ಕುಶಾಲನಗರ ಆ.14 : ಸಮಾಜದಲ್ಲಿ ಜನರಿಗೆ ಮೌಢ್ಯ ಬಿತ್ತುವ ಕೆಲಸ ನಿರಂತರವಾಗಿ ನಡೆಯುತ್ತಿದ್ದು, ಇದನ್ನು ತಡೆಯಬೇಕಾದರೆ ವೈಜ್ಞಾನಿಕ ಮನೋಭಾವನೆ ಮತ್ತು ಮೌಢ್ಯಾಚರಣೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ಹೆಸರಾಂತ ವಿಚಾರವಾದಿಯೂ ಆದ ಅಖಿಲ ಭಾರತ ವಿಚಾರವಾದಿ ಒಕ್ಕೂಟದ ಅಧ್ಯಕ್ಷ ಪ್ರೊ|| ನರೇಂದ್ರನಾಯಕ್ ಹೇಳಿದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿ ಹಾಗೂ ಅಖಿಲ ಭಾರತ ವಿಚಾರವಾದಿ ಒಕ್ಕೂಟದ ವತಿಯಿಂದ ಕುಶಾಲನಗರ ಕನ್ನಿಕಾ ಹೋಟೆಲ್ ಸಭಾಂಗಣದಲ್ಲಿ ಸುಂಟಿಕೊಪ್ಪ ಜೆಸಿಐ, ಕುಶಾಲನಗರ ಕಾವೇರಿ ಜೆಸಿಐ ಹಾಗೂ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಎನ್.ಎಸ್.ಎಸ್.ಘಟಕದ ಸಹಯೋಗದೊಂದಿಗೆ “ಮೌಢ್ಯದ ವಿರುದ್ಧ ವಿಜ್ಞಾನ ನಡಿಗೆ” ಎಂಬ ಕಾರ್ಯಕ್ರಮದಡಿ ವೈಜ್ಞಾನಿಕ ಮನೋಭಾವನೆ ಕುರಿತು ಉಪನ್ಯಾಸ ಹಾಗೂ ಪವಾಡಗಳ ರಹಸ್ಯ ಬಯಲು ಕಾರ್ಯಕ್ರಮ ನಡೆಯಿತು.
ವೈಜ್ಞಾನಿಕ ಚಿಂತನೆಗಳು ಜನರಿಗೆ ತಲುಪುತ್ತಿದ್ದು ಅರಿವು ಉಂಟಾಗುತ್ತಿದೆ. ಆದರೆ, ಕೆಲವರು ವಿಚಾರವಾದಿಗಳ ಧ್ವನಿ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ನರೇಂದ್ರನಾಯಕ್ ವಿಷಾದಿಸಿದರು.
ಸಮಾಜದಲ್ಲಿ ಹೆಚ್ಚುತ್ತಿರುವ ಕೋಮುವಾದ ಹಾಗೂ ಮೌಢ್ಯತೆಯನ್ನು ಹತ್ತಿಕ್ಕಬೇಕಾದಲ್ಲಿ ಯುವ ಜನರು ಮುಂದೆ ಬಂದು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಅಂಗೈಯಲ್ಲಿ ಮತ್ತು ಬಾಯಿಯೊಳಗೆ ಕರ್ಪೂರ ಉರಿಸುವುದು, ಶೂನ್ಯದಿಂದ ಬೂದಿ ಸೃಷ್ಠಿಸುವುದು, ಬರಿಗೈಯಿಂದ ಚಿನ್ನದ ಉಂಗುರ ಮತ್ತು ಹೊಸ ನೋಟು ಸೃಷ್ಠಿಸುವುದು ಮತ್ತಿತರ ಪ್ರಾತ್ಯಕ್ಷಿಕೆಗಳ ಮೂಲಕ ವಿವಿಧ ಪವಾಡವನ್ನು ಬಿಡಿಸಿ ಅದರ ಹಿಂದಿರುವ ರಹಸ್ಯ ಬಯಲಿಗೆಳೆಯುವ ಕಾರ್ಯ ಮಾಡಿದರು.
