ಸುಂಟಿಕೊಪ್ಪ,ಆ.7: ಶಿಶು ಜನಿಸಿದ ಅರ್ಧ ಗಂಟೆಯೊಳಗೆ ತಾಯಿಯ ಸ್ತನ್ಯಪಾನ ನೀಡುವುದರಿಂದ ಶಿಶು ಮರಣವನ್ನು ತಪ್ಪಿಸಬಹುದು ಎಂದು ಕೊಡಗರಹಳ್ಳಿ ಆರೋಗ್ಯ ಕಾರ್ಯಕರ್ತೆ ಲತಾ ಕುಮಾರಿ ಹೇಳಿದರು.
ಕೊಡಗರಹಳ್ಳಿ ಅಂಗನವಾಡಿ ಕೇಂದ್ರ ಮತ್ತು ಕೊಡಗರಹಳ್ಳಿ ಪ್ರಾಥಮಿಕ ಶಾಲೆಯ ಜಂಟಿ ಆಶ್ರಯದಲ್ಲಿ ಕೊಡಗರಹಳ್ಳಿ ಅಂಗನವಾಡಿ ಕೇಂದ್ರದಲ್ಲಿದಲ್ಲಿ ನಡೆದ ವಿಶ್ವ ಸ್ತನ್ಯಪಾನ ಸಪ್ತಾಹ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಪ್ರಾಸ್ತಾವಿಕವಾಗಿ ಅವರು ಮಾತನಾಡಿದರು.
ಕೇಂದ್ರ ಸರಕಾರದ ಈ ಯೋಜನೆ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ನಡೆಸಲಾಗುವ ಪೋಷಣ್ ಮಾಸಾಚರಣೆ ಮಹತ್ವದ ಕುರಿತು ವಿವರಿಸಿದರು.
ಮಗುವಿನ ಬೆಳವಣಿಗೆಗೆ ಪೋಷಕಾಂಶ ಹೊಂದಿರುವ ಆಹಾರ ತಾಯಿ ಹಾಲನ್ನು ಹೊರತುಪಡಿಸಿ ಬೇರೊಂದು ಇಲ್ಲ. ತಾಯಿಯ ಎದೆಹಾಲು ರೋಗ ನಿರೋಧಕ ಶಕ್ತಿಯನ್ನು ಹೊಂದಿದ್ದು, ಅಮೃತಕ್ಕೆ ಸಮಾನವಾಗಿದೆ ಎಂದು ಹೇಳಿದರು.
ಗ್ರಾ.ಪಂ ಸದಸ್ಯೆ ನೀತಾ ಹರೀಶ್ ಮಾತನಾಡಿ, ಎದೆಹಾಲು ನೀಡುವುದು ಪ್ರತಿ ಮಾತೆಯರ ಆದ್ಯ ಕರ್ತವ್ಯವಾಗಿದೆ. ತಾಯಿ ಸ್ತನ್ಯಪಾನವನ್ನು ಯಾರು ಕೃತಕವಾಗಿ ಸೃಷ್ಟಿಸಲು ಸಾಧ್ಯವಿಲ್ಲ. ತಾಯಿ ಮಗುವಿನ ಬಾಂಧವ್ಯವನ್ನು ಹೆಚ್ಚಿಸುತ್ತದೆ. ಸ್ತನ್ಯಪಾನ ಪಾನವನ್ನು ನೀಡುವುದ್ದರಿಂದ ಶಿಶುವು ಸದೃಢ ಆರೋಗ್ಯವಂತಾರಾಗಿ ಬೆಳೆಯಲು ಸಾಧ್ಯವಾಗಲಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ರವೀಶ್, ಸ್ತನ್ಯಪಾನ ಸೇರಿದಂತೆ ತಾಯಿ ಮತ್ತು ಶಿಶುವಿನ ಹಾರೈಕೆಯ ದಿಸೆಯಲ್ಲಿ ಸರಕಾರವು ಹಲವು ಯೋಜನೆಗಳ ಮುಖಾಂತರ ಪೌಷ್ಠಿಕಾಂಶದ ಆಹಾರವನ್ನು ನೀಡುತ್ತಿದೆ. ಅರ್ಹ ಪಲಾನುಭವಿಗಳು ಸುತ್ತ ಮುತ್ತಲಿನ ನಿವಾಸಿ ಹಾಗೂ ಗ್ರಾಮದ ನಿವಾಸಿಗಳಿಗೆ ಸಮಾರಂಭಕ್ಕೆ ಆಗಮಿಸಿದ ಮಂದಿ ಮಾಹಿತಿ ನೀಡುವ ಮೂಲಕ ಅದರ ಅರ್ಹ ಪಲಾನುಭವಿಗಳು ಸದುಪಯೋಗಪಡೆದುಕೊಳ್ಳುವಂತಾಗಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ಕವಿತ, ಸದಸ್ಯೆ ಚೆನ್ನಬಸವಿ, ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಟಿ.ಎಲ್.ಸುಮ, ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿ ಟೆನ್ನಿ ಥೋಮಸ್, ಅಂಗನವಾಡಿ ಕಾರ್ಯಕರ್ತೆ ಎಸ್.ಎನ್.ಸಾವಿತ್ರಿ, ಆಶಾ ಕಾರ್ಯಕರ್ತೆ ಆರ್.ಕವಿತ ಎಂ.ಪಿ.ಗೀತಾ, ಅಂಗನವಾಡಿ ಸಹಾಯಕಿ ಸಂಧ್ಯಾ ಉಪಸ್ಥಿತರಿದ್ದರು.