ಮಡಿಕೇರಿ ಆ.11 : ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಸಂದರ್ಭದಲ್ಲಿ ನಾಡಿನ ಅಧಿದೇವತೆ ಚಾಮುಂಡೇಶ್ವರಿಯನ್ನು ಅಂಬಾರಿಯಲ್ಲಿ ಹೊತ್ತು ಸಾಗಲು ದಸರಾ ಗಜಪಡೆ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.
ಈ ಬಾರಿ 9 ಆನೆಗಳಿಗೆ ದಸರಾ ಗಜ ಪಡೆಯಲ್ಲಿ ಸ್ಥಾನ ನೀಡಲಾಗಿದ್ದು, ಈ ಪೈಕಿ ಆರು ಆನೆಗಳು ಕೊಡಗಿನ ಶಿಬಿರಗಳಿಂದ ಆಯ್ಕೆಗೊಂಡಿದೆ.
ಬೆಂಗಳೂರಿನ ಅಶೋಕಪುರದಲ್ಲಿರುವ ಅರಣ್ಯಭವನದಲ್ಲಿ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಜಿ.ವಿ.ರಂಗರಾವ್ ಅಧ್ಯಕ್ಷತೆಯಲ್ಲಿನ ಸಭೆಯಲ್ಲಿ ಈ ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು.
ಈ ಬಾರಿಯ ದಸರಾ ಮಹೋತ್ಸವದಲ್ಲಿ ಮೊದಲ ತಂಡದಲ್ಲಿ 9 ಆನೆಗಳು ಪಾಲ್ಗೊಳ್ಳಲಿವೆ. ಇವುಗಳಲ್ಲಿ ಏಳು ಗಂಡಾನೆ ಹಾಗೂ ಎರಡು ಹೆಣ್ಣಾನೆಗಳು ಸೇರಿದೆ.
ಗಜಪಡೆ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಹೆಣ್ಣಾನೆಗಳ ಗರ್ಭಧಾರಣಾ ಪರೀಕ್ಷಾ ವರದಿ ಬಾರದ ಕಾರಣ ಗಜಪಡೆ ಆಯ್ಕೆ ತಡವಾಗಿತ್ತು. ಆದರೆ ಸೋಮವಾರದಂದು ವರದಿ ಕೈ ಸೇರಿದೆ. ಈ ನಿಟ್ಟಿನಲ್ಲಿ ಗಜಪಡೆಯ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.









