ಪೊನ್ನಂಪೇಟೆ, ಆ.17: ದೇಶದ 77ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕೊಂಡಂಗೇರಿಯ ಬುಲ್ಲೆಟ್ ಫ್ರೆಂಡ್ಸ್ ತಂಡದ ಆಶ್ರಯದಲ್ಲಿ ನಡೆದ 5ನೇ ವರ್ಷದ ಜಿಲ್ಲಾ ಮಟ್ಟದ ಕೆಸರುಗದ್ದೆ ಕ್ರೀಡಾಕೂಟದ ಫುಟ್ಬಾಲ್ ಪಂದ್ಯಾವಳಿಯಲ್ಲಿ ಕುಂಜಿಲ ಚಾಲೆಂಜರ್ಸ್ ಮತ್ತು ವಾಲಿಬಾಲ್ ಪಂದ್ಯಾವಳಿಯಲ್ಲಿ ಎಮ್ಮೆಮಾಡಿನ ಆರ್. ವೈ. ಸಿ. ತಂಡ ಚಾಂಪಿಯನ್ ಪಟ್ಟವನ್ನು ಮುಡುಗೇರಿಸಿಕೊಂಡಿತು.
ಕೊಂಡಂಗೇರಿಯ ಅಮ್ಮತಿ ರಸ್ತೆಯಲ್ಲಿರುವ ಡಾ. ಮುಕ್ಕಾಟಿರ ಸಿ. ಕಾರ್ಯಪ್ಪ ಅವರ ಭತ್ತದ ಗದ್ದೆಯಲ್ಲಿ ನಡೆದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಜಿಲ್ಲೆಯ ವಿವಿಧ ಭಾಗಗಳ ಕ್ರೀಡಾಪಟುಗಳು ದಿನವಿಡೀ ಕೆಸರಿನಲ್ಲಿ ಮಿಂದೆದ್ದು, ಕೆಸರುಗದ್ದೆ ಕ್ರೀಡಾಕೂಟವನ್ನು ಮತ್ತಷ್ಟು ರಂಗೇರಿಸುವಲ್ಲಿ ಯಶಸ್ವಿಯಾದರು.
ವಿನ್ನರ್ಸ್ ಪ್ರಶಸ್ತಿ ಪಡೆಯುವ ತವಕದಲ್ಲಿ ಪ್ರಬಲ ಸ್ಪರ್ಧೆಯೊಡ್ಡಿದ ಅತಿಥಿಯ ಕೊಂಡಂಗೇರಿಯ ಬುಲ್ಲೆಟ್ ಫ್ರೆಂಡ್ಸ್ ತಂಡ ಫುಟ್ಬಾಲ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದರೆ, ಬಾಣಂಗಾಲದ ಸಿಗ್ನೇಚರ್ ತಂಡ ವಾಲಿಬಾಲ್ ಪಂದ್ಯಾವಳಿಯಲ್ಲಿ ಎದುರಾಳಿ ತಂಡದೆದುರು ಶರಣಾಗಿ ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಸಂಜೆ ಕತ್ತಲಾಗುವವರೆಗೂ ರೋಚಕವಾಗಿ ನಡೆದ ವಾಲಿಬಾಲ್ ಪಂದ್ಯಾವಳಿಯ ಫೈನಲ್ಸ್ ನಲ್ಲಿ ಮೊದಲ ಸೆಟ್ಟಿನಲ್ಲಿ ಬಾಣಂಗಾಲ ಸಿಗ್ನೇಚರ್ ತಂಡ ಮೇಲುಗೈ ಸಾಧಿಸಿತು. 2ನೇ ಸೆಟಿನಲ್ಲಿ ಜಯಗಳಿಸುವ ಮೂಲಕ ಎಮ್ಮೆಮಾಡು ಆರ್. ವೈ. ಸಿ. ತಂಡ ಸೇಡು ತೀರಿಸಿಕೊಂಡಿತು. ನಂತರ 3ನೇ ಸೆಟ್ಟಿನಲ್ಲಿ ಎಮ್ಮೆಮಾಡು ಆರ್. ವೈ. ಸಿ. ತಂಡ ಮತ್ತೆ ಮೇಲುಗೈ ಸಾಧಿಸಿದ್ದರಿಂದ ವಿಜಯದಮಾಲೆಯನ್ನು ತನ್ನ ಕೊರಳಿಗೇರಿಸಿಕೊಂಡಿತು.
