ನಾಪೋಕ್ಲು ಆ.11 : ವಿರಾಜಪೇಟೆ ಅರಣ್ಯ ವಲಯ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಕಾಡಾನೆಗಳ ತೋಟಗಳಲ್ಲಿ ಬೀಡು ಬಿಟ್ಟು ಫಸಲು ಹಾಗೂ ಗಿಡಗಳನ್ನು ನಾಶಪಡಿಸುತ್ತಿದ್ದ ಹತ್ತು ಕಾಡಾನೆಗಳ ಹಿಂಡನ್ನು ಕಾಡಿಗೆ ಅಟ್ಟುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಯಿತು.
ಕಾರ್ಯಾಚರಣೆಯಲ್ಲಿ ವಿರಾಜಪೇಟೆ, ಅಮ್ಮತ್ತಿ ಅರಣ್ಯ ವಲಯ ಹಾಗೂ ಆನೆಕ್ಷಿಪ್ರ ಕಾರ್ಯಪಡೆಯ ತಂಡಗಳು ಜಂಟಿಯಾಗಿ ಎರಡು ದಿನ ಕಾರ್ಯಾರಣೆ ನಡೆಸಿ ಕಾಡಾನೆಗಳ ಹಿಂಡನ್ನು ಬಲ್ಯಾಯಾಟ್ರ ಕಾಡಿಗೆ ಓಡಿಸಿದರು.
ಒಟ್ಟು 30ಕ್ಕ ಹೆಚ್ಚು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು, ಆನೆಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಹರಸಾಹಸಪಟ್ಟರು.
ಮತ್ತೆ ಕಾಡಾನೆಗಳು ಮರಂದೋಡ ಗ್ರಾಮದ ಮುಕ್ಕಾಟಿರ ಪ್ರಕಾಶ್ ಎಂಬವರ ತೋಟದ ಗೇಟ್ ಅನ್ನು ಜಖಂಗೊಳಿಸಿವೆ. ಮರಂದೋಡ ಶಾಲೆಯ ಗೇಟನ್ನು ಕೂಡ ಜಖಂಗೊಳಿಸಿವೆ. ತೋಟಗಳಲ್ಲಿ ಅಡ್ಡಾಡುತ್ತಿದ್ದ ಕಾಡಾನೆಗಳನ್ನು ಮತ್ತೆ ಕಾಡಿಗಟ್ಟಲಾಗಿದೆ.
ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ ಅರಣ್ಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎ ನೆಹರು ಮಾರ್ಗದರ್ಶನದಲ್ಲಿ ವಿರಾಜಪೇಟೆ ವಲಯ ಅರಣ್ಯಾಧಿಕಾರಿ ಕಳ್ಳಿರದೇವಯ್ಯ ನೇತೃತ್ವದಲ್ಲಿ ಅರಣ್ಯ ಆನೆ ಕ್ಷಿಪ್ರ ಕಾರ್ಯಪಡೆ ತಂಡ ಕೆದಮುಳ್ಳೂರು ಹಾಗೂ ಚೆಯ್ಯಂಡಾಣೆ ಕ್ಯಾಂಪ್ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ವರದಿ : ದುಗ್ಗಳ ಸದಾನಂದ