ಮಡಿಕೇರಿ ಆ.15 : ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ನಿರ್ಮಾಣಗೊಂಡಿರುವ ಜಿಲ್ಲೆಯ 75 ಅಮೃತ ಸರೋವರ ದಂಡೆಯ ಮೇಲೆಯೂ ತಿರಂಗಾ ರಾರಾಜಿಸಿತು. ಇದರೊಂದಿಗೆ ಜಲ ಸಂರಕ್ಷಣೆಯ ಸಂದೇಶವನ್ನು ಸಾರುವುದರ ಜೊತೆಗೆ ಅನೇಕ ಚಟುವಟಿಕೆಗಳು ಅಮೃತ ಸರೋವರ ದಂಡೆಯ ಮೇಲೆ ಜರುಗಿತು.
ವಿವಿಧ ಸ್ಫರ್ಧೆಗಳು:ಅಮೃತ ಮಹೋತ್ಸವದ ಸಂಭ್ರಮದ ಹಿನ್ನೆಲೆ ಗ್ರಾ.ಪಂ. ಮಕ್ಕಳಿಗೆ ಪರಿಸರ ಹಾಗೂ ನೀರಿನ ಸಂರಕ್ಷಣೆಯ ಕುರಿತು ಚಿತ್ರ ಕಲಾ ಸ್ಪರ್ಧೆ, ಓಟದ ಸ್ಫರ್ಧೆ, ಹಗ್ಗ-ಜಗ್ಗಾಟ ಸೇರಿದಂತೆ ಮುಂತಾದ ಗ್ರಾಮೀಣ ಸ್ಫರ್ಧೆಯನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು.
ಶಿಲಾಫಲಕಗಳ ಅನಾವರಣ: ಈ ಬಾರಿಯ ಸ್ವಾತಂತ್ರ್ಯೋತ್ಸವದಲ್ಲಿ ಸ್ವಾತಂತ್ರ್ಯಕ್ಕಾಗಿ ಮತ್ತು ದೇಶ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದ ವೀರರನ್ನು ಸ್ಮರಿಸಿ ಶಿಲಾಫಲಕವನ್ನು ನಿರ್ಮಿಸಿ ವೀರರಿಗೆ ಗೌರವ ಅರ್ಪಿಸಲಾಗಿದೆ. ಜಿಲ್ಲೆಯ 103 ಗ್ರಾ.ಪಂ.ಗಳಲ್ಲಿಯೂ ಶಿಲಾಫಲಕವನ್ನು ಅಳವಡಿಸಿ ವೀರರನ್ನು ಗೌರವಿಸಲಾಗಿದೆ. ಅಮೃತ ಸರೋವರವನ್ನು ಒಳಗೊಂಡಿರುವ ಗ್ರಾ.ಪಂ.ಗಳಲ್ಲಿ ಸರೋವರದ ದಂಡೆಯ ಮೇಲೆ ಮತ್ತು ಉಳಿದ ಗ್ರಾಮಪಂಚಾಯಿತಿಗಳಲ್ಲಿ ಗ್ರಾ.ಪಂ. ಕಟ್ಟಡ ಅಥವಾ ಶಾಲಾ ಕಟ್ಟಡದಲ್ಲಿ ಶಿಲಾ ಫಲಕವನ್ನು ನಿರ್ಮಿಸಿ ಅನಾವರಣಗೊಳಿಸಲಾಗಿದೆ.
ನಿವೃತ್ತ ಸೇನಾನಿಗಳಿಗೆ ಸನ್ಮಾನ: ಇದರೊಂದಿಗೆ ದೇಶಕ್ಕಾಗಿ ಸೇವೆ ಸಲ್ಲಿಸಿದ ನಿವೃತ್ತ ಯೋಧರು ಮತ್ತು ದೇಶ ರಕ್ಷಣೆಗಾಗಿ ಹುತಾತ್ಮರಾದ ವೀರರ ಕುಟುಂಬದವರನ್ನೂ ಸಹ ಗ್ರಾ.ಪಂ.ಗಳಲ್ಲಿ ಸನ್ಮಾನಿಸಲಾಯಿತು.








