ಮಡಿಕೇರಿ ಆ.9 : ಡಿವೈನ್ ಪಾರ್ಕ್ ಟ್ರಸ್ಟ್(ರಿ)ಸಾಲಿಗ್ರಾಮ ಅಂಗಸಂಸ್ಥೆಗಳಾದ ವಿವೇಕ ಜಾಗೃತ ಬಳಗ ಮಡಿಕೇರಿ, ಮೂರ್ನಾಡು, ಕುಶಾಲನಗರ, ಸೋಮವಾರಪೇಟೆ ಬಳಗದ ವತಿಯಿಂದ ಆ.12ರಂದು “ಯೋಗ ಪರ್ಯಟನ’ ಕಾರ್ಯಕ್ರಮ ನಡೆಯಲಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾರ್ಯಕ್ರಮದ ಸಂಚಾಲಕ ಡಿ.ಎಸ್.ಯಶವಂತ್, ಅಂದು ಬೆಳಿಗ್ಗೆ 11 ಗಂಟೆಗೆ ಮೂರ್ನಾಡುವಿನ ಗೌಡ ಸಮಾಜದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಮತ್ತು ಪ್ರಕೃತಿ ಚಿಕಿತ್ಸೆ ಆಯುರ್ವೇದ ಆಸ್ಪತ್ರೆಯ ಮುಖ್ಯಸ್ಥ ಡಾ.ವಿವೇಕ ಉಡುಪ ದಿವ್ಯ ಉಪಸ್ಥಿತರಿರಲಿದ್ದಾರೆ ಎಂದರು.
ಕಾರ್ಯಕ್ರಮಕ್ಕೆ ಬಳಗದ ಸದಸ್ಯರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದ ಅವರು, ಸಾಂಸಾರಿಕ ಭಿನ್ನಭಿಪ್ರಾಯಗಳು, ಯುವ ಜನತೆಯಲ್ಲಿ ನಡೆಯುವ ಸಂದಿಗ್ನ ಪರಿಸ್ಥಿತಿಗಳು ಸೇರಿದಂತೆ ಸರ್ವ ಸಮಸ್ಯೆಗಳನ್ನು ಆಧ್ಯಾತ್ಮದ ಜಾಗೃತಿ ಮೂಡಿಸುವುದು ಮತ್ತು ಯೋಗದಿಂದ ಮಾತ್ರ ಉಪಶಮನ ಮಾಡಲು ಸಾಧ್ಯ ಎಂದರು.
ವ್ಯಕ್ತಿತ್ವ ನಿರ್ಮಾಣ ಹಾಗೂ ಲೋಕೋದ್ದಾರದ ಪವಿತ್ರ ಗುರಿಯನ್ನು ಡಿವೈನ್ ಪಾರ್ಕ್ ಹೊಂದಿದೆ. ಎಲ್ಲರೂ ಸುಖ ಶಾಂತಿಯಿಂದ ಜೀವನ ನಡೆಸುವಂತೆ ಮಾಡುವುದು ಸಂಸ್ಥೆಯ ಮುಖ್ಯ ಗುರಿ. ಜಗತ್ತಿನ ಸಾಮಾರಸ್ಯ ಜೀವನ, ಶಾಂತಿ, ಆತ್ಮಶಕ್ತಿ, ಜಾಗೃತಿ ಹಾಗೂ ಸಮಾಜಕ್ಕೆ ನೀಡುವ ಸೇವಾ ಯೋಜನೆಯೇ ಯೋಗ ಪರ್ಯಟನ ಕಾರ್ಯಕ್ರಮ ಎಂದರು.
ಸುದ್ದಿಗೋಷ್ಠಿಯಲ್ಲಿ ಕುಶಾಲನಗರ ಬಳಗದ ಜಿ.ಎಸ್.ಹೆಗಡೆ, ಮೂರ್ನಾಡು ಬಳಗದ ಅಧ್ಯಕ್ಷೆ ದಿವ್ಯ ತೇಜಕುಮಾರ್, ಉಪಾಧ್ಯಕ್ಷ ಯಶ್ವಂತ್ ಕುಮಾರ್, ಮಡಿಕೇರಿ ಬಳಗದ ಅಧ್ಯಕ್ಷೆ ಟಿ.ಎಂ.ಪದ್ಮವೇಣಿ, ಖಜಾಂಚಿ ಲೀಲಾಶೆಟ್ಟಿ ಉಪಸ್ಥಿತರಿದ್ದರು.









