮಳೆಯ ಏರಿಳಿತದ ನಡುವೆ ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ಇದರ ಮಧ್ಯೆ “ಗ್ರಾಮೀಣ ಕೆಸರು ಗದ್ದೆ ಕ್ರೀಡಾಕೂಟ” ವೈಭವದಿಂದ ನಡೆಯುತ್ತಿದೆ.
ವಿರಾಜಪೇಟೆಯ ಅರಮೇರಿ ಕಳಂಚೇರಿ ಮಠದ ಎಸ್.ಎಂ.ಎಸ್. ವಿದ್ಯಾಪೀಠ ಇಂತಹದ್ದೊಂದು ಕ್ರೀಡಾಕೂಟ ದೇಸೀ ಸೊಗಡನ್ನು ಅನಾವರಣಗೊಳಿಸಿತ್ತು. ಕೆಸರುಗದ್ದೆ ಕ್ರೀಡಾಕೂಟದಲ್ಲಿ ವಾಲಿಬಾಲ್, ಥ್ರೋಬಾಲ್, ಕಬ್ಬಡ್ಡಿ, ರನ್ನಿಂಗ್ ಮೊದಲಾದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಮಕ್ಕಳು ಮನಸೋ ಇಚ್ಛೆ ಖುಷಿಪಟ್ಟರು.
ಮೋಡ ಮುಸುಕಿದ ವಾತಾವರಣ, ಭತ್ತದ ನಾಟಿಗೆ ಸಿದ್ಧಗೊಂಡಿದ್ದ ಕೆಸರು ಗದ್ದೆಯಲ್ಲಿ, ಕೆಸರಿನಲ್ಲಿ ಶಾಲಾ ವಿದ್ಯಾರ್ಥಿಗಳು ಗದ್ದೆಗೆ ಇಳಿದು ನಾನಾ ಸ್ಪರ್ಧೆಗಳಲ್ಲಿ ಪಾಲ್ಗೊಂಡರು.
ಪ್ರತ್ಯೇಕವಾಗಿ ಕೆಸರು ಗದ್ದೆ ಓಟ, ವಾಲಿಬಾಲ್, ಥ್ರೋಬಾಲ್, ವಿವಿಧ ಸ್ಪರ್ಧೆಗಳು ನಡೆದವು. ಇದರೊಂದಿಗೆ ಕೆಸರಿನಲ್ಲಿ ವಿದ್ಯಾರ್ಥಿಗಳ ರೋಚಕ ನೃತ್ಯ ಕ್ರೀಡೆಗೆ ಸಾಂಸ್ಕೃತಿಕ ಮೆರುಗನ್ನು ನೀಡಿತು, ಬಹುತೇಕ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಪಾಲ್ಗೊಂಡಿದ್ದರು. ಕೆಸರು ಗದ್ದೆಯಲ್ಲಿ ಎದ್ದು ಬಿದ್ದು ಖುಷಿಪಟ್ಟರು. ಶಿಕ್ಷಕರು ಇದಕ್ಕೆ ಪ್ರೋತ್ಸಾಹ ನೀಡಿದರು.
ಎಸ್.ಎಂ. ಎಸ್ ಶಾಲೆಯಲ್ಲಿ ಕಳೆದ 15 ವರ್ಷಗಳಿಂದ ಕೆಸರು ಗದ್ದೆ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಿಕೊಂಡು ಬಂದಿದೆ. ಮಕ್ಕಳು ಈ ದಿನಕ್ಕಾಗೇ ಕಾಯುತ್ತಾರೆನೋ ಎಂಬಷ್ಟು ಹುಮ್ಮಸ್ಸು ಗದ್ದೆಯಲ್ಲಿ ಮನೆಮಾಡಿತ್ತು. ಮುಂಗಾರು ಮಳೆ ಸಂದರ್ಭ ಕ್ರೀಡಾಕೂಟ ಹಮ್ಮಿಕೊಳ್ಳುವ ಮೂಲಕ ಕೆಸರಿನಲ್ಲಿ ಮನಸೋಇಚ್ಛೆ ಆಡಿ-ಕುಣಿದು ಖುಷಿಪಟ್ಟರು.
