ಮಡಿಕೇರಿ ಆ.8 : ಹೆಪಟೈಟಿಸ್ ಎಚ್‍ಐವಿಗಿಂತಲೂ ಭೀಕರವಾದ ಕಾಯಿಲೆಯಾಗಿದ್ದು, ಈ ರೋಗ ನಿಯಂತ್ರಣಕ್ಕೆ ಅಗತ್ಯ ಮುನ್ನೆಚ್ಚರ ವಹಿಸುವುದು ಅತ್ಯಗತ್ಯ ಎಂದು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ.ಕಳ್ಳಿಚಂಡ ಕಾರ್ಯಪ್ಪ ಅವರು ಸಲಹೆ ಮಾಡಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ವತಿಯಿಂದ ನಗರದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೋಧಕ ಆಸ್ಪತ್ರೆಯ ಸಭಾಂಗಣದಲ್ಲಿ ಮಂಗಳವಾರ ನಡೆದ ‘ವಿಶ್ವ ಹೆಪಟೈಟಿಸ್ ದಿನ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
1960 ರ ದಶಕದಲ್ಲಿ ಹೆಪಟೈಟಿಸ್ ಬಿ ವೈರಸ್‍ನ್ನು ಕಂಡುಹಿಡಿದ ಅಮೆರಿಕಾ ವಿಜ್ಞಾನಿ ಡಾ.ಬರೂಜ್ ಸ್ಯಾಮುಯಲ್ ಬಂಬರ್ಗ್ ಅವರು ಕ್ಯಾನ್ಸರ್‍ನಂತಹ ಹಲವು ರೋಗಗಳಿಗೆ ಔಷಧಿ ಕಂಡು ಹಿಡಿದರು ಎಂದು ಹೇಳಿದರು.
ಜಿಲ್ಲಾ ಸರ್ಜನ್ ಡಾ.ನಂಜುಂಡಯ್ಯ ಅವರು ಮಾತನಾಡಿ ಹೆಪಟೈಟಿಸ್‍ಗೆ ಲಸಿಕೆ ಕಂಡು ಹಿಡಿಯದಿದ್ದರೆ ಕ್ಯಾನ್ಸರ್‍ನಂತಹ ಹಲವು ಕಾಯಿಲೆಯಿಂದ ಜೀವ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿತ್ತು ಎಂದು ತಿಳಿಸಿದರು. 2030 ರೊಳಗೆ ಹೆಪಟೈಟಿಸ್ ನಿಯಂತ್ರಣಕ್ಕೆ ಎಲ್ಲರೂ ಕೈಜೋಡಿಸಬೇಕಿದೆ ಎಂದು ಅವರು ಹೇಳಿದರು.
ಪಿತ್ತ ಜನಕಾಂಗವು ಮನುಷ್ಯನ ದೇಹದ ಮುಖ್ಯ ಅಂಗವಾಗಿದ್ದು, ಕಾರ್ಬೋಹೈಡ್ರೇಟ್ ಪ್ರೋಟೀನ್‍ಗಳನ್ನು ಪಚನಗೊಳಿಸಿ ದೇಹಕ್ಕೆ ಶಕ್ತಿ ನೀಡುತ್ತದೆ. ಕಲುಷಿತ ನೀರು, ಸ್ವಚ್ಚಗೊಳಿಸದ ಸಿರಂಜ್ ಬಳಕೆ ಹಾಗೂ ತಪಾಸಣೆಗೆ ಒಳಪಡಿಸದ ರಕ್ತ ಪಡೆಯುವುದರಿಂದ ಹೆಪಟೈಟಿಸ್ ಕಾಯಿಲೆ ಬರುತ್ತದೆ ಎಂದು ಡಾ.ನಂಜುಂಡಯ್ಯ ಅವರು ಮಾಹಿತಿ ನೀಡಿದರು.
ಹೆಪಟೈಟಿಸ್ ಎ ಮತ್ತು ಇ ಮಾದರಿಯ ವೈರಸ್‍ಗಳು ಕಲುಷಿತ ಆಹಾರ ಮತ್ತು ನೀರಿನಿಂದ ಹರಡುತ್ತದೆ. ಹೆಪಟೈಟಿಸ್ ಬಿ, ಸಿ, ಡಿ ವೈರಸ್‍ಗಳು ಸೋಂಕು ತಗುಲಿದ ವ್ಯಕ್ತಿಯ ದೇಹದ ರಕ್ತ ಸ್ರಾವದಿಂದ ಹರಡುತ್ತದೆ. ಹೆಪಟೈಟಿಸ್ ಬಿ ಮತ್ತು ಸಿ ಸೋಂಕುಗಳು ಪಿತ್ತ ಜನಕಾಂಗದ ಕ್ಯಾನ್ಸರ್‍ಗೆ ಕಾರಣವಾಗುತ್ತದೆ ಎಂದು ಜಿಲ್ಲಾ ಸರ್ಜನ್ ಅವರು ಮಾಹಿತಿ ನೀಡಿದರು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಎನ್.ಆನಂದ್ ಅವರು ಮಾತನಾಡಿ ಹೆಪಟೈಟಿಸ್‍ನಿಂದ ಆಯಾಸ, ಕೀಲು ನೋವು, ವಾಂತಿ, ಹಸಿವು ಆಗದಿರುವುದು, ಹೊಟ್ಟೆ ನೋವು, ಚರ್ಮ ಹಳದಿ ಬಣ್ಣಕ್ಕೆ ತಿರುಗುವುದು, ರೋಗ ಲಕ್ಷಣವಾಗಿದೆ ಎಂದು ತಿಳಿಸಿದರು.
