ಮಡಿಕೇರಿ ಆ.15 : ಪ್ರತಿ ಬಡ ಕುಟುಂಬವೂ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಬೇಕು. ಜೊತೆಗೆ ಕುಟುಂಬ ನಿರ್ವಹಣೆಗೆ ಸಹಕಾರಿಯಾಗಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ತಿಳಿಸಿದ್ದಾರೆ.
ಇಂಧನ ಇಲಾಖೆ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ ನಗರದ ಅಂಬೇಡ್ಕರ್ ಭವನದಲ್ಲಿ ‘ಉಚಿತ ಬೆಳಕು, ಸುಸ್ಥಿರ ಬದುಕು’ ಕಾರ್ಯಕ್ರಮದಡಿ ‘ಶೂನ್ಯ ವಿದ್ಯುತ್ ಬಿಲ್ಲು’ ನೀಡುವ ಮೂಲಕ ‘ಗೃಹ ಜ್ಯೋತಿ’ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯ ಮತ್ತು ರಾಷ್ಟ್ರ ಅಭಿವೃದ್ಧಿ ಹೊಂದಲು ಎಲ್ಲಾ ಜಾತಿ, ಉಪ ಜಾತಿ, ಧರ್ಮದ ಜನರ ಜೀವನ ಮಟ್ಟ ಸುಧಾರಣೆ ಕಂಡಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ. ಆ ನಿಟ್ಟಿನಲ್ಲಿ ಬಡ ಜನರ ಕಲ್ಯಾಣಕ್ಕಾಗಿ ಸರ್ಕಾರ 5 ಗ್ಯಾರಂಟಿ ಯೋಜನೆಗಳಲ್ಲಿ 4 ಯೋಜನೆಗಳನ್ನು ಈಗಾಗಲೇ ಕಾರ್ಯರೂಪಗೊಳಿಸಿದೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು.
ಗೃಹಜ್ಯೋತಿ ಯೋಜನೆಯಡಿ ಪ್ರತಿ ಮನೆಗೆ 200 ಯುನಿಟ್ ವರೆಗೆ ಉಚಿತ ವಿದ್ಯುತ್ ನೀಡುವ ಯೋಜನೆಯಾಗಿದ್ದು, ಜಿಲ್ಲೆಯಲ್ಲಿ ಇದುವರೆಗೆ 1.30 ಲಕ್ಷ ಮಂದಿ ಹೆಸರು ನೋಂದಾಯಿಸಿದ್ದು, 2.90 ಕೋಟಿ ರೂ ವನ್ನು ಸರ್ಕಾರ ಭರಿಸಿದೆ ಎಂದು ಸಚಿವರು ಮಾಹಿತಿ ನೀಡಿದರು.
ಗೃಹ ಜ್ಯೋತಿ ಜೊತೆಗೆ ಅನ್ನಭಾಗ್ಯ, ಶಕ್ತಿ, ಗೃಹಲಕ್ಷ್ಮಿ ಹೀಗೆ ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ಸರ್ಕಾರ ವಾರ್ಷಿಕ 60 ಸಾವಿರ ಕೋಟಿ ರೂ ಭರಿಸುತ್ತದೆ. ಡಿಸೆಂಬರ್ ವೇಳೆಗೆ ಎಲ್ಲಾ ಯೋಜನೆಗಳು ಜಾರಿಗೊಳ್ಳಲಿವೆ ಎಂದು ಎನ್.ಎಸ್.ಭೋಸರಾಜು ತಿಳಿಸಿದರು.
ಇಂದಿನ ದಿನನಿತ್ಯ ಬಳಸುವ ವಸ್ತುಗಳ ಬೆಲೆ ಗಗನಕ್ಕೆರಿದ್ದು, ಸಾಧ್ಯವಾದಷ್ಟು ಬಡ ಜನರಿಗೆ ಉತ್ತಮ ಜೀವನ ನಡೆಸಲು ಗ್ಯಾರಂಟಿ ಯೋಜನೆಗಳು ಸಹಕಾರಿ ಆಗಲಿವೆ ಎಂದು ಸಚಿವರು ನುಡಿದರು.
ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಮಾತನಾಡಿ ತಳ ಸಮುದಾಯಗಳ ಜನರನ್ನು ಮೇಲೆತ್ತಲು ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.
ಹಿಂದೆ ಸರ್ಕಾರಿ ಬಸ್‍ಗಳಲ್ಲಿ ಕಡಿಮೆ ಸಂಖ್ಯೆಯಲ್ಲಿ ಜನರು ಪ್ರಯಾಣ ಮಾಡುತ್ತಿದ್ದರು, ‘ಶಕ್ತಿ’ ಯೋಜನೆ ಜಾರಿಗೊಂಡ ನಂತರ ಬಸ್‍ನ ಆಸನಗಳು ಭರ್ತಿಯಾಗಿ ಸಂಚರಿಸುತ್ತಿದ್ದು, ಸರ್ಕಾರಿ ಸಾರಿಗೆ ಸಂಸ್ಥೆ ಮತ್ತಷ್ಟು ಸದೃಢವಾಗುವತ್ತ ಸಾಗಿದೆ ಎಂದು ಎ.ಎಸ್.ಪೊನ್ನಣ್ಣ ವಿವರಿಸಿದರು.
ಅನ್ನಭಾಗ್ಯ ಯೋಜನೆ ಬಗ್ಗೆ ಮಾತನಾಡಿದ ಪೊನ್ನಣ್ಣ ಅವರು ಕೇಂದ್ರ ಆಹಾರ ನಿಗಮವು ‘ಅಕ್ಕಿ’ ನೀಡಲಾಗುವುದು ಎಂದು ಹೇಳಿ ನೀಡಲಿಲ್ಲ, ಆದರೂ ಸರ್ಕಾರ ಹಣ ನೀಡಲು ಮುಂದಾಯಿತು. ಆ ನಿಟ್ಟಿನಲ್ಲಿ ಸರ್ಕಾರ ನುಡಿದಂತೆ ನಡೆದಿದೆ ಎಂದು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹೇಳಿದರು.
