ಮಡಿಕೇರಿ ಆ.13 : ಕಾಡಾನೆಯೊಂದು ದಾಳಿ ಮಾಡಿದ ಪರಿಣಾಮ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಅರೆಕಾಡು ಗ್ರಾಮದ ನೇತಾಜಿ ನಗರದಲ್ಲಿ ನಡೆದಿದೆ.
ಕಟ್ಟೆಮಾಡು ಗ್ರಾಮದ ಪರಂಬು ನಿವಾಸಿ ದೇವಪ್ಪ (60) ಮೃತ ದುರ್ದೈವಿ. ಅರೆಕಾಡು ಗ್ರಾಮದ ಕೃಷಿಕರೊಬ್ಬರ ಗದ್ದೆ ಹದ ಮಾಡಲೆಂದು ತಮ್ಮ ಟ್ರ್ಯಾಕ್ಟರ್ ನಲ್ಲಿ ಬಂದಿದ್ದ ಅವರು ಕೆಲಸ ಮುಗಿಸಿ ಮರಳುತ್ತಿದ್ದ ಸಂದರ್ಭ ಕಾಡಾನೆ ದಿಢೀರ್ ಪ್ರತ್ಯಕ್ಷವಾಗಿ ದಾಳಿ ಮಾಡಿದೆ. ದೇವಪ್ಪ ಅವರನ್ನು ಎಸೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟರು ಎಂದು ತಿಳಿದು ಬಂದಿದೆ.
ಬೆಳಗ್ಗೆಯಿಂದಲೇ ಗ್ರಾಮದಲ್ಲಿ ಓಡಾಡುತ್ತಿದ್ದ ಕಾಡಾನೆ ನೇತಾಜಿ ನಗರದ ಜನನಿಬಿಡ ಪ್ರದೇಶಕ್ಕೆ ಬಂದಾಗ ಜನರು ಬೊಬ್ಬೆ ಹಾಕಿ ತಪ್ಪಿಸಿಕೊಂಡಿದ್ದಾರೆ. ಅಲ್ಲಿಂದ ಕಾಲ್ಕಿತ್ತ ಕಾಡಾನೆ ದೇವಪ್ಪ ಅವರಿದ್ದ ಪ್ರದೇಶಕ್ಕೆ ನುಸುಳಿ ದಾಳಿ ಮಾಡಿದೆ.
ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಘಟನೆಗೆ ಕಾರಣವೆಂದು ಸ್ಥಳೀಯ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಅಧಿಕಾರಿಗಳು ಗ್ರಾಮಸ್ಥರನ್ನು ಸಮಾಧಾನ ಪಡಿಸುವ ಯತ್ನ ಮಾಡಿದರು. ಅಲ್ಲದೆ ರೂ.15 ಲಕ್ಷ ಪರಿಹಾರ ನೀಡುವುದಾಗಿ ಭರವಸೆ ನೀಡಿದರು. ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿದ್ದರು.