ಹೆಪಟೈಟಿಸ್ ನಿಯಂತ್ರಿಸಲು ಸುರಕ್ಷಿತವಾದ ನೀರು ಮತ್ತು ಆಹಾರ ಸೇವನೆ, ರಕ್ತ ಪಡೆಯುವಾಗ ಸಾಕಷ್ಟು ಮುಂಜಾಗ್ರತೆ ವಹಿಸುವುದು, ಒಬ್ಬ ವ್ಯಕ್ತಿ ಬಳಸಿದ ಸೂಜಿಯನ್ನು ಮತ್ತೊಬ್ಬ ವ್ಯಕ್ತಿ ಬಳಸದೆ ಇರುವುದರಿಂದ ಹೆಪಟೈಟಿಸ್ ಅನ್ನು ತಡೆಯಬಹುದಾಗಿದೆ ಎಂದರು.
ಈ ಬಾರಿಯ ಹೆಪಟೈಟಿಸ್ ನಿಯಂತ್ರಿಸುವಲ್ಲಿ ‘ಒನ್ ಲೈಪ್, ಒನ್ ಲಿವರ್’ ಘೋಷ ವಾಕ್ಯದಡಿ ಜಾಗೃತಿ ಮೂಡಿಸಲಾಗುತ್ತಿದೆ. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಪಟೈಟಿಸ್ ಕಾಯಿಲೆಗೆ ಉಚಿತ ತಪಾಸಣೆ ಮತ್ತು ಪ್ರಯೋಗಾಲಯ ಸೇವೆಗಳು ಲಭ್ಯವಿದೆ ಎಂದು ಅವರು ತಿಳಿಸಿದರು.
‘ವಿಶ್ವದಲ್ಲಿ ಸುಮಾರು 354 ಮಿಲಿಯನ್ ಜನರು ಹೆಪಟೈಟಿಸ್ ‘ಬಿ’ ಮತ್ತು ‘ಸಿ’ ಯಿಂದ ಬಳಲುತ್ತಿದ್ದಾರೆ. ಹೆಪಟೈಟಿಸ್ ಬಿ ಮತ್ತು ಸಿ ನಿಂದ ಉಂಟಾಗುವ ಸಿರೋಸಿಸ್ ಮತ್ತು ಪಿತ್ತಜನಕಾಂಗ ಕ್ಯಾನ್ಸರ್‍ನಿಂದಾಗಿ ಎಲ್ಲಾ ಹೆಪಟೈಟಿಸ್ ಸಂಬಂಧಿಸಿದ ಸಾವುಗಳು ಶೇ.95 ರಷ್ಟು ಇವೆ ಎಂದು ಡಾ.ಎನ್.ಆನಂದ್ ಅವರು ಮಾಹಿತಿ ನೀಡಿದರು.’
ಭಾರತದಲ್ಲಿ ಅಂದಾಜು 40 ಮಿಲಿಯನ್ ದೀರ್ಘಕಾಲದ ಎಚ್‍ಬಿವಿ ಸೋಂಕಿತ ಜನರನ್ನು ಹೊಂದಿದೆ. ಇದು ವಿಶ್ವದ ಹೊರೆಯ ಶೇ.11 ರಷ್ಟಿದೆ. ಭಾರತದಲ್ಲಿ ದೀರ್ಘಕಾಲದ ಎಚ್‍ಬಿವಿ ಸೋಂಕಿನ ಜನಸಂಖ್ಯೆ ಸುಮಾರು ಶೇ.3-4 ರಷ್ಟಿದೆ ಎಂದು ತಿಳಿಸಿದರು.
ಹೆಪಟೈಟಿಸ್ ‘ಬಿ’ ಒಂದು ವೈರಲ್ ಸೋಂಕು ಆಗಿದ್ದು, ಯಕೃತ್ತಿನ ಮೇಲೆ ದಾಳಿ ಮಾಡುತ್ತದೆ ಮತ್ತು ತೀವ್ರ ದೀರ್ಘ ಕಾಲದ ಕಾಯಿಲೆಗಳಿಗೆ ಕಾರಣವಾಗುತ್ತದೆ. ಸೋಂಕಿತ ವ್ಯಕ್ತಿಯ ರಕ್ತ ಅಥವಾ ಇತರ ದೇಹದ ದ್ರವಗಳ ಸಂಪರ್ಕದ ಮೂಲಕ ವೈರಸ್ ಹರಡುತ್ತದೆ. 1982 ರಿಂದ ಹೆಪಟೈಟಿಸ್ ‘ಬಿ’ ವಿರುದ್ದ ಲಸಿಕೆ ಲಭ್ಯವಿದ್ದು, ಇದನ್ನು ಕ್ಯಾನ್ಸರ್ ವಿರೋಧಿ ಲಸಿಕೆ ಎಂದು ಕರೆಯುತ್ತಾರೆ ಎಂದು ತಿಳಿಸಿದರು.
ಎನ್‍ವಿಎಚ್‍ಸಿಪಿ ನೋಡಲ್ ಅಧಿಕಾರಿ ಡಾ.ಅಬ್ದುಲ್ ಅಜೀಜ್ ಅವರು ಪಿಪಿಟಿ ಮೂಲಕ ಮಾಹಿತಿ ನೀಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್ ಕುಮಾರ್, ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ.ಗೋಪಿನಾಥ್, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯಕೀಯ ಅಧೀಕ್ಷಕರಾದ ಡಾ.ರೂಪೇಶ್ ಗೋಪಾಲ್, ಸ್ಥಾನಿಕ ವೈದ್ಯಾಧಿಕಾರಿ ಡಾ.ಸತೀಶ್, ಇತರರು ಇದ್ದರು.








