ವಿರಾಜಪೇಟೆ ಆ.18 : ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಕೊಡಗು ಪ್ರೆಸ್‌ಕ್ಲಬ್ ಹಾಗೂ ಪ್ರೆಸ್ ಕ್ಲಬ್ ಬೆಳ್ಳಿ ಹಬ್ಬ ಆಚರಣಾ ಸಮಿತಿ ಸಹಯೋಗದಲ್ಲಿ ಕೊಡಗು ಪ್ರೆಸ್‌ಕ್ಲಬ್ ಬೆಳ್ಳಿ ಮಹೋತ್ಸವ ಅಂಗವಾಗಿ ಅರಮೇರಿ ಗ್ರಾಮದ ವಕೀಲ ಪೂಳಂಡ ವಿನು ಪೆಮ್ಮಯ್ಯ ಅವರ ಗದ್ದೆಯಲ್ಲಿ ಆಯೋಜಿಸಿದ್ದ ಪತ್ರಕರ್ತರ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಜಿಲ್ಲೆಯ ಪತ್ರಕರ್ತರು ಕೆಸರಿನಲ್ಲಿ ಮಿಂದೆದ್ದರು.
ಓಟ, ಹ್ಯಾಂಡ್‌ಬಾಲ್, ಹಗ್ಗಜಗ್ಗಾಟ ಕ್ರೀಡೆಯಲ್ಲಿ ಪಾಲ್ಗೊಂಡು ಮನಸ್ಸು, ದೇಹ ಹಗುರ ಮಾಡಿಕೊಂಡರು. ಸುಮಾರು 10 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದವು. ದಿವಾಕರ್ ಬೋಜಪ್ಪ ನೇತೃತ್ವದ ಜಾಕಿ ಬಾಯ್ಸ್ ತಂಡವು ಹ್ಯಾಂಡ್‌ಬಾಲ್ ಹಾಗೂ ಹಗ್ಗಜಗ್ಗಾಟ ಸ್ಪರ್ಧೆಗಳಲ್ಲಿ ದ್ವಿತೀಯ ಸ್ಥಾನ ಗಿಟ್ಟಿಸಿಕೊಂಡು ಸಾಧನೆ ಮಾಡಿತು.
ವಿಜೇತರು : ಹ್ಯಾಂಡ್‌ಬಾಲ್ ಸ್ಪರ್ಧೆಯಲ್ಲಿ ಇಸ್ಮಾಯಿಲ್ ಕಂಡಕೆರೆ ನೇತೃತ್ವದ ನಾಟಿ ಬಾಯ್ಸ್ ತಂಡ ಪ್ರಥಮ, ದಿವಾಕರ್ ಬೋಜಪ್ಪ ನೇತೃತ್ವದ ಜಾಕಿ ಬಾಯ್ಸ್ ತಂಡ ದ್ವಿತೀಯ, ಹಗ್ಗಜಗ್ಗಾಟದಲ್ಲಿ ಸಂತೋಷ್ ರೈ ನೇತೃತ್ವದ ಮಣ್ಣಿನ ಮಕ್ಕಳು ತಂಡ ಪ್ರಥಮ, ಜಾಕಿ ಬಾಯ್ಸ್ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. 40 ವರ್ಷದೊಳಗಿನ ಓಟ ಸ್ಪರ್ಧೆಯಲ್ಲಿ ಇಸ್ಮಾಯಿಲ್ ಕಂಡಕೆರೆ ಪ್ರಥಮ, ಆದರ್ಶ್ ಅದ್ಕಲೇಗರ್ ದ್ವಿತೀಯ, ನವೀನ್ ಡಿಸೋಜಾ ತೃತೀಯ, 40 ವರ್ಷ ಮೇಲ್ಪಟ್ಟವರ ಓಟ ವಿಭಾಗದಲ್ಲಿ ಗೋಪಾಲ್ ಸೋಮಯ್ಯ ಪ್ರಥಮ, ಅಜ್ಜಮಾಡ ರಮೇಶ್ ಕುಟ್ಟಪ್ಪ ದ್ವಿತೀಯ, ಪಳೆಯಂಡ ಪಾರ್ಥ ಚಿಣ್ಣಪ್ಪ ತೃತೀಯ ಬಹುಮಾನ ಪಡೆದರು.
ತೀರ್ಪುಗಾರರಾಗಿ ತಿಮ್ಮಯ್ಯ, ವಿಕ್ಕಿ ಕಾರ್ಯನಿರ್ವಹಿಸಿದರು. ಸ್ಥಳೀಯ ಕೃಷಿಕರಾದ ಮನು, ಅರುಣ್ ಅಯ್ಯಪ್ಪ ಸಹಕಾರ ನೀಡಿ ಪ್ರೋತ್ಸಾಹಿಸಿದರು.
ಸಮಾರೋಪ : ವಿರಾಜಪೇಟೆ ಲಿಟ್ಸ್ ಸ್ಕಾರ‍್ಸ್ ಅಕಾಡೆಮಿ ವ್ಯವಸ್ಥಾಪಕ ನಿರ್ದೇಶಕಿ ಪೂಜ ಸಜೇಶ್ ಬಹುಮನ ವಿತರಿಸಿ ಮಾತನಾಡಿ, ಕೆಸರಿನಿಂದ ಸಾಕಷ್ಟು ದೈಹಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಹೆಚ್ಚಾಗುತ್ತಿದೆ. ದೇಹಕ್ಕೆ ಮಣ್ಣಿನ ಸ್ಪರ್ಶದ ಪ್ರಯೋಜನ ಅರಿತು ಸಾಕಷ್ಟು ಚಿಕಿತ್ಸೆ ಕೂಡ ದೊರೆಯುತ್ತಿದೆ. ವೃತ್ತಿಯ ನಡುವೆ ಪತ್ರಕರ್ತರ ಉತ್ಸಾಹ ಮೆಚ್ಚುವಂತ ವಿಚಾರವಾಗಿದೆ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷೆ ಬಿ. ಆರ್. ಸವಿತಾರೈ, ಕೊಡಗು ಪ್ರೆಸ್‌ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಉದ್ಯಮಿ ಬಿ. ಬಿ. ಚುಪ್ಪಾ ನಾಗರಾಜ್, ಸಮಾಜ ಸೇವಕ ಬೊಳ್ಯಪಂಡ ಜೆ. ಬೋಪಣ್ಣ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಟಿ. ಎನ್. ಮಂಜುನಾಥ್, ಪ್ರ. ಕಾರ್ಯದರ್ಶಿ ಬಾಚರಣಿಯಂಡ ಅನು ಕಾರ್ಯಪ್ಪ, ಪ್ರೆಸ್‌ಕ್ಲಬ್ ಪ್ರ. ಕಾರ್ಯದರ್ಶಿ ರೆಜಿತ್‌ಕುಮಾರ್ ಗುಹ್ಯ, ಕಾರ್ಯಕ್ರಮ ಸಂಚಾಲಕ ಪಳೆಯಂಡ ಪಾರ್ಥ ಚಿಣ್ಣಪ್ಪ, ಸಹ ಸಂಚಾಲಕ ಡಾ. ಎಂ. ಎನ್. ಹೇಮಂತ್‌ಕುಮಾರ್ ಇದ್ದರು. ಎಂ. ಎಂ. ಚನ್ನನಾಯಕ ಪ್ರಾರ್ಥಿಸಿದರು. ಕಿಶೋರ್‌ರೈ ಕತ್ತಲೆಕಾಡು ನಿರೂಪಿಸಿದರು.