ಮಡಿಕೇರಿ ಜು.15 :ವಿರಾಜಪೇಟೆ ಕ್ಷೇತ್ರದಲ್ಲಿ ಕಳೆದ 20 ವರ್ಷಗಳಿಂದ ಸೃಷ್ಟಿಯಾದ ಸಮಸ್ಯೆಗಳನ್ನು ಬಗೆಹರಿಸಲು ಕನಿಷ್ಠ 20 ತಿಂಗಳು ಅವಕಾಶ ನೀಡಿ. ಈಗ ತಾವು ಶಾಸಕರಾಗಿ ಮೂರು ತಿಂಗಳು ಆಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಮನವಿ ಮಾಡಿದರು.
ಬಿಟ್ಟಂಗಾಲದ ಹೆಗ್ಡೆ ಸಮಾಜದ ಕಟ್ಟಡದಲ್ಲಿ ನಡೆದ ವಿರಾಜಪೇಟೆ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅಹವಾಲು ಸಂವಾದ ಕಾರ್ಯಕ್ರಮ ನಡೆಸಿ ಮಾತನಾಡಿದ ಅವರು, ಕಾರ್ಯಕರ್ತರು ಗಮನ ಸೆಳೆದ ಕ್ಷೇತ್ರದ ಸಮಸ್ಯೆಗಳನ್ನು ಆಲಿಸಿ ಬಗೆಹರಿಸುವ ಭರವಸೆ ನೀಡಿದರು.
ಸರ್ಕಾರ ಜನಪರ ಕಾರ್ಯಕ್ರಮ ಜಾರಿಗೆ ತಂದಿದ್ದು, ಅದನ್ನು ಕ್ಷೇತ್ರದ ಕಟ್ಟ ಕಡೆಯ ಪ್ರಜೆಗೆ ತಲುಪಿಸುವ ಹೊಣೆಗಾರಿಕೆಯನ್ನು ನಿಭಾಯಿಸುತ್ತೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಭೋಸ್ ರಾಜ್ ಮಾತನಾಡಿ, ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಕೆಡಿಪಿ ಸಭೆ ನಡೆಸಿದ್ದು, ತಾಲ್ಲೂಕು ಮಟ್ಟದ ಸಭೆ ಆರಂಭಗೊಂಡಿದೆ. ಮುಂದೆ ಹೋಬಳಿ ಮಟ್ಟದಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಲಾಗುವುದು ಹಾಗೂ ಈ ಸಭೆಗಳಲ್ಲಿ ತಾವು ,ಶಾಸಕರು,
ಜಿಲ್ಲಾಧಿಕಾರಿಗಳು ಸೇರಿದಂತೆ ಎಲ್ಲಾ ಹಿರಿಯ, ಕಿರಿಯ ಅಧಿಕಾರಿಗಳು ಭಾಗಿಯಾಗಿ ಸಾರ್ವಜನಿಕರ ಕುಂದು ಕೊರತೆಗಳನ್ನು ನಿವಾರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ವೀಣಾ ಅಚ್ಚಯ್ಯ ಮಾತನಾಡಿ, ಪೊನ್ನಣ್ಣ ನವರು ಶಾಸಕರಾದ ನಂತರ ಪ್ರತಿ ದಿನ ಕ್ಷೇತ್ರದ್ಯಾದಂತ 500 ಕಿ.ಮೀ ಗಿಂತಲೂ ಹೆಚ್ಚು ದೂರ ಸಂಚರಿಸಿ ಜನರನ್ನು ಸಂಪರ್ಕಿಸಿ ಅವರಿಗೆ ನೆರವಾಗುತ್ತಿದ್ದು, ಅವರ ಕಾರ್ಯಕ್ಷಮತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿ.ಸಿ.ಸಿ. ಪದಾಧಿಕಾರಿಗಳು, ಬ್ಲಾಕ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಮುಂಚೂಣಿ ಘಟಕಗಳ ಅಧ್ಯಕ್ಷರು ಸೇರಿದಂತೆ ಕ್ಷೇತ್ರದ ಕಾರ್ಯಕರ್ತರು ಹಾಜರಿದ್ದರು.








