ಮಡಿಕೇರಿ ಆ.10 : ಜಿಲ್ಲೆಯ ಕಾಫಿ ತೋಟಗಳ ಲೈನ್‍ಮನೆಗಳಲ್ಲಿ ವಾಸವಿರುವ ದಲಿತರು ಮತ್ತು ಕೂಲಿ ಕಾರ್ಮಿಕರ ಪಡಿತರಗಳನ್ನು ಕೆಲವು ಮಾಲೀಕರು ವಶಪಡಿಸಿಕೊಂಡು ಬಡವರ ಸೌಲಭ್ಯಗಳನ್ನು ತಾವೇ ಪಡೆದುಕೊಳ್ಳುತ್ತಿದ್ದಾರೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂಘಟನೆ ಸಮತ ಸೈನಿಕ ದಳ ಕೊಡಗು ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಹೆಚ್.ಜಿ.ಗೋಪಲ್ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೆಲವು ಕಾಫಿ ತೋಟದ ಲೈನ್ ಮನೆಗಳಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿರುವ ದಲಿತರು ಮತ್ತು ಕಾರ್ಮಿಕರು ಸ್ವಂತ ಮನೆ ಇಲ್ಲದೆ ಸರಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಸೂಕ್ತ ದಾಖಲೆಗಳಿಲ್ಲದೆ ಸರ್ಕಾರದ ಗೃಹಲಕ್ಷ್ಮಿ ಯೋಜನೆ ಕಾರ್ಮಿಕ ಮಹಿಳೆಯರಿಗೆ ದೊರಕದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡು ಜಿಲ್ಲೆಯಲ್ಲಿರುವ ಕಾರ್ಮಿಕ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯನ್ನು ನೀಡಲು ಗ್ರಾ.ಪಂ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಮನವಿ ಮಾಡಿದರು.
ಮಣಿಪುರದಲ್ಲಿ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳು ಮತ್ತು ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ಅವಮಾನಿಸಿದ ಘಟನೆ ಖಂಡಿಸಿಯ ಎಂದ ಗೋಪಲ್, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಉಪಾಧ್ಯಕ್ಷ ಹೆಚ್.ಟಿ.ಮಂಜು, ಸದಸ್ಯರಾದ ಹೆಚ್.ಕೆ.ಸತೀಶ್, ಸಿದ್ದು, ಹೆಚ್.ಎಂ.ಅಪ್ಪಯ್ಯ, ಪಿ.ಎಸ್.ಸುರೇಶ್ ಉಪಸ್ಥಿತರಿದ್ದರು.








