ಮಡಿಕೇರಿ ಆ.15 : ಅರೆಕಾಡು ಗ್ರಾಮ ವ್ಯಾಪ್ತಿಯಲ್ಲಿ ನಿರಂತರ ಉಪಟಳ ನೀಡುತ್ತಾ ವ್ಯಕ್ತಿಯೊಬ್ಬರ ಜೀವಹಾನಿಗೆ ಕಾರಣವಾಗಿದ್ದ ಕಾಡಾನೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖಾ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.
ಅರೆಕಾಡು ಗ್ರಾಮದ ಮದರ ಕುಪ್ಪೆ ಎನ್ನುವ ಸ್ಥಳದಲ್ಲಿ ಪತ್ತೆಯಾದ ಸುಮಾರು 16 ವರ್ಷದ ಒಂಟಿ ಸಲಗವನ್ನು ಅರಿವಳಿಕೆ ನೀಡುವ ಮೂಲಕ ಸೆರೆ ಹಿಡಿದು, ಲಾರಿ ಮೂಲಕ ದುಬಾರೆ ಸಾಕಾನೆ ಶಿಬಿರಕ್ಕೆ ಸಾಗಿಸಲಾಯಿತು. ಮತ್ತಿಗೋಡು ಸಾಕಾನೆ ಶಿಬಿರದ ಸಾಕಾನೆಗಳಾದ ಅಭಿಮನ್ಯು, ಭೀಮ, ದುಬಾರೆ ಸಾಕಾನೆ ಶಿಬಿರದ ಸುಗ್ರೀವ ಹಾಗೂ ಹರ್ಷನನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿತ್ತು.
ಅರಣ್ಯ ಅಧಿಕಾರಿಗಳಾದ ಕೂಡಕಂಡಿ ಸುಬ್ರಾಯ, ಗೋಪಾಲ, ಪೂವಯ್ಯ, ಬಾಷ, ಹನುಮಂತರಾಜು ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಕೆಲವು ದಿನಗಳ ಹಿಂದೆ ಅರೆಕಾಡು ಗ್ರಾಮ ವ್ಯಾಪ್ತಿಯಲ್ಲಿ ಟ್ರ್ಯಾಕ್ಟರ್ ಓಡಿಸುತ್ತಿದ್ದ ದೇವಪ್ಪ ಎಂಬವವರು ಕಾಡಾನೆ ದಾಳಿಗೆ ಸಿಲುಕಿ ಸಾವನ್ನಪ್ಪಿದ್ದರು. ಕಾಡಾನೆ ಹಾವಳಿ ತಡೆಗೆ ಅರಣ್ಯ ಇಲಾಖೆ ಅಗತ್ಯ ಕ್ರಮ ಕೈಗೊಂಡಿಲ್ಲವೆಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಅರಣ್ಯ ಇಲಾಖೆ ಕಳೆದ ಎರಡು ದಿನಗಳಿಂದ ಪುಂಡಾನೆಯ ಸೆರೆಗೆ ವ್ಯಾಪಕ ಕಾರ್ಯಾಚರಣೆ ನಡೆಸಿತು.
::: ಆ ಆನೆ ಅಲ್ಲ :::
ಇದೀಗ ಸೆರೆ ಸಿಕ್ಕ ಆನೆ ದೇವಪ್ಪ ಅವರನ್ನು ಬಲಿ ಪಡೆದ ಆನೆಯಲ್ಲವೆಂದು ಅರೆಕಾಡು ಭಾಗದ ಕೆಲವು ಗ್ರಾಮಸ್ಥರು ಸಂಶಯ ವ್ಯಕ್ತಪಡಿಸಿದ್ದಾರೆ. ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸುತ್ತಿದ್ದ ಕಾಡಾನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆ ಆನೆಗೆ ದೊಡ್ಡ ದಂತಗಳಿದ್ದವು, ಸೆರೆ ಸಿಕ್ಕ ಆನೆಯದ್ದು, ಸಣ್ಣ ದಂತಗಳು ಎಂದು ಅಭಿಪ್ರಾಯಪಟ್ಟಿದ್ದಾರೆ.