ಸರ್ಕಾರದ ಗ್ಯಾರಂಟಿ ಯೋಜನೆಗಳು ಬಡ ಜನರ ಆರ್ಥಿಕ ಸುಧಾರಣೆಗೆ ಸಹಕಾರಿ ಆಗಿದೆ. ಸರ್ಕಾರ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯದಂತೆ ಸಾಮಾಜಿಕ ನ್ಯಾಯದ ತಳಹದಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಂಪತ್ತನ್ನು ಕ್ರೋಡಿಕರಿಸಿ ಎಲ್ಲರಿಗೂ ಹಂಚಿತ್ತಿದೆ ಎಂದರು.
ಇಂದಿನ ಆಧುನಿಕ ವೇಗದ ಬದುಕಿನಲ್ಲಿ ಜಾತಿ, ಮತ, ಪಂಥ, ಧರ್ಮ ಎಂಬುದು ಅಪ್ರಸ್ತುತ ಎಂದರೆ ಅತಿಶಯೋಕ್ತಿಯಲ್ಲ ಎಂದು ಎ.ಎಸ್.ಪೊನ್ನಣ್ಣ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರು ಮಾತನಾಡಿ ಗೃಹ ಜ್ಯೋತಿ ಯೋಜನೆಯಡಿ 1.68 ಲಕ್ಷ ಕುಟುಂಬಗಳ ಗುರಿಯಲ್ಲಿ, 1.29 ಲಕ್ಷ ಕುಟುಂಬಗಳು ಮಾತ್ರ ಹೆಸರು ನೋಂದಾಯಿಸಿದ್ದು, ಬಾಕಿ ಕುಟುಂಬಗಳ ಹೆಸರು ನೋಂದಣಿಗೆ ಕ್ರಮವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಲಹೆ ಮಾಡಿದರು.
ಬಡ ಜನರನ್ನು ಮೇಲೇತ್ತುವುದು ಸರ್ಕಾರದ ಜವಾಬ್ದಾರಿ ಆಗಿದೆ. ಆ ನಿಟ್ಟಿನಲ್ಲಿ ಸರ್ಕಾರ ಬಡವರ ಪರ ಇದೆ. ಗೃಹ ಜ್ಯೋತಿ ಕಾರ್ಯಕ್ರಮದಿಂದ ಯಾವುದೇ ರೀತಿಯ ದುರುಪಯೋಗ ಇಲ್ಲ, 200 ಯುನಿಟ್ ಮೀರಿದ್ದಲ್ಲಿ ವಿದ್ಯುತ್ ಬಿಲ್ಲು ಪಾವತಿಸಬೇಕಾಗುತ್ತದೆ. ಆ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದು ಡಾ.ಮಂತರ್ ಗೌಡ ತಿಳಿಸಿದರು.
ಕೊಡಗು ಸೆಸ್ಕ್ ವಿಭಾಗದಿಂದ 30 ಕ್ಕೂ ಹೆಚ್ಚು ಮಂದಿ ವರ್ಗಾವಣೆಗೆ ಶಿಫಾರಸು ಆಗಿದ್ದು, ಈ ಪ್ರಕ್ರಿಯೆಯನ್ನು ತಡೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಶಾಸಕರು ಮನವಿ ಮಾಡಿದರು.
ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ ಮಾತನಾಡಿ, ಉಚಿತವಾಗಿ ಪಡೆಯುವ ಸೌಲಭ್ಯಗಳನ್ನು ಸರಿಯಾಗಿ ಬಳಸಬೇಕು. ಬೇಕಾಬಿಟ್ಟಿಯಾಗಿ ಬಳಸಿದರೆ, ತಮಗೆ(ಸಾರ್ವಜನಿಕರಿಗೆ) ಹೊರೆ ಎಂಬುದನ್ನು ಮರೆಯಬಾರದು ಎಂದರು.
ಉಚಿತ ಯೋಜನೆ ನೀಡುತ್ತಿರುವುದು ಸಹ ಸಾರ್ವಜನಿಕರ ತೆರಿಗೆ ಹಣ ಎಂಬುದನ್ನು ಮರೆಯಬಾರದು, ಉಚಿತ ಯೋಜನೆಗಳಿಗೆ ಕೆಲವು ನಿರ್ಬಂಧ ಹೇರಬೇಕು ಎಂದು ಅನಿತಾ ಪೂವಯ್ಯ ಅವರು ಸಲಹೆ ಮಾಡಿದರು.
ಎಲ್ಲರೂ ಒಟ್ಟುಗೂಡಿದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂಬುದರಲ್ಲಿ ಎರಡು ಮಾತಿಲ್ಲ ಎಂದು ಅನಿತಾ ಪೂವಯ್ಯ ಅವರು ಅಭಿಪ್ರಾಯಪಟ್ಟರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿ.ಪಂ.ಸಿಇಒ ವರ್ಣಿತ್ ನೇಗಿ, ಅಧೀಕ್ಷಕ ಎಂಜಿನಿಯರ್ ಎಂ.ಕೆ.ಸೋಮಶೇಖರ್, ಸೆಸ್ಕ್ ಇಇ ಅನಿತ ಬಾಯಿ, ಡೀನಾ ಪರ್ಲಕೋಟಿ ಇತರರು ಇದ್ದರು. ಕೃಷ್ಣರಾಜು ಮತ್ತು ತಂಡದವರು ನಾಡಗೀತೆ ಹಾಡಿದರು.









