ಮಡಿಕೇರಿ ಆ.17 : ಸೋಮವಾರಪೇಟೆ ಅರಣ್ಯ ವಲಯ ವ್ಯಾಪ್ತಿಗೆ ಬರುವ ಗರ್ವಾಲೆ, ಸೂರ್ಲಬ್ಬಿ, ಮಂಕ್ಯ ಗ್ರಾಮ ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆ ಆ.19 ಮತ್ತು 20 ರಂದು ನಡೆಯಲಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಇಲಾಖೆ ಮನವಿ ಮಾಡಿದೆ.
ಸೋಮವಾರಪೇಟೆ ಚಲಯ ಅರಣ್ಯಾಧಿಕಾರಿ ಚೇತನ್ ಹೆಚ್.ಪಿ. ಅವರು ನೀಡಿರುವ ಪ್ರಕಟಣೆಯಲ್ಲಿ, ಗರ್ವಾಲೆ, ಸೂರ್ಲಬ್ಬಿ, ಮಂಕ್ಯ ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳು ಬೀಡು ಬಿಟ್ಟು, ಕೃಷಿ ಹಾನಿಗೆ ಕಾರಣವಾಗುತ್ತಿವೆ. ಈ ಹಿನ್ನೆಲೆ ಕಾರ್ಯಾಚರಣೆ ಹಮ್ಮಿಕೊಳ್ಳಲಾಗುತ್ತಿದೆಯೆಂದು ತಿಳಿಸಿದ್ದಾರೆ.
ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಲು ಸೂರ್ಲಬ್ಬಿ, ಮಂಕ್ಯ, ತಾಕೇರಿ, ಕಿರಗಂದೂರು, ಕಾಜೂರು ಮಾರ್ಗವಾಗಿ ಕಾರ್ಯಾಚರಣೆ ನಡೆಸಲಾಗುತ್ತದೆ. ಈ ಹಿನ್ನೆಲೆ ಗ್ರಾಮಸ್ಥರು, ತೋಟ ಮಾಲೀಕರು ತಮ್ಮ ತೋಟ ಮತ್ತು ಜಮೀನಿನ ಕೆಲಸ ಕಾರ್ಯಗಳನ್ನು ನಿಲ್ಲಿಸುವಂತೆ ಹಾಗೂ ಶಾಲಾ ಮಕ್ಕಳು, ಗ್ರಾಮೀಣರು ಕಾರ್ಯಾಚರಣೆೆಯ ದಿನಗಳಲ್ಲಿ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದಾರೆ.










