ಮಡಿಕೇರಿ ಆ.8 : ಮಣಿಪುರದಲ್ಲಿ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳು ಮತ್ತು ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ಅವಮಾನಿಸಿದ ಘಟನೆಯನ್ನು ಖಂಡಿಸಿ ಹಾಗೂ ಅತ್ಯಾಚಾರದಿಂದ ಅಮಾನವೀಯವಾಗಿ ಹತ್ಯೆಯಾದ ಉಜಿರೆಯ ಸೌಜನ್ಯ ಪ್ರಕರಣವನ್ನು ಮರು ತನಿಖೆ ನಡೆಸುವಂತೆ ಆಗ್ರಹಿಸಿ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ನಗರದಲ್ಲಿ ಪ್ರತಿಭಟನೆ ನಡೆಸಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಮಿತಿಯ ಪ್ರಮುಖರು ಹಾಗೂ ಪದಾಧಿಕಾರಿಗಳು ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಸಮಿತಿಯ ಜಿಲ್ಲಾ ಸಂಚಾಲಕಿ ಗಾಯತ್ರಿ ನರಸಿಂಹ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸುಮಾರು ಮೂರು ತಿಂಗಳಿನಿಂದ ಜನಾಂಗೀಯ ಸಂಘರ್ಷ ಮತ್ತು ಹಿಂಸಾಚಾರದಿಂದ ನಲುಗಿ ಹೋಗಿರುವ ಮಣಿಪುರದಲ್ಲಿ ಕಾನೂನು, ಸುವ್ಯವಸ್ಥೆ ನಿಯಂತ್ರಿಸುವಲ್ಲಿ ವಿಫಲವಾಗಿರುವ ಮಣಿಪುರ ಬೀರೇನ್ ಸಿಂಗ್ ನೇತೃತ್ವದ ಸರ್ಕಾರವನ್ನು ತಕ್ಷಣ ವಜಾಗೊಳಿಸಿ ರಾಷ್ಟ್ರಪತಿ ಆಡಳಿತವನ್ನು ಜಾರಿ ಮಾಡಬೇಕು, ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಿ ಮತ್ತಷ್ಟು ಅಮಾಯಕ ಜೀವಗಳು ಬಲಿಯಾಗುವುದನ್ನು ತಡೆಯಬೇಕು. ದೇಶವ್ಯಾಪಿ ದ್ವೇಷದ ಕಿಚ್ಚು ಹಬ್ಬುವ ಮುನ್ನ ಪ್ರಧಾನಮಂತ್ರಿಗಳು ಎಚ್ಚೆತ್ತುಕೊಳ್ಳಬೇಕು. ದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳ ವಾಸ್ತವತೆಯನ್ನು ಅರಿತು ಅಮಾಯಕರ ರಕ್ಷಣೆಗೆ ಬರಬೇಕು ಎಂದು ಆಗ್ರಹಿಸಿದರು.
ವಿದ್ಯಾರ್ಥಿನಿ ಸೌಜನ್ಯಳ ಹತ್ಯೆಯಾಗಿ 11 ವರ್ಷಗಳೇ ಕಳೆದರೂ ನೈಜ ಆರೋಪಿಯನ್ನು ಬಂಧಿಸದೇ ಇರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದ ಗಾಯತ್ರಿ ನರಸಿಂಹ, ಎಸ್‍ಐಟಿ ತನಿಖೆ ಮೂಲಕ ತಪ್ಪಿತಸ್ಥರನ್ನು ಪತ್ತೆ ಮಾಡಿ ಶಿಕ್ಷೆಗೆ ಗುರಿ ಮಾಡಬೇಕು, ಆ ಮೂಲಕ ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.
ಜಿಲ್ಲಾ ಸಂಘಟನಾ ಸಂಚಾಲಕ ಮನೋಜ್ ಕುಮಾರ್, ಬಾವ ಮಾಲ್ದಾರೆ, ಬೋಜ, ಮಹಿಳಾ ಒಕ್ಕೂಟದ ಜಿಲ್ಲಾ ಸಂಚಾಲಕರಾದ ಶಶಿಕಲಾ, ಭಾಗ್ಯವತಿ, ವಿರಾಜಪೇಟೆ ತಾಲೂಕು ಸಂಚಾಲಕ ಮನು, ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಚಾಲಕಿ ತೀರ್ಥ, ಸದಸ್ಯರಾದ ವೈ.ಕೆ.ಅಯ್ಯಪ್ಪ, ವಿರೇಶ್, ಭರತ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಬೇಡಿಕೆಯ ಮನವಿ ಪತ್ರವನ್ನು ಪ್ರತಿಭಟನಾಕಾರರು ಜಿಲ್ಲಾಧಿಕಾರಿ ವೆಂಕಟ್‍ರಾಜಾ ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದರು.
ಪ್ರತಿಭಟನೆಗೂ ಮುನ್ನ ತೆಲಂಗಾಣದ ಖ್ಯಾತ ಜಾನಪದ ಕಲಾವಿದ, ಹೋರಾಟಗಾರ ಗುಮ್ಮಡಿ ವಿಠಲ್ ರಾವ್ “ಗದ್ದರ್” ಅವರಿಗೆ ಸಂಘಟನೆ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.