ಕೆಲವು ಸ್ವಯಂದೇವ ಮಾನವರೆನಿಸಿಕೊಂಡವರು ಮೌಢ್ಯದ ಹೆಸರಿನಲ್ಲಿ ಭೂತ- ಪ್ರೇತ, ಮಾಟ- ಮಂತ್ರದ ಮೂಲಕ ಮೌಢ್ಯದ ವಿಷ ಬೀಜ ಬಿತ್ತುತ್ತಿರುವುದನ್ನು ನಾವು ಬಯಲು ಮಾಡುವ ಮೂಲಕ ಜನರಿಗೆ ವೈಜ್ಞಾನಿಕ ಸತ್ಯಸಂಗತಿಗಳನ್ನು ತಿಳಿಸುವ ಕಾರ್ಯ ಕೈಗೊಳ್ಳಬೇಕು ಎಂದು ಪ್ರೊ ನರೇಂದ್ರನಾಯಕ್ ಪ್ರತಿಪಾದಿಸಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿಯ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್ ವೈಜ್ಞಾನಿಕ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿ, ವಿಜ್ಞಾನ ಪರಿಷತ್ತು ವತಿಯಿಂದ ಇಂತಹ ವೈಜ್ಞಾನಿಕ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳು ಹಾಗೂ ಸಮುದಾಯದಲ್ಲಿ ವೈಜ್ಞಾನಿಕ ಪ್ರಜ್ಞೆ ಬೆಳೆಸುವ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸಮಾಜದಲ್ಲಿ ಬೇರೂರಿರುವ ಮೌಢ್ಯ, ಕಂದಾಚಾರಗಳನ್ನು ದೂರ ಮಾಡುವ ಮೂಲಕ ಜನರಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸಲಾಗುತ್ತಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಹೋಟೆಲ್ ಮತ್ತು ರೆಸಾರ್ಟ್ ಮಾಲೀಕರ ಸಂಘದ ಅಧ್ಯಕ್ಷ ಬಿ.ಎನ್.ನಾಗೇಂದ್ರಪ್ರಸಾದ್ ಮಾತನಾಡಿ, ಹುಸಿ ಪವಾಡಗಳನ್ನು ಅಲ್ಲಗಳೆದು ಸಮಾಜದಲ್ಲಿ ವೈಚಾರಿಕತೆಯ ಪ್ರಜ್ಞೆ ಮೂಡಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಮೌಢ್ಯದ ವಿರುದ್ಧ ಹೋರಾಟ ನಡೆಸುತ್ತಿರುವ ವಿಚಾರವಾದಿ ಪ್ರೊ ನರೇಂದ್ರನಾಯಕ್ ಅವರ ಸೇವಾ ಕಾರ್ಯ ಶ್ಲಾಘನೀಯವಾದುದು ಎಂದರು.
ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ವತಿಯಿಂದ ಇಂತಹ ವೈಜ್ಞಾನಿಕ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಮೌಢ್ಯ ತೆ ಬಗ್ಗೆ ಜಾಗೃತಿ ಮೂಡಿಸಿ ಜನರಲ್ಲಿ ವೈಜ್ಞಾನಿಕ ಪ್ರಜ್ಞೆ ಬೆಳೆಸುವ ಮೂಲಕ ವಿಜ್ಞಾನವನ್ನು ಜನಪ್ರಿಯಗೊಳಿಸುತ್ತಿರುವ ಕಾರ್ಯ ಶ್ಲಾಘನೀಯವಾದುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ವಿಜ್ಞಾನ ಪರಿಷತ್ ಸಮಿತಿಯ ನಿರ್ದೇಶಕ ಎಂ.ಎನ್.ವೆಂಕಟನಾಯಕ್ , ಪವಾಡಗಳ ಹಿಂದಿರುವ ವೈಜ್ಞಾನಿಕ ಕಾರಣಗಳ ಕುರಿತು ವಿವರಿಸಿದರು. ಜಿಲ್ಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ.ಸೋಮಶೇಖರ್,
ತಾಲ್ಲೂಕು ಕ.ಸಾ.ಪ.ಅಧ್ಯಕ್ಷ ಕೆ.ಎಸ್.ನಾಗೇಶ್, ಜಿಲ್ಲಾ ವಿಜ್ಞಾನ ಪರಿಷತ್ತಿನ ಸಹ ಕಾರ್ಯದರ್ಶಿ ಜಿ.ಶ್ರೀಹರ್ಷ, ವಿಜ್ಞಾನ ಪರಿಷತ್ ಸದಸ್ಯರಾದ ಕೆ.ಎಸ್.ಮಹೇಶ್, ಎನ್.ಕೆ.ಮಾಲಾದೇವಿ, ಮಂಗಳೂರಿನ ವಿಚಾರವಾದಿ ಮಯೂರಶೆಟ್ಟಿ,ಅಮೇರಿಕಾದ ವೈಚಾರಿಕ ಚಿಂತಕ ಆಸ್ಟಿನ್ ಇತರರು ಇದ್ದರು.
ವೈಜ್ಞಾನಿಕ ಮನೋಭಾವನೆ ಬೆಳವಣಿಗೆ ಕುರಿತು ನಡೆದ ಚರ್ಚೆ ಮತ್ತು ಸಂವಾದದಲ್ಲಿ ಇಸಿಓ ಕೆ.ಬಿ.ರಾಧಾಕೃಷ್ಣ,
ಸಿ ಆರ್ ಪಿ ಕೆ.ಶಾಂತಕುಮಾರ್, ವಿವಿಧ ಸಂಘಟನೆಗಳ ಪ್ರಮುಖರಾದ ವಿ.ಅಮೃತ್, ಕೆ.ವಿ.ಉಮೇಶ್, ಬಿ.ಬಿ.ಹೇಮಲತಾ, ಬಸವರಾಜ್ ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.











