ನಾಪೋಕ್ಲು ಆ.15 : ಜನಬೆಂಬಲವಿದ್ದರೆ ಮಾತ್ರ ಒಂದು ಕ್ಷೇತ್ರದ ಅಭಿವೃದ್ಧಿ ಮಾಡಲು ಸಾಧ್ಯ ಎಂದು ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.
ನೆಲಜಿ ಗ್ರಾಮದ ಅಂಬಲ ಮಹಿಳಾ ಸಮಾಜದ ವತಿಯಿಂದ ನೆಲಜಿ ದವಸ ಬಂಡಾರದ ಕಟ್ಟಡದಲ್ಲಿ ಏರ್ಪಡಿಸಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಒಬ್ಬ ಶಾಸಕನಾಗಿ ಉತ್ತಮ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿ ಜನರ ಮನಸ್ಸಿನಲ್ಲಿ ಉಳಿಯುವಂತೆ ಮಾಡುತ್ತೇನೆ. ಹಾಗೆಯೇ ಜನರ ಧ್ವನಿಯಾಗಿ ಕೆಲಸ ಮಾಡುವಲ್ಲಿ ಎಲ್ಲರ ಸಹಕಾರ ಅಗತ್ಯ ಎಂದರು.
ಜನರಿಗೆ ಒಳ್ಳೆಯದಾಗಬೇಕು. ಕ್ಷೇತ್ರದ ಅಭಿವೃದ್ಧಿ ಆಗಬೇಕು ಎಂಬುದಷ್ಟೇ ನನ್ನ ಗುರಿಯಾಗಿದೆ. ರಾಜಕೀಯ ಕ್ಷೇತ್ರದಲ್ಲಿ ಹಲವರು ಅವರವರ ಸಾಮರ್ಥ್ಯದಿಂದ ಮೇಲೆ ಬಂದರು. ಶಾಸಕನಾಗಿ ಜನರ ಅಭಿವೃದ್ಧಿ, ಕ್ಷೇತ್ರದ ಅಭಿವೃದ್ಧಿ ಮುಖ್ಯ. ಜಿಲ್ಲೆಯ ಜನರಿಗೆ ಒಳಿತನ್ನು ಮಾಡುವುದಷ್ಟೇ ನನ್ನ ಕೆಲಸ ಎಂದು ಹೇಳಿದರು.
ಮುಂದಿನ ಜನಾಂಗಕ್ಕೆ ಆಚಾರ, ವಿಚಾರ, ಭಾಷೆ ,ಸಂಸ್ಕೃತಿಯನ್ನು ಉಳಿಸುವ ಬಗ್ಗೆ ಚಿಂತಿಸುವ ಕಾಲ ಬಂದಿದೆ. ಸಂಘ-ಸಂಸ್ಥೆಗಳು ಈ ನಿಟ್ಟಿನಲ್ಲಿ ಯೋಚಿಸಿ ಮುಂದಡಿ ಇಡಬೇಕು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಮಂಡೆಪಂಡ ಸುಜಾಕುಶಾಲಪ್ಪ, ಮಹಿಳೆಯರು ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಈ ಹಿಂದೆ ಮಹಿಳೆಯರು ಮನೆಗೆ ಮಾತ್ರ ಸೀಮಿತ ಎಂದಿತ್ತು. ಆದರೆ ಈಗ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿರುವುದು ಗಮನಾರ್ಹ ಎಂದರು.
ಕೊಡಗಿನ ನೆಲ, ಜಲ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದಾಗಿದೆ ಎಂದು ತಿಳಿಸಿದರು.
ಪದ್ಮಶ್ರೀ ಪುರಸ್ಕೃತ ರಾಣಿ ಮಾಚಯ್ಯ ಮಾತನಾಡಿ, ಕೊಡವ ಜಾನಪದ ಕಲೆ ಸಂಸ್ಕೃತಿಯನ್ನು ಹಿರಿಯರೊಂದಿಗೆ ಸೇರಿ ಮಕ್ಕಳು ಕಲಿಯಬೇಕು. ನಂತರ ಅದನ್ನು ನಿರಂತರವಾಗಿ ಸಂರಕ್ಷಿಸಬೇಕು ಎಂದರು.
ಹಬ್ಬಹರಿ ದಿನಗಳನ್ನು ಹಿಂದಿನ ಸಂಪ್ರದಾಯದಂತೆ ಆಚರಿಸಬೇಕು. ಹುತ್ತರಿ ಕೈಲ್ ಮುಹೂರ್ತ, ಕಾವೇರಿ ಸಂಕ್ರಮಣ ದಂತಹ ಹಬ್ಬಗಳನ್ನು ಮಕ್ಕಳು ಎಲ್ಲಿದ್ದರೂ ಜಿಲ್ಲೆಗೆ ಬಂದು ಹಿರಿಯರೊಂದಿಗೆ ಸಂಭ್ರಮದಿಂದ ಆಚರಿಸುವಂತಾಗಬೇಕು. ಹಿರಿಯರ ಪದ್ಧತಿ ಪರಂಪರೆಯನ್ನು ಮರೆಯಬಾರದು ಎಂದು ಕರೆ ನೀಡಿದರು.