ಚಾಲನೆ : ಪದ್ಮಶ್ರೀ ವಿಜೇತೆ ರಾಣಿ ಮಾಚಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರೆ ಎಸ್‍ಎಮ್‍ಎಸ್ ಪಿ.ಯು ಕಾಲೇಜಿನ ಪ್ರಾಂಶುಪಾಲರಾದ ಸಪ್ನ ಸುಬ್ಬಯ್ಯ ಕ್ರೀಡಾ ಜ್ಯೋತಿಯನ್ನು ಬೆಳಗುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಸಂಸ್ಥೆಯ ಅಧ್ಯಕ್ಷ ಶ್ರೀ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿಗಳು ವಿದ್ಯಾರ್ಥಿಗಳಿಗೆ ಶುಭ ಕೋರಿ ಮಾತನಾಡಿ ಇತ್ತೀಚೆಗೆ ಕೊಡಗಿನಲ್ಲಿ ಜನತೆ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಇದಕ್ಕೆ ಹಲವಾರು ರೀತಿಯ ಸಮಸ್ಯೆಗಳನ್ನು ಕೃಷಿಕರು ಎದುರಿಸುತ್ತಿರುವುದೇ ಕಾರಣವಾಗಿದೆ. ಕೃಷಿ ಸಂಸ್ಕೃತಿ ಕಣ್ಮರೆಯಾಗಬಾರದು ಎಂಬ ಕಾಳಜಿಯಿಂದ ಎಷ್ಟೇ ಕಷ್ಟವಾದರೂ ಭತ್ತದ ಗದ್ದೆಯನ್ನು ನೆಡುವ ಕಾರ್ಯವನ್ನು ಶ್ರೀಮಠವೂ ಮುಂದುವರಿಸುತ್ತಾ ಬಂದಿದೆ. ಕೆಸರಿನಲ್ಲಿ ಆಡುವ ಮಕ್ಕಳಿಗೂ, ಮಣ್ಣಿನಲ್ಲಿ ಕೆಲಸ ಮಾಡುವ ರೈತನಿಗೂ ಶೀಘ್ರವಾಗಿ ಯಾವುದೇ ರೋಗಗಳು ಹತ್ತಿರ ಸುಳಿಯುವುದಿಲ್ಲ. ಮಣ್ಣಿಗೆ ಅಷ್ಟೊಂದು ರೋಗ ನಿರೋಧಕ ಶಕ್ತಿ ಇದೆ. ಈ ಕಾರಣಕ್ಕಾಗಿ ಮಕ್ಕಳಿಗೆ ವರ್ಷಕ್ಕೆ ಒಮ್ಮೆಯಾದರೂ ಈ ರೀತಿಯ ಗ್ರಾಮೀಣ ಕ್ರೀಡೆಯನ್ನು ಆಯೋಜಿಸುವ ಮುಖಾಂತರ ವಿದ್ಯಾರ್ಥಿಗಳು ಇನ್ನಷ್ಟು ಪ್ರಕೃತಿಗೆ ಹತ್ತಿರವಾಗುವಂತೆ ಮಾಡುವುದು ಸಂಸ್ಥೆಯ ಉದ್ದೇಶ. ಮಾನಸಿಕ, ದೈಹಿಕ ಕಸರತ್ತಿನ ಜತೆಗೆ ಮನರಂಜನೆಗೆ ಗ್ರಾಮೀಣ ಕ್ರೀಡೆಗಳು ಸಹಕಾರಿಯಾಗಿವೆ. ವಿದ್ಯಾರ್ಥಿಗಳು ಕಂಪ್ಯೂಟರ್, ಮೊಬೈಲ್‍ಗಳಿಂದ ದೂರು ಉಳಿದು ಗ್ರಾಮೀಣ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪದ್ಮಶ್ರೀ ವಿಜೇತೆ ರಾಣಿ ಮಾಚಯ್ಯ ಕೃಷಿಯ ಮಹತ್ವದ ಬಗ್ಗೆ ಮನವರಿಕೆ ಮಾಡಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು.
ಸಂಸ್ಥೆಯ ಪ್ರಾಂಶುಪಾಲರಾದ ಕುಸುಮ್ ಟಿಟೋ ಮಾತನಾಡಿ ಗ್ರಾಮೀಣ ಕ್ರೀಡಾಕೂಟವು ಕಣ್ಮರೆಯಾಗುತ್ತಿರುವ ಈ ಸಂದರ್ಭದಲ್ಲಿ ನಮ್ಮ ಕೃಷಿ, ಕಲೆ, ಕ್ರೀಡೆ ಜನಮಾನಸದಲ್ಲಿ ಉಳಿಯಬೇಕಾದರೆ ಪ್ರತಿಯೊಬ್ಬರು ಇದರ ಉಳಿವಿಗಾಗಿ ಮುಂದಾಗಬೇಕು. ಪಠ್ಯೇತರ ಚಟುವಟಿಕೆಗಳು ಕೂಡ ವಿದ್ಯಾರ್ಥಿಗಳಿಗೆ ಜೀವನ ಮೌಲ್ಯಗಳು ತಿಳಿಸಿ ಕೊಡುತ್ತವೆ. ಇದರಿಂದ ಮಕ್ಕಳ ಮೈಮನಗಳ ಬೆಳವಣಿಗೆಯಾಗುತ್ತದೆ. ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚು ಹಣ ವೆಚ್ಚ ಮಾಡಬೇಕಾಗಿಲ್ಲ. ಜನಮಾನಸದಿಂದ ದೂರಾಗುತ್ತಿರುವ ಕಲೆ ಮತ್ತು ಕ್ರೀಡೆಯ ಉಳಿವಿಗೆ ಪ್ರತಿಯೊಬ್ಬರೂ ಮುಂದಾಗಬೇಕು. ಪಾಠ ಪ್ರವಚನಗಳೊಂದಿಗೆ ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳನ್ನು ಆಯೋಜಿಸಿ ಅದರ ಮುಖಾಂತರ ಜೀವನ ಮೌಲ್ಯಗಳನ್ನು ಕಲಿಸುವಂತಾಗಬೇಕು, ಇದರೊಂದಿಗೆ ಮೈಮನಗಳ ಬೆಳವಣಿಗೆ ಕೂಡ ಆಗುತ್ತದೆ ಮತ್ತು ಮಕ್ಕಳು ಪ್ರಕೃತಿಯೊಂದಿಗೆ ಬೆರೆಯಲು ಮತ್ತಷ್ಟು ಅವಕಾಶ ನೀಡಿದಂತಾಗುತ್ತದೆ ಎಂದು ಹೇಳಿದರು.
ಇದೇ ಸಂದರ್ಭ ಶಾಲಾ ವತಿಯಿಂದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಐಮುಡಿಯಂಡ ರಾಣಿ ಮಾಚಯ್ಯ ಅವರನ್ನು ಸನ್ಮಾನಿಸಲಾಯಿತು.
ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಚಾಲಕರಾದ ಯು.ಸಿ ದಮಯಂತಿ, ಶಾಲಾ ಸಿಬ್ಬಂದಿ ವರ್ಗದವರು ಹಾಜರಿದ್ದು ಕ್ರೀಡಾಕೂಟದ ಯಶಸ್ಸಿಗೆ ಭಾಜನರಾದರು.









