ಮಡಿಕೇರಿ ಆ.7 : “ವಿಶ್ವ ಆದಿಮಸಂಜಾತ ಸ್ಥಳೀಯ ಜನರ” ಅಂತರಾಷ್ಟ್ರೀಯ ದಿನದ ಪ್ರಯುಕ್ತ ಆ.9 ರಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿ ಕೊಡವ ಸ್ವಯಂ ನಿರ್ಣಯ ಹಕ್ಕು ಮತ್ತು ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತತ್ತೆಯನ್ನು ಒಳಗೊಂಡ ವಿವಿಧ ರಾಜ್ಯಾಂಗದತ್ತ ಹಕ್ಕುಗಳ ಬೇಡಿಕೆಗಳ ಕುರಿತು ಗಮನ ಸೆಳೆಯಲಿದೆ ಎಂದು ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.
ಬುಧವಾರ ಬೆಳಗ್ಗೆ 10.30 ಗಂಟೆಗೆ ಶಾಂತಿಯುತ ಧರಣಿ ನಡೆಸಿ ಸ್ವಯಂ ನಿರ್ಣಯದ ಹಕ್ಕುಗಳನ್ನು ಮಂಡಿಸಲಾಗುವುದು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2023ನೇ ವರ್ಷವನ್ನು ಪ್ರಪಂಚದಾದ್ಯಂತದ ಆದಿಮಸಂಜಾತ ಸ್ಥಳೀಯ ಜನರ ಸ್ವಯಂ ನಿರ್ಣಯದ ಹಕ್ಕುಗಳ ವರ್ಷವೆಂದು ಯುಎನ್‍ಒ/ವಿಶ್ವ ರಾಷ್ಟ್ರ ಸಂಸ್ಥೆ ಘೋಷಿಸಿದೆ. ಕೊಡವರು ಕೊಡವ ಪ್ರದೇಶದ ಆದಿಮಸಂಜಾತ ಸ್ಥಳೀಯ ಬುಡಕಟ್ಟು ಜನಾಂಗವಾಗಿದೆ. ಆದ್ದರಿಂದ ಆಂತರಿಕ ರಾಜಕೀಯ ಸ್ವ-ನಿರ್ಣಯದ ಹಕ್ಕುಗಳು ಮತ್ತು ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಕುರಿತು ಆಡಳಿತ ವ್ಯವಸ್ಥೆಯ ಗಮನ ಸೆಳೆಯಲು ಧರಣಿ ನಡೆಸಲಾಗುತ್ತಿದೆ.
ಸ್ವಯಂ ಆಳ್ವಿಕೆ ಮತ್ತು ಇತರ 9 ಶಾಸನ ಬದ್ಧ ಕೊಡವ ಜನಾಂಗೀಯ ಸಮಸ್ಯೆಗಳು ಹಾಗೂ ಹಕ್ಕುಗಳ ಬಗ್ಗೆ ವಿವರಿಸಲಾದ ಮನವಿ ಪತ್ರವನ್ನು ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿ, ಪ್ರಧಾನಮಂತ್ರಿ, ಮುಖ್ಯಮಂತ್ರಿಗಳು, ಕೇಂದ್ರ ಗೃಹಮಂತ್ರಿಗಳು, ಕೇಂದ್ರ ಕಾನೂನು ಮಂತ್ರಿಗಳು, ವಿಶ್ವ ವಿಖ್ಯಾತ ಅರ್ಥಶಾಸ್ತ್ರಜ್ಞರಾದ ಡಾ.ಸುಬ್ರಮಣಿಯನ್ ಸ್ವಾಮಿ, ವಿಶ್ವ ಸಂಸ್ಥೆಯ ಮಹಾ ಕಾರ್ಯದರ್ಶಿ ಮತ್ತು ಯುನೆಸ್ಕೋದ ನಿರ್ದೇಶಕರು ಸೇರಿದಂತೆ ಆಡಳಿತ ವ್ಯವಸ್ಥೆಯ ಪ್ರಮುಖರಿಗೆ ಸಲ್ಲಿಸಲಾಗುವುದು ಎಂದು ನಾಚಪ್ಪ ಹೇಳಿದ್ದಾರೆ.