ಮಡಿಕೇರಿ ಆಕಾಶವಾಣಿಯ ನಿವೃತ್ತ ಉದ್ಘೋಷಕಿ ಕೂಪದಿರ ಶಾರದಾ ನಂಜಪ್ಪ ಮಾತನಾಡಿ, ಕೊಡವ ಸಂಸ್ಕೃತಿಯನ್ನು ಮಕ್ಕಳಿಗೆ ಕಲಿಸಿಕೊಡಬೇಕು. ಮಹಿಳೆಯರು ಸಂಘ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದರೆ ಶಿಸ್ತು, ಪ್ರಾಮಾಣಿಕತೆ, ಯಶಸ್ಸು ಕಾಣಲು ಸಾಧ್ಯ ಎಂದರು.
ಮಡಿಕೇರಿ ಆಕಾಶವಾಣಿಯಲ್ಲಿ ಸಾವಿನ ಸುದ್ದಿ ಪ್ರಸಾರ ಮಾಡುವ ಅಗತ್ಯತೆ ಹಾಗೂ ಅನಿವಾರ್ಯತೆಯನ್ನು ಕುರಿತು ವಿಶೇಷ ಕಾಳಜಿ ವಹಿಸಿ ಕೆಲಸ ನಿರ್ವಹಿಸಿದ್ದರಿಂದ ದೇಶದ ಯಾವುದೇ ಭಾಗದಲ್ಲೂ ಇಲ್ಲದ ರೇಡಿಯೋ ಕಾರ್ಯಕ್ರಮ ಜಿಲ್ಲೆಯಲ್ಲಿ ಪ್ರಸಾರವಾಗುವುದರ ಮೂಲಕ ಜನ ಮೆಚ್ಚುಗೆಗೆ ಪಾತ್ರವಾಯಿತು ಎಂದರು.
ವಿರಾಜಪೇಟೆಯ ವುಮೆನ್ಸ್ ವಿಂಗ್ ಅಧ್ಯಕ್ಷೆ ಮನೆಯಪಂಡ ಕಾಂತಿ ಸತೀಶ್ ಮಾತನಾಡಿ, ಸಾರ್ವಜನಿಕರ ಮೂಲಸೌಕರ್ಯ ಅಲ್ಲದೆ ನಮ್ಮ ಆಚಾರ ವಿಚಾರ ಸಂಸ್ಕೃತಿಯ ಜೊತೆಗೆ ನಮ್ಮ ಅಸ್ತಿತ್ವವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಚಿಂತಿಸುವ ಅವಶ್ಯಕತೆ ಇದೆ ಎಂದರು.
ಇದಕ್ಕೂ ಮುನ್ನ ಕಕ್ಕಡ ಹಬ್ಬದ ಪ್ರಯುಕ್ತ ನೆಲಜಿ ಶ್ರೀ ಇಗ್ಗುತಪ್ಪ ದೇವಸ್ಥಾನದಲ್ಲಿ ವಿಶೇಷ ಮಹಾಪೂಜೆಯನ್ನು ಏರ್ಪಡಿಸಲಾಗಿತ್ತು. ಆ ಬಳಿಕ ದುಡಿ ಕೊಟ್ಟು ತಳಿಯಕ್ಕಿ ಬೋಲಾಕ್ ನೊಂದಿಗೆ ಅತಿಥಿಗಳನ್ನು ಅದ್ದೂರಿಯಾಗಿ ಸಭೆಗೆ ಬರಮಾಡಿಕೊಳ್ಳಲಾಯಿತು.
ಅಂಬಲ ಮಹಿಳಾ ಸಮಾಜದ ಅಧ್ಯಕ್ಷೆ ಅಪ್ಪುಮಣಿಯಂಡ ಡೇಝಿ ಸೋಮಣ್ಣ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಗ್ರಾಮದ ಕಾಫಿ ಬೆಳೆಗಾರರಾದ ಮಂಡೀರ ಸರೋಜಾ ದೇವಯ್ಯ , ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತೀರ ಧರ್ಮಜ ಉತ್ತಪ್ಪ, ಸಲಹಾ ಸಮಿತಿ ಅಧ್ಯಕ್ಷೆ ಮಣವಟ್ಟೀರ ಕಮಲ ಬೆಳ್ಳಿಯಪ್ಪ ಹಾಜರಿದ್ದರು.
ಮಣವಟ್ಟಿರ ಕಮಲ ಬೆಳ್ಳಪ್ಪ,ಮಣವಟ್ಟಿರ ಝಾನ್ಸಿ ತಿಮ್ಮಯ್ಯ ,ಕೋಟೆರ ಹೇಮಾ ಕಾವೇರಪ್ಪ ,ಚೀಯಕಪೂವಂಡ ಅಮಿತ ನವೀನ್ ಸನ್ಮಾನಿತರ ಪರಿಚಯವನ್ನು ಮಾಡಿದರು.
ಅಲ್ಲರಂಡ ಪ್ರೀತು ಸತೀಶ್ ಪ್ರಾರ್ಥಿಸಿದರು. ಡೇಝಿ ಸೋಮಣ್ಣ ಸ್ವಾಗತಿಸಿ, ಮಣವಟ್ಟಿರ ಮೀರಾ ಬಿದ್ದಪ್ಪ ವಂದಿಸಿದರು.
ವರದಿ : ದುಗ್ಗಳ ಸದಾನಂದ








