ಮಡಿಕೇರಿ ಆ.8 : ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಸ್ವೀಕರಿಸಲು ನಿರಾಕರಿಸಿದ ಬಿಲ್ ಕಲೆಕ್ಟರ್ ಅನ್ನು ಅಮಾನತುಗೊಳಿಸುವಂತೆ ಆಗ್ರಹಿಸಿ ಕೊಡಗು ಜಿಲ್ಲಾ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಮಡಿಕೇರಿ ತಾಲ್ಲೂಕು ಘಟಕ, ಸಂಪಾಜೆ ಹೋಬಳಿ ಹಾಗೂ ಗ್ರಾಮ ಸಮಿತಿಗಳ ಆಶ್ರಯದಲ್ಲಿ ಸಂಪಾಜೆಯಲ್ಲಿ ಪ್ರತಿಭಟನೆ ನಡೆಯಿತು.
ಸಂಪಾಜೆ ಗೇಟ್ ಬಳಿಯಿಂದ ಮೆರವಣಿಗೆ ಮೂಲಕ ಬಂದ ಪ್ರತಿಭಟನಾಕಾರರು ಗ್ರಾ.ಪಂ ಆವರಣದಲ್ಲಿ ಜಮಾಯಿಸಿ, ಬಿಲ್ ಕಲೆಕ್ಟರ್ ವಿರುದ್ಧ ಘೋಷಣೆ ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತಾನಾಡಿದ ಸಮಿತಿ ಜಿಲ್ಲಾಧ್ಯಕ್ಷ ಹೆಚ್.ಎಲ್.ದಿವಾಕರ್, ಸಂಪಾಜೆ ಗ್ರಾಮ ಪಂಚಾಯತ್ ನಲ್ಲಿ ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ತೆರಳಿದಾಗ ಮನೆ ತೆರಿಗೆ, ನೀರಿನ ತೆರಿಗೆ ಪಾವತಿ ಮಾಡದೇ ಅರ್ಜಿ ಸ್ವೀಕರಿಸಲು ನಿರಾಕರಿಸಿದ ಬಿಲ್ ಕಲೆಕ್ಟರ್ ಅನ್ನು ಅಮಾನತುಗೊಳಿಸುವಂತೆ ಆಗ್ರಹಿಸಿದರು.
ದಲಿತರನ್ನು ಕಡೆಗಣಿಸುವ ಪ್ರಕರಣಗಳು ಕೊಡಗು ಜಿಲ್ಲೆಯ ಪಂಚಾಯತ್ ಗಳಲ್ಲಿ ಕಂಡು ಬರುತ್ತಿದ್ದು, ಇದು ಮುಂದುವರಿದರೆ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಮಡಿಕೇರಿ ತಾಲ್ಲೂಕು ಅಧ್ಯಕ್ಷ ದೀಪಕ್ ಪೊನ್ನಪ್ಪ ಮನವಿ ಪತ್ರವನ್ನು ಓದಿ, ಸಮಸ್ಯೆಯನ್ನು ತಕ್ಷಣವೇ ಬಗೆಹರಿಸಿ ದಲಿತ ಬಂಧುಗಳಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದರು.
ಸಂಪಾಜೆ ಹೋಬಳಿ ಅಧ್ಯಕ್ಷ ಹೆಚ್.ಬಿ.ಶಶಿಕುಮಾರ್, ಉಪಾಧ್ಯಕ್ಷ ಹೆಚ್.ಬಿ.ಸುಂದರ ಹಾಗೂ ಸದಸ್ಯರು ಭಾಗವಹಿಸಿದ್ದರು.








