ಮಡಿಕೇರಿ ಆ.9 : ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಗ್ರಾಮಸ್ಥರಿಗೆ ವಿದ್ಯುತ್ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಯಾವುದೇ ಅಡ್ಡಿ ಇಲ್ಲದೆ ಪೂರೈಸಬೇಕೆಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಚೆಂಬು ಗ್ರಾ.ಪಂ ಸಭಾಂಗಣದಲ್ಲಿ ನಡೆದ ಜನಸ್ಪಂದನ ಸಭೆ ಮತ್ತು ಶಾಸಕರ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸ್ಥಳೀಯ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದ ಶಾಸಕರು ಸ್ಥಳದಲ್ಲೇ ಬಹುತೇಕ ಅಹವಾಲುಗಳಿಗೆ ಪರಿಹಾರ ಸೂಚಿಸಿದರು. ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಗ್ರಾಮಸ್ಥರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅರಣ್ಯ ಇಲಾಖೆ ಅಡ್ಡಿಪಡಿಸಬಾರದು. ಬಡಕುಟುಂಬಗಳಿಗೆ ವಿದ್ಯುತ್ ನೀಡಲು ಚೆಸ್ಕಾಂ ಇಲಾಖೆ ತ್ವರಿತ ಕ್ರಮಗಳನ್ನು ಕೈಗೊಳ್ಳಬೇಕು. ಆನೆ ಹಾವಳಿ ತೀವ್ರಗೊಂಡಿರುವ ಭಾಗದಲ್ಲಿ ಅರಣ್ಯ ಅಧಿಕಾರಿಗಳು ಸೋಲಾರ್ ಬೇಲಿ ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಎ.ಎಸ್.ಪೊನ್ನಣ್ಣ ತಿಳಿಸಿದರು.
ಅರಣ್ಯ ಹಕ್ಕು ಪತ್ರದ ಬಗ್ಗೆ ಈಗಾಗಲೇ ಅರಣ್ಯ ಸಚಿವರು ಹಲವು ಜಿಲ್ಲೆಯ ಪ್ರತಿನಿಧಿಗಳೊಂದಿಗೆ ಚರ್ಚಿಸಿದ್ದು, ಮುಂದಿನ ದಿನಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಒತ್ತಡ ಹೇರುವುದಾಗಿ ಭರವಸೆ ನೀಡಿದರು.
ಕ್ರೀಡಾಂಗಣದ ಬೇಡಿಕೆ ಕುರಿತು ಅಧಿಕಾರಿಯೊಂದಿಗೆ ಚರ್ಚಿಸಿದ ಶಾಸಕರು ಕ್ರೀಡಾಂಗಣಕ್ಕೆ ಸ್ಥಳ ಇರುವುದನ್ನು ಖಾತರಿಪಡಿಸಿ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಸೂಚಿಸಿದರು.
ಅಡಿಕೆಯ ಹಳದಿ ರೋಗದ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಪರ್ಯಾಯ ಬೆಳೆಯ ಬಗ್ಗೆ ಕಾರ್ಯ ಯೋಜನೆ ರೂಪಿಸಲಾಗುವುದು ಎಂದರು.
ಮೊಬೈಲ್ ನೆಟ್‍ವರ್ಕ್ ಸಮಸ್ಯೆಗೆ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಸಣ್ಣ ನೀರಾವರಿ ಇಲಾಖೆಯ ವತಿಯಿಂದ ಅಗತ್ಯವಿರುವ ಸ್ಥಳಗಳಲ್ಲಿ ತಡೆಗೋಡೆ ನಿರ್ಮಿಸಬೇಕು ಎಂದು ಪೊನ್ನಣ್ಣ ತಿಳಿಸಿದರು.
ಸಭೆಗೂ ಮೊದಲು ಅವರು ಮಾರ್ಪಡ್ಕ ಸೇತುವೆ ಪರಿಶೀಲಿಸಿ ನಂತರ ಊರುಬೈಲು ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿದರು.
ಸಭೆಯಲ್ಲಿ ಗ್ರಾಮಸ್ಥರು ಪೊನ್ನಣ್ಣ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.