ಇದಕ್ಕೂ ಮೊದಲು ನಡೆದ ಮೊದಲ ಸೆಮಿ ಫೈನಲ್ ನಲ್ಲಿ ಬಾಣಂಗಾಲದ ಸಿಗ್ನೇಚರ್ ತಂಡ ಅತಿಥಿಯ ಕೊಂಡಂಗೇರಿ ಬುಲ್ಲೆಟ್ ಫ್ರೆಂಡ್ಸ್ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿದರೆ, 2ನೇ ಸೆಮಿ ಫೈನಲ್ ನಲ್ಲಿ ಎಮ್ಮೆಮಾಡು ಆರ್. ವೈ. ಸಿ. ತಂಡ ಗುಂಡಿಕೆರೆ ಫ್ರೆಂಡ್ಸ್ ತಂಡವನ್ನು ನೇರಾ ಎರಡು ಸುತ್ತುಗಳಲ್ಲಿ ಸೋಲಿಸಿ ಫೈನಲ್ಸ್ ಗೆ ಅರ್ಹತೆ ಪಡೆದಿತ್ತು.
ಸೇರಿದ್ದ ಅಪಾರ ಸಂಖ್ಯೆಯ ಪ್ರೇಕ್ಷಕರಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಕೆಸರುಗದ್ದೆ ಫುಟ್ಬಾಲ್ ಪಂದ್ಯಾವಳಿಯಲ್ಲಿ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡಿದ ಕುಂಜಿಲ ಚಾಲೆಂಜರ್ಸ್ ತಂಡ ಸಹಜವಾಗಿಯೇ ಚಾಂಪಿಯನ್ ಪಟ್ಟಕ್ಕೇರಿತು. ವಿನ್ನರ್ಸ್ ಪ್ರಶಸ್ತಿ ಪಡೆಯುವ ಕನಸಿನಲ್ಲಿದ್ದ ಅತಿಥಿಯ ಕೊಂಡಂಗೇರಿ ಬುಲ್ಲೆಟ್ ಫ್ರೆಂಡ್ಸ್ ತಂಡ ಎಷ್ಟೇ ಹೋರಾಟ ನಡೆಸಿದರೂ ಎದುರಾಳಿ ತಂಡದ ವಿರುದ್ಧ ಸೋಲೊಪ್ಪಿಕೊಳ್ಳಬೇಕಾಯಿತು.
ಇದಕ್ಕೂ ಮೊದಲು ನಡೆದ ಮೊದಲ ಸೆಮಿಫೈನಲ್ ನಲ್ಲಿ ಕೂಫಾ ಚಾಲೆಂಜರ್ಸ್ ತಂಡವನ್ನು ಮಣಿಸಿ ಕೊಂಡಂಗೇರಿ ಬುಲ್ಲೆಟ್ ಫ್ರೆಂಡ್ಸ್ ತಂಡ ಫೈನಲ್ ಪ್ರವೇಶಿಸಿದರೆ, 2ನೇ ಸೆಮಿ ಫೈನಲ್ ನಲ್ಲಿ ಕುಂಜಿಲ ಸ್ನೇಹ ಫ್ರೆಂಡ್ಸ್ ತಂಡವನ್ನು ಸೋಲಿಸಿ ಕುಂಜಿಲ ಚಾಲೆಂಜರ್ಸ್ ತಂಡ ಅಂತಿಮ ಹಂತದ ಸ್ಪರ್ಧೆಗೆ ಅರ್ಹತೆ ಪಡೆಯಿತು.
ವಾಲಿಬಾಲ್ ಪಂದ್ಯಾವಳಿಯಲ್ಲಿ ಬಾಣಂಗಾಲ ಸಿಗ್ನೇಚರ್ ತಂಡದ ನವೀನ್ ಅತ್ಯುತ್ತಮ ಆಟಗಾರನಾಗಿ ವಿಶೇಷ ಪ್ರಶಸ್ತಿ ಪಡೆದರೆ, ಎಮ್ಮೆಮಾಡು ಆರ್.ವೈ.ಸಿ. ತಂಡದ ಶರೀಫ್ ಅತ್ಯುತ್ತಮ ಡಿಫೆಂಡರ್ ಪ್ರಶಸ್ತಿ ಗಳಿಸಿದರು. ಫುಟ್ಬಾಲ್ ಪಂದ್ಯಾವಳಿಯಲ್ಲಿ ಕೊಂಡಂಗೇರಿ ಬುಲ್ಲೆಟ್ ಫ್ರೆಂಡ್ಸ್ ತಂಡದ ಎಸ್. ಎಂ. ಜಮಾಲ್ ಬೆಸ್ಟ್ ಶೂಟರ್ ಪ್ರಶಸ್ತಿ ಪಡೆದರೆ, ಕುಂಜಿಲ ಚಾಲೆಂಜರ್ಸ್ ತಂಡದ ನಿಜಾಮ್ ಅತ್ಯುತ್ತಮ ಗೋಲ್ ಕೀಪರ್ ಪ್ರಶಸ್ತಿಯನ್ನು ತನ್ನದಾಗಿಸಿದರು.
