ಮಡಿಕೇರಿ ಆ.9 : ಇತ್ತೀಚಿನ ವರ್ಷಗಳಲ್ಲಿ ಬಂಡವಾಳಶಾಹಿಗಳನ್ನು ಉತ್ತೇಜಿಸುತ್ತಾ ವಿದೇಶಿ ಸಂಸ್ಥೆಗಳನ್ನು ರಾಷ್ಟ್ರಕ್ಕೆ ಆಹ್ವಾನಿಸುವುದರೊಂದಿಗೆ ಕಾರ್ಮಿಕ ಸಮೂಹದ ಹಕ್ಕುಗಳನ್ನು ಕಸಿಯುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿ(ಜೆಸಿಟಿಯು) ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು.
ಸಿಐಟಿಯು ಸಂಘಟನೆಯ ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ಅವರ ನೇತೃತ್ವದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳ ಸಹಯೋಗದೊಂದಿಗೆ ಇಂದು ನಗರದ ಜನರಲ್ ಕೆ.ಎಸ್.ತಿಮ್ಮಯ್ಯ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಲಾಯಿತು.
ಈ ಸಂದರ್ಭ ಪಿ.ಆರ್.ಭರತ್ ಮಾತನಾಡಿ, ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಕರೆಯ ಮೇರೆ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿಯಿಂದ ‘ಕ್ವಿಂಟ್ ಇಂಡಿಯಾ’ ಚಳವಳಿಯ ಈ ಮಹತ್ವದ ದಿನದಂದು ಹೋರಾಟವನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಮಹಾತ್ಮ ಗಾಂಧೀಜಿಯವರ ಅಹಿಂಸಾತ್ಮಕ ಚಳುವಳಿಯಲ್ಲಿ ರಾಷ್ಟ್ರದಲ್ಲಿ ಕಾರ್ಮಿಕರನ್ನು ಒಳಗೊಂಡಂತೆ ಎಲ್ಲಾ ಸ್ತರದ ಜನಸಮೂಹದ ಒಗ್ಗಟ್ಟಿನ ಹೋರಾಟ ಸ್ವಾತಂತ್ರ್ಯವನ್ನು ದೊರಕಿಸಿಕೊಟ್ಟಿತು. ಪ್ರಸ್ತುತ ಸ್ವಾತಂತ್ರ್ಯ ಎಪ್ಪತ್ತೇಳು ವರ್ಷಗಳನ್ನು ನಾವು ಕಳೆೆಯುತ್ತಿರುವ ಹಂತದಲ್ಲಿ ಕಾರ್ಮಿಕರಿಗೆ ನಿಜವಾದ ಸ್ವಾತಂತ್ರ್ಯ ಲಭಿಸಿದೆಯೇ ಎನ್ನುವ ಪ್ರಶ್ನೆ ಕಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ ಒಂಭತ್ತು ವರ್ಷಗಳ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ 47 ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ತರುವ ಮೂಲಕ, ಬಂಡವಾಳಶಾಹಿಗಳಿಗೆ ಅನುಕೂಲ ಕಲ್ಪಿಸುವ ಪ್ರಯತ್ನಗಳಿಗೆ ಮುಂದಾಗಿದೆ. ಆ ಮೂಲಕ ವಿದೇಶಿ ಕಾರ್ಪೋರೇಟ್ ಸಂಸ್ಥೆಗಳನ್ನು ಕೈ ಬೀಸಿ ಕರೆಯುತ್ತಿದೆ ಎಂದು ಟೀಕಿಸಿದ ಅವರು, ಇದನ್ನು ತೀವ್ರವಾಗಿ ವಿರೋಧಿಸುವುದಾಗಿ ತಿಳಿಸಿದರು.
ಕೃಷಿ ಉತ್ಪನ್ನಗಳ ಬೆಲೆಯಲ್ಲಿನ ಏರುಪೇರು, ಗೊಬ್ಬರಗಳ ಮೇಲಿನ ಸಹಾಯಧನದ ಕಡಿತದಿಂದ ಹೆಚ್ಚುತ್ತಿರುವ ಬೆಲೆಯಿಂದ ರೈತರು ಆತ್ಮಹತ್ಯೆಗೆ ಮುಂದಾಗುವ ಪರಿಸ್ಥಿತಿಗಳು ಇಂದು ನಿರ್ಮಾಣವಾಗಿದೆ. ವಿದೇಶಿ ಸಂಸ್ಥೆಗಳ ಹೂಡಿಕೆಗೆ ಅನುಗುಣವಾಗಿ ಅವರಿಗೆ ರೈತರ ಕೃಷಿ ಭೂಮಿಗಳನ್ನು ನೀಡುವ ಕಾರ್ಯಗಳು ನಡೆಯುತ್ತಿದೆ. ಕೇಂದ್ರ ಸರ್ಕಾರ ವಿದೇಶಿ ಕಾರ್ಪೋರೇಟ್ ಸಂಸ್ಥೆಗಳ ಕೈಗೊಂಬೆಯಾಗಿ ವರ್ತಿಸುತ್ತಿದೆ ಎಂದು ಆರೋಪಿಸಿದರು.
ಕಾರ್ಮಿಕ ಸಮೂಹ, ರೈತಾಪಿ ವರ್ಗ ಮತ್ತು ತಳ ಹಂತದ ಸಮುದಾಯಗಳ ಶೋಷಣೆ ನಿರಂತರವಾಗಿ ಮುಂದುವರೆಯುತ್ತಿದೆ. ಇವುಗಳ ನಡುವೆ ಜನಸಾಮಾನ್ಯರ ನಿತ್ಯ ಬಳಕೆಯ ವಸ್ತುಗಳ ಬೆಲೆ ಗಗನಮುಖಿಯಾಗಿದ್ದು, ಬದುಕು ಸಂಕಷ್ಟಕ್ಕೆ ತಳ್ಳಲ್ಪಟ್ಟಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಜನರಲ್ ವರ್ಕರ್ಸ್ ಯೂನಿಯನ್ ಅಧ್ಯಕ್ಷ ಹೆಚ್.ಬಿ. ರಮೇಶ್, ಸಿಐಟಿಯು ಪ್ರಧಾನ ಕಾರ್ಯದರ್ಶಿ ಎ.ಸಿ. ಸಾಬು, ಸಿಐಟಿಯು ಅಂಗನವಾಡಿ ನೌಕರರ ಸಂಘದ ಅಧ್ಯಕ್ಷರಾದ ಪವಿತ್ರ, ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷೆ ಸಾವಿತ್ರಿ, ಹಮಾಲಿ ಕಾರ್ಮಿಕರ ಸಂಘದ ಅಧ್ಯಕ್ಷ ಹಮೀದ್, ಜಿಲ್ಲಾ ಸರ್ಕಾರಿ ಆಸ್ಪತ್ರೆ ನೌಕರರ ಸಂಘದ ಅಧ್ಯಕ್ಷರಾದ ಜಾನಕಿ, ಗ್ರಾಮ ಪಂಚಾಯ್ತಿ ನೌಕರರ ಸಂಘದ ಅನಿಲ್ ಸೇರಿದಂತೆ ಹಲ ಪ್ರಮುಖರು, ಕಾರ್ಮಿಕ ಸಂಘಟನೆಗಳ ಸದಸ್ಯರುಗಳು ಪಾಲ್ಗೊಂಡಿದ್ದರು.










