ವಿರಾಜಪೇಟೆ ಆ.17 : ಭಾರತವು ವಿಭಿನ್ನ ಸಂಸ್ಕೃತಿ, ಆಚಾರ, ವಿಚಾರ, ಪರಂಪರೆಯನ್ನು ಹೊಂದಿರುವ ದೇಶವಾಗಿದೆ ಎಂದು ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ರೆ.ಫಾ.ಐಸಾಕ್ ರತ್ನಕರ್ ಅಭಿಪ್ರಾಯಪಟ್ಟರು.
ಸಂತ ಅನ್ನಮ್ಮ ವಿದ್ಯಾಸಂಸ್ಥೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸ್ವಾತಂತ್ರ್ಯವು ಹಲವಾರು ಜನರ ತ್ಯಾಗ ಬಲಿದಾನಗಳ ಸಂಕೇತವಾಗಿದ್ದು, ನಮ್ಮ ಹಿರಿಯರ ಪರಿಶ್ರಮ ಅದರಲ್ಲಿ ಅಡಗಿದೆ. ಹಿರಿಯರು ಕಷ್ಟಪಟ್ಟು ದೊರಕಿಸಿದ ಸ್ವಾತಂತ್ರ್ಯವನ್ನು ರಾಷ್ಟ್ರದ ಸರ್ವ ಪ್ರಗತಿಗೆ ಬಳಸಿಕೊಳ್ಳುವಂತಾಗಬೇಕೆಂದರು.
ವ್ಯಕ್ತಿ ಸ್ವಾತಂತ್ರ್ಯವು ರಾಷ್ಟ್ರದ ಪ್ರತೀ ಪ್ರಜೆಗೆ ಅಗತ್ಯವಾಗಿದೆ, ನಮ್ಮ ಸಂವಿಧಾನವು ಸಮಾನತೆ, ನ್ಯಾಯ, ಹಕ್ಕುಗಳು, ಕರ್ತವ್ಯಗಳ ತಳಹದಿ ಮೇಲೆ ನಿಂತಿದೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರಜೆಗಳೇ ಶ್ರೇಷ್ಠರು ಎಂದು ತಿಳಿಸಿದರು.
ಮಾಜಿ ಸೈನಿಕ ಹಾಗೂ ಮಡಿಕೇರಿ ನಗರಸಭೆಯ ಅಭಿಯಂತರರಾದ ಹೇಮಕುಮಾರ್ ಮಾತನಾಡಿ, ನಮಗೆ ಸಿಕ್ಕ ಸ್ವಾತಂತ್ರ್ಯವನ್ನು ಬಳಸಿಕೊಂಡು ರಾಷ್ಟ್ರದ ಅಭಿವೃದ್ಧಿಗೆ ಶ್ರಮಿಸಬೇಕು, ಯುವ ಜನರು ಸಾಮಾಜಿಕ ಸಮಸ್ಯೆಗಳ ನಿವಾರಣೆಗೆ ಪಣ ತೊಡಬೇಕು. ಅದೆಷ್ಟೋ ಮಹಾನ್ ಪುರುಷರ ತ್ಯಾಗ ಸ್ವತಂತ್ರ ಭಾರತದಲ್ಲಿ ಅಡಗಿದೆ. ವಿದ್ಯಾರ್ಥಿಗಳು ರಾಷ್ಟ್ರದ ಹಿರಿಮೆಯನ್ನು ಎತ್ತಿ ಹಿಡಿಯಬೇಕೆಂದು ಕಿವಿಮಾತು ಹೇಳಿದರಲ್ಲದೆ ರಾಷ್ಟ್ರೀಯ ಭಾವೈಕ್ಯತೆಗೆ ಎಲ್ಲರೂ ಶ್ರಮಿಸಬೇಕೆಂದರು.
ಈ ಸಂದರ್ಭದಲ್ಲಿ ವಿದ್ಯಾಸಂಸ್ಥೆಯ ಎನ್.ಸಿ.ಸಿ., ಎನ್.ಎಸ್.ಎಸ್, ಗೈಡ್ಸ್, ಪದವಿ ಪೂರ್ವ ತರಗತಿಯ ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ಕಾರ್ಯಕ್ರಮ ನಡೆಯಿತು.
ಪಥ ಸಂಚಲನದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.
ಇದೇ ಸಂದರ್ಭ ಮಡಿಕೇರಿ ನಗರಸಭಾ ಅಭಿಯಂತರರಾದ ಹೇಮಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಹಾಯಕ ಗುರುಗಳಾದ ಫಾ. ಯೇಸು ಪ್ರಸಾದ್, ಪುರಸಭೆ ಸದಸ್ಯರಾದ ಜಲೀಲ್, ಪದವಿ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ, ಪದವಿ ಪೂರ್ವ ಕಾಲೇಜಿನ ಪ್ರಾಶುಪಾಲ ಜೋಮನ್, ಮುಖ್ಯ ಶಿಕ್ಷಕರಾದ ಬೆನ್ನಿ ಜೋಸೆಫ್, ಸಿಸ್ಟರ್ ರೋಸಿ ಡೈಸ, ಸಿಸ್ಟರ್ ಐಡಾ, ಎನ್.ಸಿ.ಸಿ. ಅಧಿಕಾರಿ ಅಬ್ದುಲ್ ಮುನೀರ್ ಉಪಸ್ಥಿತರಿದ್ದರು.
ಶಿಕ್ಷಕಿ ಟೀನಾ ನಿರೂಪಿಸಿ, ಉಪನ್ಯಾಸಕ ಬಿ.ಎನ್. ಶಾಂತಿಭೂಷಣ್ ವಂದಿಸಿದರು.
ವಿದ್ಯಾಸಂಸ್ಥೆಯ ಶಿಕ್ಷಕರು, ಉಪನ್ಯಾಸಕರು, ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.