ಬೆಳಿಗ್ಗೆ ನಡೆದ 3ನೇ ತರಗತಿಯಿಂದ 6ನೇ ತರಗತಿವರೆಗಿನ ಬಾಲಕರ ಓಟದ ಸ್ಪರ್ಧೆಯಲ್ಲಿ ಕೊಂಡಂಗೇರಿಯ ಎ.ಎಸ್.ಸಿ. ಇಂಗ್ಲಿಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿ ಅಫ್ನಾನ್ ಪ್ರಥಮ ಬಹುಮಾನ ಪಡೆದರೆ, ಕೊಂಡಂಗೇರಿ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಆಫ್ರಿದ್ ದ್ವಿತೀಯ ಬಹುಮಾನ ಗಳಿಸಿದರು. 7ರಿಂದ 9ನೇ ತರಗತಿವರೆಗಿನ ಬಾಲಕರ ಓಟದ ಸ್ಪರ್ಧೆಯಲ್ಲಿ ಕೊಂಡಗೇರಿ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಮಿದ್ಲಾಜ್ ಪ್ರಥಮ ಸ್ಥಾನ ಮತ್ತು ಕೊಂಡಂಗೇರಿಯ ಎ.ಎಸ್. ಸಿ. ಇಂಗ್ಲೀಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿ ಅನ್ಸಾದ್ ದ್ವಿತೀಯ ಬಹುಮಾನಗಳಿಸಿದರು.
ಸ್ಥಳಿಯ ಗ್ರಾ.ಪಂ.ಸದಸ್ಯರಾದ ಅಬ್ದುಲ್ ರಹಿಮಾನ್ (ಅಂದಾಯಿ) ಅವರ ಅಧ್ಯಕ್ಷತೆಯಲ್ಲಿ ಸಂಜೆ ನಡೆದ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಪಿ.ಎ.ಹನೀಫ್, ಸಹೋದರತೆಯ ಸಂಕೇತವಾಗಿ ಜರುಗುವ ಕ್ರೀಡಾಕೂಟಗಳು ಕ್ರೀಡಾಪಟುಗಳಲ್ಲಿ ಮತ್ತು ಪ್ರೇಕ್ಷಕರಲ್ಲಿ ಪರಸ್ಪರ ಆತ್ಮೀಯತೆಯನ್ನು ಹೆಚ್ಚಿಸಲು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮಗಳಲ್ಲಿ ಪೊನ್ನಂಪೇಟೆಯ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಧ್ಯಕ್ಷ ಡಾ.ಮುಕ್ಕಾಟಿರ ಸಿ. ಕಾರ್ಯಪ್ಪ, ಹಾಲುಗುಂದ ಗ್ರಾ ಪಂ. ಅಧ್ಯಕ್ಷರಾದ ಪಂದಿಕಂಡ ದಿನೇಶ್ (ಕುಶ), ನಿವೃತ್ತ ಸೇನಾಧಿಕಾರಿ ಕ್ಯಾ. ಮುಕ್ಕಾಟಿರ ಮಾದಪ್ಪ, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಕೋಳುಮಂಡ ರಫೀಕ್, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷರಾದ ಆಲೀರ ಎಂ.ರಶೀದ್ ಕೆದಮುಳ್ಳೂರು ಗ್ರಾ. ಪಂ. ಸದಸ್ಯರಾದ ಎಂ.ಎಂ. ಇಸ್ಮಾಯಿಲ್, ಬೈರಂಬಾಡದ ಕಾಫಿ ಬೆಳಗಾರರಾದ ಮುಕ್ಕಾಟಿರ ನಂದ, ಕೊಂಡಂಗೇರಿ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಎ.ಎಂ. ಅಬ್ದುಲ್ಲಾ, ನಿವೃತ್ತ ಸೈನಿಕರಾದ ಕೆ.ಎಂ. ಮೊಹಮ್ಮದ್, ಕೊಂಡಂಗೇರಿ ವಲಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಪಿ.ಎಚ್. ಝಕರಿಯಾ, ದೈಹಿಕ ಶಿಕ್ಷಕರಾದ ಪಿ. ಎ.ಮುಜೀಬ್ ಮೊದಲಾದವರು ಪಾಲ್ಗೊಂಡು ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು. ಕಾರ್ಯಕ್ರಮದ ಆಯೋಜಕರಾದ ಶಾಮೀರ್, ಹನೀಫ್, ರಫೀಕ್ ಮೊದಲದವರು ಉಪಸ್ಥಿತರಿದ್ದರು. ಸಲಾಂ ವೀಕ್ಷಕ ವಿವರಣೆ ನೀಡಿದರು.