ಕಂದಾಯ ಹಕ್ಕುಪತ್ರ ಸಮಸ್ಯೆ ಬಗ್ಗೆ ರಘುನಾಥ್ ಬಾಲಂಬಿ, ಅರಣ್ಯ ಇಲಾಖೆಯ ಹಕ್ಕುಪತ್ರ ಸಮಸ್ಯೆ ಬಂಗಾರಕೋಡಿ ವೆಂಕಟರಮಣ, ಆನೆ ಹಾವಳಿ ಹೊದ್ದಟ್ಟಿ ಉದಯಕುಮಾರ್, ವಿದ್ಯುತ್ ಸಮಸ್ಯೆ ಯಶೋಧ, ಸುಸಜ್ಜಿತ ಕ್ರೀಡಾಂಗಣ ಒದಗಿಸುವ ಬಗ್ಗೆ ಗರುಡ ಯುವಕ ಮಂಡಲದ ಸದಸ್ಯರು, ನೆಟ್ವರ್ಕ್ ಸಮಸ್ಯೆ ಬಗ್ಗೆ ಪಕೀರ ಮರ್ದಾಳ, ಜಲಜೀವನ್ ಸಮಸ್ಯೆ ಬಗ್ಗೆ ರವಿರಾಜ್ ಹೊಸೂರು, ಅಡಿಕೆಯ ಹಳದಿ ರೋಗದ ಬಗ್ಗೆ ನವೀನ ರಾಮಕಜೆ, ವಿದ್ಯಾರ್ಥಿಗಳಿಗೆ ವಸತಿ ನಿಲಯ ಬೇಡಿಕೆ ಬಗ್ಗೆ ಗಣಪಯ್ಯ ಗುಂಡಿಮಜಲ್ ಸೇರಿದಂತೆ ಹಲವರು ಬೇಡಿಕೆಗಳನ್ನು ಶಾಸಕರ ಮುಂದಿಟ್ಟರು.
ತಹಶೀಲ್ದಾರ್ ಕಿರಣ್ ಗೌರಯ್ಯ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಶೇಖರ್, ಗ್ರಾಮ ಪಂಚಾಯತ್ ಪ್ರತಿನಿಧಿಗಳು ಉಪಸ್ಥಿತರಿದ್ದರು. ಗ್ರಾ.ಪಂ ಸದಸ್ಯ ಗಿರೀಶ್ ಹೊಸೂರು ಸ್ವಾಗತಿಸಿದರು. ಗ್ರಾಮಸ್ಥರ ಬೇಡಿಕೆಗಳನ್ನು ಸೂರಜ್ ಹೊಸೂರು ವಿವರಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹದೇವ ಪ್ರಭು ಕಾರ್ಯಕ್ರಮ ನಡೆಸಿಕೊಟ್ಟರು.
Breaking News
- *ವೀರ ಸೇನಾನಿಗಳಿಗೆ ಅಗೌರವ : ಕಿಡಿಗೇಡಿಯನ್ನು ಬಂಧಿಸಲು ನಾಪೋಕ್ಲು ಕೊಡವ ಸಮಾಜ ಒತ್ತಾಯ*
- *ಇಂದಿರಾ ನಗರ : ನೂತನ ಕಾಂಕ್ರೀಟ್ ರಸ್ತೆ ಉದ್ಘಾಟಿಸಿದ ಶಾಸಕ ಡಾ.ಮಂತರ್ ಗೌಡ*
- *ವೀರ ಸೇನಾನಿಗಳಿಗೆ ಅಪಮಾನ : ವ್ಯಾಲಿಡ್ಯೂ ಕೊಡವ ಕಲ್ಚರಲ್ ಅಸೋಸಿಯೇಷನ್ ಖಂಡನೆ*
- *ವೀರ ಸೇನಾನಿಗಳಿಗೆ ಅಗೌರವ : ಜಿಲ್ಲಾ ಬಿಜೆಪಿಯಿಂದ ಎಸ್ಪಿಗೆ ದೂರು*
- *ಮಡಿಕೇರಿಯಲ್ಲಿ ವಕೀಲರ ಸಂಘದಿಂದ ಪ್ರತಿಭಟನೆ*
- *ಜಿಲ್ಲಾ ಮಟ್ಟದ ಯುವಜನೋತ್ಸವ : ಹೆಸರು ನೋಂದಾಯಿಸಿಕೊಳ್ಳಲು ನ.28 ಕೊನೆ ದಿನ*
- *ನ.26 ರಂದು ಸಿಎನ್ಸಿಯಿಂದ ಕೊಡವ ನ್ಯಾಷನಲ್ ಡೇ ಮತ್ತು ಸಂವಿಧಾನ ದಿನಾಚರಣೆ*
- *ನ.24 ರಂದು ಕೊಡಗು ಜಿಲ್ಲಾ ಕಿವುಡರ ಸಂಘದ ಸಭೆ*
- *ಕುಶಾಲನಗರದಲ್ಲಿ ಅಕ್ಷರ ಜ್ಯೋತಿ ಯಾತ್ರೆಗೆ ಸ್ವಾಗತ : ಉತ್ತಮ ಸಂಸ್ಕಾರ, ಸದ್ಗುಣ ಬೆಳೆಸಿಕೊಳ್ಳಲು ಬಸವಕುಮಾರ್ ಪಾಟೀಲ್ ಕರೆ*
- *ನ.29 ರಂದು ಮೂರ್ನಾಡುವಿನಲ್ಲಿ 69ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ*