ಮಡಿಕೇರಿ ಜು.9 : ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜಿಲ್ಲಾಧ್ಯಕ್ಷರಾಗಿ ಎಂ.ಜಿ.ಅಜಿತ್ ಕುಮಾರ್ ಅವರನ್ನು ನೇಮಕಮಾಡಲಾಗಿದೆ ಎಂದು ಪಕ್ಷದ ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿ ಕೇಶವ್ ಮೂರ್ತಿ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿ ಕಂಡುಬರುತ್ತಿದ್ದು, ಇದನ್ನು ತೆಡೆಗಟ್ಟುವ ಸಲುವಾಗಿ ಕೆ.ಆರ್.ಎಸ್ ಪಕ್ಷ ತೊಡಗಿಸಿಕೊಂಡಿದೆ. ಜಿಲ್ಲಾದ್ಯಂತ ಪಕ್ಷವನ್ನು ಸದೃಢವಾಗಿ ಸಂಘಟಿಸುವ ಹಿನ್ನೆಲೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ಉಪಾಧ್ಯಕ್ಷರಾಗಿ ಸಿ.ಜೆ.ಸತೀಶ್, ಪ್ರಧಾನ ಕಾರ್ಯದರ್ಶಿ ಎಚ್.ಡಿ.ದಿಲೀಪ್ ಕುಮಾರ್, ಕಾರ್ಯದರ್ಶಿಯಾಗಿ ಎನ್.ಬಿ.ಪ್ರದೀಪ್, ಎನ್.ಜೆ.ಗಿರೀಶ್ ಕುಮಾರ್, ಎನ್.ಎಸ್.ರಾಜಶೇಖರ್ ಗೌಡ, ಎ.ಎ.ಹುಸೇನ್ ಆಲೀರ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಈಗಾಗಲೇ 100ಕ್ಕೂ ಅಧಿಕ ಯುವಕರು ಪಕ್ಷದ ಸದಸ್ಯತ್ವ ಪಡೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ವಿಧಾನಸಭೆಗೆ ನಮ್ಮ ಪಕ್ಷದ ಕಾರ್ಯಕರ್ತರನ್ನು ಆಯ್ಕೆ ಮಾಡಿ ಭ್ರಷ್ಟಾಚಾರ ಮುಕ್ತವಾಗಿಸಲು ಜನತೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಪಕ್ಷದ ನೂತನ ಜಿಲ್ಲಾಧ್ಯಕ್ಷ ಎಂ.ಜಿ.ಅಜಿತ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಸಾಕಷ್ಟು ಶೋಷಿತ ವರ್ಗದವರಿದ್ದಾರೆ. ಇವರಿಗೆ ಖಾತೆ ವರ್ಗಾವಣೆ ಸಂದರ್ಭ ಸರ್ಕಾರಿ ಕಚೇರಿಗಳಲ್ಲಿ ಲಂಚ ಕೇಳುತ್ತಿರುವ ಆರೋಪ ಕೇಳಿಬರುತ್ತಿದೆ. ಇದನ್ನು ಮಟ್ಟ ಹಾಕಲು ಜನಸ್ನೇಹಿ ಸರ್ಕಾರ ಬರಬೇಕು. ಆದರೆ, ಇಂದು ಜನರ ಸಮಸ್ಯೆಗಳನ್ನು ಆಲಿಸಬೇಕಾಗಿದ್ದ ಜನಪ್ರತಿನಿಧಿಗಳು ಆ ಕೆಲಸವನ್ನು ಮಾಡುತ್ತಿಲ್ಲ ಎಂದು ದೂರಿದ ಅವರು, ಇವೆಲ್ಲವನ್ನು ಕೆ.ಆರ್.ಎಸ್ ಪಕ್ಷ ಮಾಡಲಿದೆ ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಪಕ್ಷದ ಉಪಾಧ್ಯಕ್ಷ ಸಿ.ಜೆ.ಸತೀಶ್, ಕಾರ್ಯದರ್ಶಿ ಎನ್.ಬಿ.ಪ್ರದೀಪ್, ಬೆಂಗಳೂರು ನಗರ ಕಾರ್ಯದರ್ಶಿ ನವೀನ್ ಕುಮಾರ್ ಉಪಸ್ಥಿತರಿದ್ದರು.










