ಮಡಿಕೇರಿ ಆ.18 : ದ್ವಿತೀಯ ಪಿಯುಸಿ 2ನೇ ಪೂರಕ ಪರೀಕ್ಷೆಯು ಆ.21 ರಿಂದ ಸೆ.2 ರವರೆಗೆ ನಡೆಯಲಿದ್ದು, ಪರೀಕ್ಷಾ ಕೇಂದ್ರಕ್ಕೆ ನಿಯೋಜಿಸುವ ಅಧಿಕಾರಿ ವರ್ಗದವರು ಅನಗತ್ಯ ಕಾರಣಗಳಿಂದ ತಮ್ಮ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡದೆ ಪರೀಕ್ಷೆ ಮುಗಿಯುವ ವರೆಗೂ ದಿನದ 24 ಗಂಟೆಯು ಸಹ ಆನ್ ನಲ್ಲಿ ಇಡುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ದ್ವಿತೀಯ ಪಿಯುಸಿ 2ನೇ ಪೂರಕ ಪರೀಕ್ಷೆ ಸಂಬಂಧ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪರೀಕ್ಷಾ ಸಮಯದಲ್ಲಿ ಯಾವುದೇ ರೀತಿಯ ಅವ್ಯವಹಾರಗಳಿಗೆ ಅವಕಾಶ ಕೊಡದೆ ಪರೀಕ್ಷಾ ಪಾವಿತ್ರತೆಯನ್ನು ಕಾಪಾಡುವಂತೆ ಹಾಗೂ ಗುಣಮಟ್ಟದ ಪರೀಕ್ಷೆ ನಡೆಸಲು ಅವರು ತಿಳಿಸಿದರು.
ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ರೀತಿಯ ವ್ಯವಸ್ಥೆಯನ್ನು ಕಲ್ಪಿಸಬೇಕು. ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಹಾಗೂ ಪರೀಕ್ಷಾ ಕೊಠಡಿಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ಅವುಗಳು ಚಲನೆಯಲ್ಲಿವೆಯೇ ಎಂದು ಪರೀಕ್ಷಿಸಬೇಕು ಹಾಗೂ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆಪತ್ರಿಕೆ ಹಾಗೂ ಉತ್ತರ ಪತ್ರಿಕೆಯನ್ನು ಕೊಂಡೊಯ್ಯುವ ವಾಹನಗಳಿಗೆ ಜಿಪಿಎಸ್ ಕಡ್ಡಾಯವಾಗಿ ಅಳವಡಿಕೆ ಮಾಡಬೇಕು. ಅದರ ರೂಟ್ ಮ್ಯಾಪ್ ಪರೀಕ್ಷಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಪರೀಕ್ಷೆ ನಡೆಯುವ ಕೇಂದ್ರದ ಸುತ್ತ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶ ಎಂದು ಘೋಷಿಸಲಾಗುವುದು. ಪರೀಕ್ಷಾ ಕೇಂದ್ರದ ಸುತ್ತಮುತ್ತ ಇರುವ ಜೆರಾಕ್ಸ್, ಕಂಪ್ಯೂಟರ್ ಅಂಗಡಿಗಳನ್ನು ಮುಚ್ಚಬೇಕು ಹಾಗೂ ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಪುರುಷ ಪೊಲೀಸ್ ಪೇದೆ ಜೊತೆಗೆ ಮಹಿಳಾ ಪೊಲೀಸ್ ಪೇದೆಯನ್ನು ಸಹ ನೇಮಿಸಬೇಕು ಮತ್ತು ಪರೀಕ್ಷಾ ಕೇಂದ್ರಕ್ಕೆ ನರ್ಸ್‍ಗಳನ್ನು ನೇಮಿಸುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಪುಟ್ಟರಾಜು ಅವರು ಮಾಹಿತಿ ನೀಡಿ ಜಿಲ್ಲೆಯಲ್ಲಿ ಒಟ್ಟು 12 ದಿನಗಳು ಪರೀಕ್ಷೆ ನಡೆಯಲಿದ್ದು, 3 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದರು.
ಮಡಿಕೇರಿಯ ಸರ್ಕಾರಿ ಪದವಿ ಪೂರ್ವ ಕಾಲೇಜು, ಸೋಮವಾರಪೇಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ವಿರಾಜಪೇಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪರೀಕ್ಷೆ ನಡೆಯಲಿದ್ದು ಒಟ್ಟಾರೆ ಜಿಲ್ಲೆಯ 651 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಮೊಬೈಲ್ ಬಳಕೆ, ಕೈಗಡಿಯಾರ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳನ್ನು ಕೊಂಡೊಯ್ಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಉಪ ವಿಭಾಗಾಧಿಕಾರಿ ಡಾ.ಯತೀಶ್ ಉಲ್ಲಾಳ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸತೀಶ್ ಕುಮಾರ್, ಮಡಿಕೇರಿ ತಹಶೀಲ್ದಾರ್ ಪಿ.ಸಿ.ಪ್ರವೀಣ್ ಕುಮಾರ್, ಜಿಲ್ಲಾ ಖಜಾನೆಯ ಉಪ ನಿರ್ದೇಶಕರಾದ ಪದ್ಮಜಾ, ಪೊಲೀಸ್ ವೃತ್ತ ನಿರೀಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮಾರ್ಗಧಿಕಾರಿಗಳು, ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಹಾಗೂ ಇತರರು ಪಾಲ್ಗೊಂಡಿದ್ದರು.